ಅದು ಮೀರತ್ ನ ವಿಕ್ಟೋರಿಯಾ ಪಾರ್ಕ್ ಮೈದಾನ. ಟೀಂ ಇಂಡಿಯಾ ಪ್ರಖ್ಯಾತ ವೇಗಿ ಚೆಂಡನ್ನು ಕೈಗೆತ್ತಿಕೊಂಡಿದ್ದರು. ಎದುರಿಗೆ ಬ್ಯಾಟಿಂಗ್ ಮಾಡುತ್ತಿದ್ದಿದ್ದು ಇನ್ನೂ 15 ವರ್ಷದ ಬಾಲಕ. ಆ ವೇಗಿ ಬೌಲಿಂಗ್ ಮಾಡಲು ಬರುತ್ತಿದ್ದಂತೆ ಬಾಲಕ ಕ್ರೀಸ್ ನಿಂದ ಎರಡು ಯಾರ್ಡ್ ಎದುರು ಬಂದು ನಿಂತಿದ್ದ. ಇದನ್ನು ಗಮನಿಸಿದ ಕೋಚ್ ಸಂಜಯ್ ರಸ್ತೋಗಿ ವೇಗಿಯನ್ನು ತಡೆದರು. ಬಾಲಕನಿಗೆ ಕ್ರೀಸ್ ನಲ್ಲಿ ನಿಲ್ಲುವಂತೆ ಸೂಚಿಸಿದರು. ವೇಗಿ ಮತ್ತೆ ಬಾಲ್ ಹಾಕಲು ಓಡಿ ಬಂದರು, ಬಾಲಕ ಮತ್ತೆ ಎರಡು ಯಾರ್ಡ್ ಎದುರು ಬಂದು ನಿಂತ! ಈ ಬಾರಿ ಕೋಚ್ ತಡೆಯಲಿಲ್ಲ. ವೇಗಿಯ ಸ್ವಿಂಗ್ ಬಾಲನ್ನು ಸುಲಭವಾಗಿ, ಯಾವುದೇ ಅಳುಕಿಲ್ಲದೆ ಬಾಲಕ ಎದುರಿಸಿದ!
ಅಂದು ವಿಕ್ಟೋರಿಯಾ ಪಾರ್ಕ್ ನಲ್ಲಿ ಬೌಲಿಂಗ್ ನಡೆಸಿದ್ದು ಅದೇ ಮೈದಾನದಲ್ಲಿ ಆಡಿ ಬೆಳೆದ ಭುವನೇಶ್ವರ್ ಕುಮಾರ್. ಆತನ ಬೌಲಿಂಗ್ ಎದುರಿಸಿದ್ದು ಕಳೆದ ಬಾರಿ ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕನಾಗಿದ್ದ, ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಪ್ರಿಯಂ ಗರ್ಗ್.
ಮೀರತ್ ನಿಂದ ಸುಮಾರು 25 ಕಿ.ಮೀ ದೂರದ ಪರೀಕ್ಷಿತ್ ಗಢ್ ಎಂಬ ಊರಿನಲ್ಲಿ ಜನಿಸಿದ ಪ್ರಿಯಂ ಗರ್ಗ್ ಗೆ ಮೂವರು ಸಹೋದರರು, ಮೂವರು ಸಹೋದರಿಯರು. ತನ್ನ ಆರನೇ ವಯಸ್ಸಿನಲ್ಲೇ ಪ್ರಿಯಂ ಗಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದಿದ್ದ. ಮಗ ದೊಡ್ಡ ಕ್ರಿಕೆಟರ್ ಆಗಬೇಕು ಎಂಬುವುದು ತಾಯಿ ಕನಸಾಗಿತ್ತು. ಆದರೆ ಪ್ರಿಯಂ ಗೆ 11 ವರ್ಷವಾಗಿದ್ದಾಗಲೇ ತಾಯಿ ನಿಧನರಾಗಿದ್ದರು.
ಬಡತನದಲ್ಲಿದ್ದ ತಂದೆ ನರೇಶ್ ತಾಯಿ ಇಲ್ಲದ ಮಕ್ಕಳನ್ನು ಬೆಳೆಸಲು ಬಹಳಷ್ಟು ಕಷ್ಟ ಪಟ್ಟಿದ್ದರು. ಸಣ್ಣ ಸಣ್ಣ ವ್ಯಾಪಾರ ಮಾಡುತ್ತಿದ್ದರು. ಹಾಲು ಮಾರಾಟ, ಮನೆ ಮನೆಗೆ ಪೇಪರ್ ಹಾಕುವುದು ಹೀಗೆ ವ್ಯಾಪಾರ ಮಾಡುತ್ತಾ, ಶಾಲಾ ಮಕ್ಕಳ ವ್ಯಾನ್ ಗೆ ಚಾಲಕನಾಗಿಯೂ ದುಡಿಯುತ್ತಿದ್ದರು. ಸದ್ಯ ಸ್ವಂತ ವ್ಯಾನ್ ಖರೀದಿಸಿರುವ ಅವರು ಈಗಲೂ ಶಾಲಾವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಅದು 2011. ಕ್ರಿಕೆಟ್ ಲೋಕದ ಮಹಾ ಉತ್ಸವ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿತ್ತು. ದಿಗ್ಗಜ ಆಟಗಾರರ ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದು ಕೋಟ್ಯಾಂತರ ಅಭಿಮಾನಿಗಳ ಕನಸಾಗಿತ್ತು. ಮ್ಯಾಚ್ ನೋಡುವ ಆಸೆಯಿದ್ದ ಪ್ರಿಯಂ ಗೆ ಮನೆಯಲ್ಲಿ ಟಿವಿ ಸೌಕರ್ಯವಿರಲಿಲ್ಲ. ಹೀಗಾಗಿ ಮನೆ ಬಳಿಯಿದ್ದ ಪಾನ್ ಶಾಪ್ ನ ಸಣ್ಣ ಟಿವಿಯಲ್ಲಿ ಪ್ರಿಯಂ ಮ್ಯಾಚ್ ನೋಡುತ್ತಿದ್ದ. ಕೊನೆಯ ವಿಶ್ವಕಪ್ ಆಡುತ್ತಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರನ್ನು ಕಂಡಾಗ ಪ್ರಿಯಂ ಗೆ ಏನೋ ಪುಳಕ, ಸಚಿನ್ ರಂತೆ ನಾನು ಕೂಡಾ ಟೀಂ ಇಂಡಿಯಾಗೆ ಆಡಬೇಕು, ಒಮ್ಮೆಯಾದರೂ ಸಚಿನ್ ತೆಂಡೂಲ್ಕರ್ ರನ್ನು ಭೇಟಿಯಾಗಬೇಕು ಎಂದು ಆಸೆ ಪಟ್ಟಿದ್ದ.
ಬಡತನವಿದ್ದರೂ ಮಗನ ಆಸೆಗೆ ತಂದೆ ಪ್ರೋತ್ಸಾಹ ನೀಡಿದ್ದರು. ಮೀರತ್ ನ ವಿಕ್ಟೋರಿಯಾ ಪಾರ್ಕ್ ನಲ್ಲಿ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದ ಸಂಜಯ್ ರಸ್ತೋಗಿಯ ಬಳಿ ಮಗನನ್ನು ಕರೆತಂದಿದ್ದರು. ಭಾರತದ ಕಂಡ ಶ್ರೇಷ್ಠ ಸ್ವಿಂಗ್ ಬೌಲರ್ ಗಳಾದ ಪ್ರವೀಣ್ ಕುಮಾರ್ ಮತ್ತು ಭುವನೇಶ್ವರ್ ಕುಮಾರ್ ಬೆಳಿದದ್ದು, ಇದೇ ರಸ್ತೋಗಿ ಗರಡಿಯಲ್ಲಿ.
ರಸ್ತೋಗಿ ತರಬೇತಿಯಲ್ಲಿ ಬೆಳೆದ ಪ್ರಿಯಂ ದೊಡ್ಡ ದೊಡ್ಡ ಇನ್ನಿಂಗ್ಸ್ ಆಡುತ್ತಾ ಗಮನ ಸೆಳೆಯತ್ತಿದ್ದ. ವಯೋಮಿತಿ ತಂಡದ ಸದಸ್ಯನಾದ ಗರ್ಗ್ ಉತ್ತರ ಪ್ರದೇಶ ರಾಜ್ಯದ ಪರ ಆಡುವ ಅವಕಾಶ ಪಡೆದ. 2018ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 67.83ರ ಸರಾಸರಿಯಲ್ಲಿ 814 ರನ್ ಬಾರಿಸಿದ. ಇದರಲ್ಲಿ ಒಂದು ದ್ವಿಶತಕವೂ ಸೇರಿತ್ತು. ದೇವಧರ್ ಟ್ರೋಫಿಯಲ್ಲಿ ಇಂಡಿಯಾ ಸಿ ಪರ ಸ್ಥಾನ ಪಡೆದ ಪ್ರಿಯಂ ಫೈನಲ್ ನಲ್ಲಿ 77 ರನ್ ಬಾರಿಸಿ ಆಯ್ಕೆಗಾರರ ಗಮನ ಸೆಳೆದಿದ್ದ.
ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕನಾದ ಪ್ರಿಯಂ ಗರ್ಗ್ ತಂಡವನ್ನು ಫೈನಲ್ ವರೆಗೂ ತಲುಪಿಸಿದ್ದ. ತಂಡ ಫೈನಲ್ ನಲ್ಲಿ ಸೋತರು ಭಾರತೀಯ ಬಾಲಕರು ವಿಶ್ವ ಕ್ರಿಕೆಟ್ ನಲ್ಲಿ ಸದ್ದು ಮಾಡಿದ್ದರು. ಇದರ ಬೆನ್ನಲ್ಲೇ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾದ ಗರ್ಗ್ ಸದ್ಯ ತಂಡದ ಖಾಯಂ ಸದಸ್ಯನಾಗಿದ್ದಾರೆ.