Advertisement

ಯೂಟರ್ನ್…ಲಬುಶೇನ್ ಕ್ರಿಕೆಟ್ ಅಂಗಳಕ್ಕೆ ಕಾಲಿಡುವಂತೆ ಮಾಡಿದ್ದು ಬದಲಿ ಆಟಗಾರನ ಸ್ಥಾನ!

09:50 AM Dec 24, 2019 | Team Udayavani |

ಕ್ರಿಡಾ ಕ್ಷೇತ್ರದಲ್ಲಿ ಸಿಕ್ಕ ಒಂದು ಅವಕಾಶದಿಂದ ಆಗಸದೆತ್ತರಕ್ಕೆ ಬೆಳೆದ ಅದೆಷ್ಟೋ ಕ್ರೀಡಾಪಟುಗಳನ್ನು ನಾವು ಕಂಡಿದ್ದೇವೆ. ಅಂಥವರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಗೊಂಡಿದೆ. ಅದು ಯಾರೆಂದರೆ ಆಸ್ಟ್ರೇಲಿಯಾದ ಮಾರ್ನಸ್‌ ಲಬುಶೇನ್‌.

Advertisement

ಅದು ಪ್ರತಿಷ್ಠಿತ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದ ಆಟ. ಇಂಗ್ಲೆಂಡ್‌ನ‌ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಹಣಾಹಣಿ. ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್‌ 267 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಅದಾಗಲೇ 19 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಕಾಂಗರೂ ಪಡೆಗೆ ಗಾಯದ ಮೇಲೆ ಬರೆ ಎಂಬಂತೆ ಜೋಫ್ರಾ ಆರ್ಚರ್‌ 77ನೇ ಓವರ್‌ನಲ್ಲಿ ಎಸೆದ ಬೌನ್ಸರ್‌  ಸ್ಮಿತ್‌ ಅವರ ಕುತ್ತಿಗೆಗೆ ಬಡಿದು ಸ್ಮಿತ್‌ ಕ್ರೀಸ್‌ನಲ್ಲಿಯೇ  ಕುಸಿದು ಬಿದ್ದಿದ್ದರು. ಈ ವೇಳೆ ಬದಲಿಯಾಗಿ ಕಣಕ್ಕಿಳಿದವರೇ 25 ವರ್ಷದ ಮಾರ್ನಸ್‌ ಲಬುಶೇನ್‌. ಟೆಸ್ಟ್‌ ಕ್ರಿಕೆಟ್‌ನಲ್ಲಿ 142 ವರ್ಷಗಳ ಇತಿಹಾಸದಲ್ಲಿ ಕಂಕಷನ್‌ (ಗಾಯಗೊಂಡವರ ಬದಲಿಗೆ ಆಟಗಾರ ಕಣಕ್ಕೆ ಇಳಿಯುವ ನಿಯಮ) ಕಾರಣದಿಂದ ಆದ ಮೊದಲ ಪರ್ಯಾಯ ನಿದರ್ಶನ ಇದಾಗಿದೆ.

ಜೊಫ್ರಾ ಆರ್ಚರ್‌ ಬೆಂಕಿಯುಗುಳುವ ಬೌನ್ಸರ್, ಜಾಕ್‌ ಲೀಚ್‌ ಅವರ ಸ್ಪಿನ್‌ ಕೈಚಳಕಗಳಿಗೆ ತಕ್ಕ ಉತ್ತರ ನೀಡತೊಡಗಿದರು ಈ ಯುವ ಆಟಗಾರ. ಲಬುಶೇನ್‌ ಅವರನ್ನೂ ಜೊಫ್ರಾ ಬೌನ್ಸರ್‌ ಎಸೆತವೊಂದರ ಮೂಲಕ ಅಪಾಯಕ್ಕೆ ದೂಡಿದ್ದರು. ಆದರೆ ಎದೆಗುಂದದ ಅವರು ಅರ್ಧಶತಕವನ್ನು ಗಳಿಸಿ ಆಸ್ಟ್ರೇಲಿಯಾದ ಇನ್ನಿಂಗ್ಸ್‌ಗೆ ಜೀವ ತುಂಬಿದರು. ಅಂತಿಮವಾಗಿ 59 ರನ್‌ ಗಳಿಸಿ ಔಟಾದರೂ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರು ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ 154 ರನ್‌ ಗಳಿಸಿ ದಿನದಾಟ ಮತ್ತು ಪಂದ್ಯಕ್ಕೆ ಅಂತ್ಯ ಹಾಡಿತ್ತು. ಆ ಇನ್ನಿಂಗ್ಸ್‌ನಲ್ಲಿ  ತಂಡದ ಪರ ಗರಿಷ್ಠ ರನ್‌ ಕಲೆಹಾಕಿದ ಲಬುಶೇನ್‌ ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದರು.

ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಎರಡನೇ ಪಂದ್ಯ ಗೆದ್ದು ಸಮಬಲ ಸಾಧಿಸುವ ಜೊ ರೂಟ್‌ ಪಡೆಯ ಕನಸು ಕಮರಿತ್ತು. ಸರಣಿಯ ನಾಲ್ಕನೇ ಟೆಸ್ಟ್‌ ಮೊದಲ ನ್ನಿಂಗ್ಸ್‌ನಲ್ಲಿ 67 ರನ್‌ ದಾಖಲಿಸುವ ಮೂಲಕ ಲಬುಶೇನ್‌, ಆ್ಯಷಸ್‌ ಟೆಸ್‌ ಸರಣಿಯಲ್ಲಿ ತಾನಾಡಿದ ನಾಲ್ಕು ನ್ನಿಂಗ್ಸ್‌ಗಳಲ್ಲಿ  ಸತತ ನಾಲ್ಕು ಅರ್ಧಶತಕಗಳನ್ನು ಹೊಡೆದ ನಾಲ್ಕನೇ ಆಟಗಾರ ಎನಿಸಿಕೊಂಡರು.

Advertisement

ಏಕದಿನ ತಂಡದಲ್ಲೂ ಸ್ಥಾನ

ಟೆಸ್ಟ್‌ ನಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಲಬುಶೇನ್‌ಗೆ ಇದೀಗ ಆಸೀಸ್‌ ಏಕದಿನ ತಂಡದಲ್ಲೂ ಸ್ಥಾನ ಲಭಿಸಿದೆ. ಅದರಂತೆ ಮುಂದಿನ ವರ್ಷಾರಂಭದಲ್ಲಿ ಭಾರತ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಲಬುಶೇನ್ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ ಲಬುಶೇನ್‌ ಪಾಲಿಗೆ ಜೋಫ್ರಾ ಆರ್ಚರ್‌ ಎಸೆದ ಒಂದು ಬೌನ್ಸರ್‌ ಕ್ರಿಕೆಟ್‌ ಅಂಗಳಕ್ಕೆ ಕಾಲಿಡುವಂತೆ ಮಾಡಿದ್ದು ಸುಳ್ಳಲ್ಲ.

ದಕ್ಷಿಣ ಆಫ್ರಿಕಾದವರು

1994 ಜೂನ್‌ 22ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಲಬುಶೇನ್‌ ಅವರ ಕುಟುಂಬ 2004ರಲ್ಲಿ  ಆಸ್ಟ್ರೇಲಿಯಾಕ್ಕೆ ವಲಸೆ ಬಂದಿತ್ತು. 2014-15ರ ಸಾಲಿನಲ್ಲಿ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಕ್ವೀನ್‌ ಲ್ಯಾಂಡ್ ಪರ ಆರಂಭಿಕನಾಗಿ ಕಣಕ್ಕಿಳಿದ ಅವರು 83 ರನ್‌ ಗಳಿಸಿ ತಾನಾಡಿದ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಸ್ಮರಣೀಯವಾಗಿರಿಸಿದ್ದರು. 2018ರ ಅಕ್ಟೋಬರ್‌ 7ರಂದು ಪಾಕಿಸ್ತಾನ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸೊನ್ನೆ ಸುತ್ತಿದರೂ ಸರಣಿಯಲ್ಲಿ ಏಳು ವಿಕೆಟ್‌ ಕಿತ್ತು ತಮ್ಮ ಆಲ್‌ರೌಂಡರ್‌ ಸಾಮರ್ಥ್ಯ ಪ್ರಚುರಪಡಿಸಿದ್ದರು. ಬಲಗೈ ಲೆಗ್‌ ಬ್ರೇಕ್‌ ಅವರ ಬೌಲಿಂಗ್‌ ಶೈಲಿ. ಈ ವರ್ಷದ ಎಪ್ರಿಲ್‌ನಲ್ಲಿ  ಗ್ಲಾಮರ್ಗನ್‌ ಕಂಟ್ರಿ ಕ್ಲಬ್‌ ಪರ ಸಹಿ ಹಾಕಿದ ಲಬುಶೇನ್‌ ತಾನಾಡಿದ ಪ್ರಥಮ ದರ್ಜೆಯ ಮೊದಲ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಶತಕ ಹೊಡೆದು ಮಿಂಚಿದ್ದಾರೆ. ಜುಲೈ 2ಕ್ಕೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಪೂರೈಸಿದ ಅವರು 2019ರ ಋತುವಿನಲ್ಲಿ ಆ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎನಿಸಿಕೊಂಡರು. ಇದೇ ನವೆಂಬರ್‌  23ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 185 ರನ್‌ ಗಳಿಸಿರುವ ಲಬುಶೇನ್‌ ಟೆಸ್ಟ್‌ನಲ್ಲಿ ಚೊಚ್ಚಲ ಶತಕದ ಬಾರಿಸಿ ಸಂಭ್ರಮ ಆಚರಿಸಿಕೊಂಡರು. ಲಬುಶೇನ್‌ ಇದೇ ಲಯವನ್ನು ಕಾಯ್ದುಕೊಂಡು ಮುನ್ನುಗ್ಗಿದರೆ ವಿಶ್ವ ಕ್ರಿಕೆಟ್ ನಲ್ಲಿ ದಿಗ್ಗಜರ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ದಿನಗಳು ದೂರವಿಲ್ಲ.

ಅಭಿ

Advertisement

Udayavani is now on Telegram. Click here to join our channel and stay updated with the latest news.

Next