Advertisement
ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಮೀಥೈಲ್ ಐಸೋಸಯನೈಡ್ ರಾಸಾಯನಿಕ ಸೋರಿಕೆಯಾಗಿ ನೂರಾರ ಜನ ಪ್ರಾಣತೆತ್ತಿದ್ದರು. ಈ ದುರಂತದಿಂದ ಸಾವಿರಾರು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಂದಿಗೂ ಲಕ್ಷಾಂತರ ಜನ ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ವರುಷಗಟ್ಟಲೆ ಈ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದ ರಾಜೀವ್ ಸಿಟ್ಟಿಗೆದ್ದು ಇವರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲೆಂದೇ 1992ರಲ್ಲಿ ಡಾ.ಬನ್ವಾರಿಲಾಲ್ ಶರ್ಮಾ ಮತ್ತು ಪ್ರೊ. ಧರ್ಮಪಾಲ್ ಮಾರ್ಗದರ್ಶನದಲ್ಲಿ ಆಜಾದಿ ಬಚಾವೋ ಆಂದೋಲನ ಪ್ರಾರಂಭಿಸಿದರು. ಈ ಆಂದೋಲನದ ಮೂಲಕ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಭಾರತದಿಂದ ಒಧ್ದೋಡಿಸಲಾಯಿತು.
Related Articles
Advertisement
ಹಾಗೆಂದು ರಾಜೀವ್ ದೀಕ್ಷಿತ್ ಆಧುನಿಕತೆಯ, ಕೈಗಾರಿಕೀಕರಣದ ಅಥವಾ ಅಭಿವೃದ್ಧಿಯ ವಿರೋಧಿಯಾಗಿದ್ದರು ಎಂದಲ್ಲ. ಅವರು ನಮ್ಮ ಪಾರಂಪರಿಕ ದೇಶೀ ಜ್ಞಾನ ಹಾಗೂ ಕೃಷಿ ಜ್ಞಾನದ ಸಂರಕ್ಷಣೆಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರು. ಸಾಬೂನು, ಉಪ್ಪಿನಕಾಯಿ, ಟೊಮೊಟೋ ಗೊಜ್ಜು, ಗೊಜ್ಜವಲಕ್ಕಿ, ಹಲ್ಲುಜ್ಜುವ ಪೇಸ್ಟ್, ಹಾಲು, ಸಣ್ಣ ಪುಟ್ಟ ಔಷಧಗಳು, ಚಾಕಲೇಟ್, ಬಿಸ್ಕತ್ತು, ಚಟ್ನಿ, ಕಾಫಿ, ಜಾಮು, ಆಲೂಗಡ್ಡೆ ಚಿಪ್ಸು, ಆಟದ ಸಾಮಾನುಗಳು. ಸಣ್ಣ ಪುಟ್ಟ ಒಳ ಉಡುಪುಗಳು, ಇವನ್ನು ತಯಾರಿಸಲೂ ನಮಗೆ ಯೋಗ್ಯತೆ ಇಲ್ಲವಾ? ನಮ್ಮದೇ ಬಂಡವಾಳದಿಂದ ಯಾವುದೇ ತಾಂತ್ರಿಕತೆ ಇಲ್ಲದೆ ನಮ್ಮದೇ ಸಂಪನ್ಮೂಲ ಬಳಸಿ ಫ್ರಾಂಚೈಸಿ ಅಥವಾ ಉಪಗುತ್ತಿಗೆಯ ಆಧಾರದ ಮೇಲೆ ಇಲ್ಲಿ ಬಂದು ದೋಚುವ ಬಹುರಾಷ್ಟ್ರೀಯ ಕಂಪನಿಗಳಿಗೆ ನಾವೇಕೆ ಮಣೆ ಹಾಕಬೇಕು ಎಂದು ಅವರು ಪ್ರಶ್ನಿಸುತ್ತಿದ್ದರು.
ರಾಜೀವ್ ದೀಕ್ಷಿತ್ ಗತಿಸಿ ಇಂದಿಗೆ 12 ವರ್ಷಗಳಾದವು. ವಿಪರ್ಯಾಸವೆಂದರೆ ರಾಜೀವ್ ತಾವು ಹುಟ್ಟಿದ ದಿನವೇ ( 30-11-1967) ಛತ್ತೀಸ್‌ಘಡದ ಬಿಲಾಯ್‌ನಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ವಿಧಿವಶರಾದರು(30-11-2010). ಬಹು ರಾಷ್ಟ್ರೀಯ ಕಂಪನಿಗಳ ಹಾಗೂ ಅಂದಿನ ಯುಪಿಎ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಜೀವ್ ದೀಕ್ಷಿತ್ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆ ಸತ್ಯಗಳು ಅವರೊಂದಿಗೇ ಇತಿಹಾಸ ಸೇರಿಬಿಟ್ಟವು.
ನಾವೂ ಸಹ ಅವರೊಂದಿಗೆ ಸ್ವದೇಶಿ ಸಂಸ್ಕೃತಿ ಮತ್ತು ಚಿಂತನೆಗೆ ತಿಲಾಂಜಲಿ ಇತ್ತಿದ್ದೇವೆ. ಚೀನಾದೊಂದಿಗಿನ ಡೊಕ್ಲಾಮ್ ಸಂಘರ್ಷದ ನಂತರವೂ ನಾವು ನಿರಾಳವಾಗಿ, ಯಾವುದೇ ಮುಜಗರ, ನಾಚಿಕೆ ಇಲ್ಲದೆ ಚೀನಾ ವಸ್ತುಗಳನ್ನೇ ಕೊಳ್ಳುವುದನ್ನು ಮುಂದುವರೆಸಿದ್ದೇವೆ. ಚಪ್ಪಲಿಯಿಂದ ಹಿಡಿದು, ಧರಿಸುವ ಬಟ್ಟೆ, ಕೈ ಗಡಿಯಾರ, ಮೊಬೈಲ್, ಕಣ್ಣಿಗೆ ಹಾಕುವ ಕನ್ನಡದವರೆಗೆ ಎಲ್ಲಾ ನಮಗೆ ವಿದೇಶಿ ವಸ್ತುಗಳೇ ಬೇಕು. ನಾವು ತಿನ್ನಲು ವಿದೇಶಿ ಪಿಜ್ಜಾ, ಬರ್ಗರ್ ಬೇಕು, ಕುಡಿಯಲು ಕೋಕೋ ಕೋಲಾ ಬೇಕು. ಮನರಂಜನೆಗೆ ವಿ-ಚಾನಲ್, ಎಂ-ಚಾನಲ್‌ಗಳೇ ಬೇಕು, ಮೋಜು ಮಸ್ತಿಗೆ ಪಾಶ್ಚಾತ್ಯ Raap, ರಾಕ್ ಸಂಗೀತ ಬೇಕು, ರಾಜೀವ್‌ರಂತಹ ದೇಶಭಕ್ತರ ಸೊಲ್ಲೂ ಎತ್ತದ ಮೆಕಾಲೆ ಸಿದ್ಧಾಂತಗಳ ಪ್ರಣೀತ ಶಿಕ್ಷಣವೇ ಬೇಕು, ಎಂಎನ್‌ಸಿಗಳಲ್ಲೇ ಉದ್ಯೋಗ ಬೇಕು, ಅವಕಾಶ ಸಿಕ್ಕಿದರೆ ಹೊರದೇಶಕ್ಕೆ ಹಾರಬೇಕು. ಇದು ಸಾಲದೆಂಬಂತೆ ನಮ್ಮ ಪರಂಪರೆಯನ್ನೇ ಜರಿಯುವ ಪರಕೀಯ ಪ್ರೇತಗಳನ್ನೂ ಕೆಲವರು ಆಹ್ವಾನಿಸಿಕೊಳ್ಳುತ್ತಾರೆ. ಇದು ನಮ್ಮ ಮನಸ್ಥಿತಿ. ಮೇಕ್ ಇನ್ ಇಂಡಿಯಾ, ನೋಟ್ಯಂತರ, ಜಿಎಸ್‌ಟಿ, ಚೀನಾ ಮೇಲೆ ವಹಿವಾಟು ನಿರ್ಬಂಧ ಹೇರುವ ಮೂಲಕ ಮೋದಿ ಸರ್ಕಾರ ರಾಜೀವ್ ದೀಕ್ಷಿತ್ ಅವರ ಹಲವು ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ಸಾರ್ಥಕ ಪ್ರಯತ್ನ ಮಾಡಿದೆ.
ತುರುವೇಕೆರೆ ಪ್ರಸಾದ್