Advertisement

ದೊಡ್ಡವರ ಸಣ್ಣತನ ಬೆತ್ತಲೆಗೊಳಿಸಿದ್ದ ಧೀಮಂತ

11:09 AM Mar 17, 2020 | Suhan S |

ಹುಬ್ಬಳ್ಳಿ: ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ಧಕ್ಕೆಯಾದಾಗ ಹೋರಾಟದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದವರು ಪತ್ರಿಕಾರಂಗದ ಭೀಷ್ಮ ನಾಡೋಜ ಡಾ| ಪಾಟೀಲ ಪುಟ್ಟಪ್ಪ. ಕನ್ನಡ ಕಾವಲು ಸಮಿತಿಯ ವಿಶ್ರಾಂತ ಅಧ್ಯಕ್ಷ. 6 ದಶಕಗಳ ಹಿಂದೆಯೇ ಕನ್ನಡಿಗರ ಮನೆ-ಮನ ತಲುಪಿದ “ಪ್ರಪಂಚ’ದ ಪಾಪು. 70 ವರ್ಷಗಳ ಹಿಂದೆಯೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶಾಸ್ತ್ರೋಕ್ತವಾಗಿ ಪತ್ರಿಕೋದ್ಯಮ ಕಲಿತ ಮೊದಲ ಕನ್ನಡಿಗರೆಂಬ ಹೆಗ್ಗಳಿಕೆ ಅವರದು.

Advertisement

1921, ಜ.14ರ ಸಂಕ್ರಮಣದಂದು ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಪುಟ್ಟಪ್ಪ ಜನಿಸಿದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷ್‌ ಅಧ್ಯಾಪಕರಿಗೆ ಬಲವಂತವಾಗಿ ಟೋಪಿ ಹಾಕಿದ ಕಾರಣಕ್ಕೆ ಕಾಲೇಜಿನಿಂದ ಹೊರ ಹಾಕಲ್ಪಟ್ಟರು. ಧಾರವಾಡದ ಮುರುಘಾ ಮಠದಲ್ಲಿದ್ದುಕೊಂಡು ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿದರೆ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮಾಡಿದರು. 1949ರಲ್ಲಿ ಅಮೆರಿಕದ ಕಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂಎಫ್‌ಪಿ ಪದವಿ ಪಡೆದರು.

ಪ್ರಪಂಚ ಪತ್ರಿಕೆಯ ಸಂಪಾದಕ, ಅಂಕಣಕಾರ, ವ್ಯಕ್ತಿಚಿತ್ರಕಾರರಾಗಿದ್ದರು. ದೊಡ್ಡವರೆನಿಸಿಕೊಂಡವರ ಸಣ್ಣತನ ಬೆತ್ತಲೆಗೊಳಿಸಿ, ಸಣ್ಣವ ರೆನಿಸಿಕೊಂಡವರ ದೊಡ್ಡ ಗುಣಗಳ ಬಗ್ಗೆ ಹೆಮ್ಮೆಯಿಂದ ಚಿತ್ರಿಸುತ್ತಿದ್ದರು. ದಿನಕ್ಕೆ 10-12 ಗಂಟೆ ಬರೆಯುತ್ತಿದ್ದರಲ್ಲದೇ ನೂರಾರು ಜನ ಪತ್ರಕರ್ತರನ್ನು ಬರೆಯಲು ಪ್ರೇರೇಪಿಸಿ ಬೆಳೆಸಿದರು. ಅವರ ಗರಡಿಯಲ್ಲಿ ಪಳಗಿದ ನೂರಾರು ಪತ್ರಕರ್ತರು ಪ್ರಸಿದ್ಧರಾಗಿ, ಸಂಪಾದಕರಾಗಿ, ಸಾಹಿತಿಗಳಾಗಿ, ಸಮಾಜ ಸೇವಕರಾಗಿ, ರಾಜಕಾರಣಿಗಳಾಗಿ ರೂಪುಗೊಂಡಿದ್ದಾರೆ. ಪುಟ್ಟಪ್ಪ ಅವರು ನಡೆದಾಡುವ ವಿಶ್ವಕೋಶವಿದ್ದಂತೆ.

ಅವರಲ್ಲಿ ಒಂದು ವಿಶ್ವವಿದ್ಯಾಲಯದ ಭಂಡಾರವೇ ಕಾಣುತ್ತಿತ್ತು. ಯಾವುದಾದರೂ ಒಂದು ವಿಷಯದ ಕುರಿತು ಮಾತನಾಡಿದರೆ ವಿಶ್ವವಿದ್ಯಾಲಯದ ಉಪನ್ಯಾಸ ಆಲಿಸಿದಂತೆ ಭಾಸವಾಗುತ್ತಿತ್ತು. ಪುಟ್ಟಪ್ಪ ಅವರ ಬದುಕು ಒಂದು ತೆರೆದಿಟ್ಟ ಪುಸ್ತಕವಿದ್ದಂತೆ. ದಿನಾಂಕ, ಸಮಯ, ವ್ಯಕ್ತಿ, ಪರಿಚಯ ಎಲ್ಲವನ್ನೂ ಗ್ರಹಿಸುವ ಹಾಗೂ ನಿಖರವಾಗಿ ಉಲ್ಲೇಖೀಸುವ ಅವರ ಬುದ್ಧಿಮತ್ತೆ ಅವಿಸ್ಮರಣೀಯ. ಅವರ ಮಾತು ಹಾಗೂ ಬದುಕು ಎರಡೂ ಒಂದೇ ಆಗಿತ್ತು. 1962ರಿಂದ 1974ರವರೆಗೆ 2 ಬಾರಿ ಪಾಪು ರಾಜ್ಯಸಭಾ ಸದಸ್ಯರಾಗಿದ್ದರು. ಪಾಟೀಲ ಪುಟ್ಟಪ್ಪ ಚರ್ಚೆ ಆರಂಭಿಸಿದರೆಂದರೆ ಜವಾಹರಲಾಲ್‌ ನೆಹರು ಕೂಡ ಏಕಾಗ್ರತೆಯಿಂದ ಆಲಿಸುತ್ತಿದ್ದರು. ಇತರ ಸದಸ್ಯರು ಪಾಪು ಚರ್ಚೆಯನ್ನು ಶಾಲಾ ಮಕ್ಕಳಂತೆ ಕೇಳುತ್ತಿದ್ದರು.

ಕಥೆಗಾರರಾಗಿ ಪಾಪು: ಸಾವಿನ ಮೇಜವಾನಿ (1944), ಶಿಲಾಬಾಲಿಕೆ ನುಡಿದಳು (1977), ಗವಾಕ್ಷ ತೆರೆಯಿತು (1977), ಪಾಪು ಸಮಗ್ರ ಕಥೆಗಳು (2000) ಇವರ ಪ್ರಮುಖ ಕಥಾ ಸಂಕಲನಗಳು. ಅವರ ಕಥೆಗಳಲ್ಲಿ ಪ್ರಮುಖವಾಗಿ ಸಾವು, ಸಾಮಾಜಿಕ ಚಿಂತನೆ, ಸ್ತ್ರೀ ಪರ ಕಾಳಜಿ, ಜನಪರ ಧೋರಣೆ, ಪ್ರಗತಿನಿಷ್ಠ ಆಲೋಚನೆ, ಸಾಂಸಾರಿಕ, ರಾಜಕೀಯ ಬಿಕ್ಕಟ್ಟು, ಹೋರಾಟ, ರಾಷ್ಟ್ರಭಕ್ತಿ, ನಿತ್ಯ ಬದುಕಿನ ಜಂಜಾಟ, ದ್ವೇಷ, ಅಸೂಯೆ, ಆದರ್ಶಗಳು, ಸಂಕೀರ್ಣತೆ, ಮಾನವತಾವಾದ, ಜೀವನಾನುಭವದ ಮೊದಲಾದ ಸಂಗತಿಗಳನ್ನು ಧಾರಾಳವಾಗಿರುತ್ತಿದ್ದವು. ಇವರ ಹೆಚ್ಚಿನ ಕಥೆಗಳು ಪ್ರಗತಿಶೀಲ ಧೋರಣೆಗೆ ಪ್ರತೀಕವಾಗಿವೆ.

Advertisement

1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ಪತ್ರಿಕೋದ್ಯಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ| ಪಾಟೀಲ ಪುಟ್ಟಪ್ಪ ಆಯ್ಕೆಯಾಗಿದ್ದರು. ಅಲ್ಲದೇ 2003ರಲ್ಲಿ ಬೆಳಗಾವಿಯಲ್ಲಿ ಜರುಗಿದ 70ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಹೋರಾಟದ ಕೆಚ್ಚು: ನೈಋತ್ಯ ರೈಲ್ವೆ ವಲಯ ಕೇಂದ್ರ ಕಚೇರಿ ಹುಬ್ಬಳ್ಳಿಗೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ನಡೆದ ಹೋರಾಟದ ನೇತೃತ್ವ ವಹಿಸಿದ್ದ ಡಾ|ಪಾಟೀಲ ಪುಟ್ಟಪ್ಪ 2001ರಲ್ಲಿ ರೈಲು ರೋಖೋದಲ್ಲಿ ಪ್ರಮುಖ ಪಾತ್ರ ವಹಿಸಿದರು. ಹುಬ್ಬಳ್ಳಿ ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದ್ದ ರೈಲು ಎಂಜಿನ್‌ ಮುಂದೆ ನಿಂತು ಪ್ರತಿಭಟನೆ ನಡೆಸಿದರು. ಅವರೊಂದಿಗೆ ಪ್ರತಿಭಟನೆಯಲ್ಲಿ ಹೆಚ್ಚು ಜನರಿರದಿದ್ದರೂ ಎದೆಗುಂದದೇ ರೈಲ್ವೆ ಅಧಿಕಾರಿಗಳ ಮನವಿಗೆ ಸ್ಪಂದಿಸದೇ ರೈಲು ಹೊರಡುವುದನ್ನು ತಡೆದರು. ಇದರಿಂದ ರಾಜ್ಯದಲ್ಲಿ ರೈಲ್ವೆ ಇಲಾಖೆ ಸ್ತಬ್ಧಗೊಂಡಿತು.

ಪಾಪು ಬರೆದ ಬರಹಗಳು, ಅವರ ಕವಿತೆಗಳು, ಅಸಂಖ್ಯ ಪುಟಗಳಲ್ಲಿ ಸ್ಫುಟವಾಗಿ ಅಕ್ಷರಗಳಲ್ಲಿ ಅವರ ಅನುಭಾವ ಅಮೃತಮಯವಾಗಿದೆ. ಸರಳ-ಸುಂದರ ಬದುಕು ಪಾರದರ್ಶಕವಾಗಿದೆ. ಜೀವನದಲ್ಲಿ ಕಷ್ಟಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿದ ಧೀಮಂತ. ಸದಾ ಖಾದಿಧಾರಿಯಾಗಿರುವ ಪಾಪು ನಮ್ಮ ನಾಡಿನ ರಾಯಭಾರಿ. ನಾಡಿನಲ್ಲಿ ನಡೆದ ಜನಪರ ಚಳವಳಿ, ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ. ಮಹಾಜನ್‌ ವರದಿ ಹೋರಾಟ, ಕಾಸರಗೋಡು ಹೋರಾಟ, ಗೋವಾ ವಿಮುಕ್ತಿ, ರೈತ ಹೋರಾಟಗಳಲ್ಲಿ ಸಾಕ್ಷಿಪ್ರಜ್ಞೆಯಿಂದ ಪಾಲ್ಗೊಂಡರು.

“ಮಗನಂಥಾ ಚಾಲಕ ಅಪ್ಪನಂಥಾ ಪಾಪು’ : ಪಾಪು ಇಹಲೋಕ ತ್ಯಜಿಸಿದ ವಿಷಯ ತಿಳಿದ ಅವರ ಕಾರಿನ ಚಾಲಕ ಹಾಗೂ ಸಾಕು ಮಗನಂತಿದ್ದ ಸೈಯದ್‌ಅಲಿ ನರೇಗಲ್ಲ ದುಃಖದಲ್ಲಿ ಮುಳುಗಿದ್ದರು. ಕಳೆದ ಸುಮಾರು 25 ವರ್ಷಗಳ ಕಾಲ ಕಾರಿನ ಚಾಲಕನಾಗಿ ಅದಕ್ಕಿಂತಲೂ ಮೇಲಾಗಿ ಮಗನಂತೆ ಪಾಪು ಅವರ ಸೇವೆ ಮಾಡಿದ್ದರು. “ಮಗನಂಥಾ ಚಾಲಕ ಅಪ್ಪನಂಥಾ ಪಾಪು’ ಎಂದು ಇವರಿಬ್ಬರ ಅನ್ಯೋನ್ಯತೆ ಬಗ್ಗೆ ಜನ ಮಾತನಾಡುತ್ತಿದ್ದರು. ಸೈಯದ್‌ ಕಿಮ್ಸ್‌ನ ಗೋಡೆಗೆ ಒರಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಎಂತಹವರ ಕರಳು ಹಿಂಡುವಂತಿತ್ತು. ಇಷ್ಟೊಂದು ವರ್ಷಗಳ ಕಾಲ ಮಹಾನ್‌ ಚೇತನ ಪಾಪು ಅವರ ಸೇವೆ ಮಾಡಲು ದೊರಕಿದ್ದು ನನ್ನ ಪುಣ್ಯ ಎಂದು ಸೈಯದ್‌ ಗದ್ಗದಿತರಾದರು.

 

­-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next