ಆಕೆಗಿನ್ನೂ 15 ವರ್ಷ. ಭಾರತದಲ್ಲಿ ಸಾಮಾನ್ಯವಾಗಿ ಈ ಪ್ರಾಯದ ಮಕ್ಕಳು 9 ಅಥವಾ 10ನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಆದರೆ ಈಕೆ ಬ್ಯಾಟ್ ಹಿಡಿದು ವೆಸ್ಟ್ ಇಂಡೀಸ್ ನ ಗ್ರಾಸ್ ಐಲೆಟ್ ಅಂಗಳದಲ್ಲಿ ನಿಂತಿದ್ದಳು. ಮರುದಿನ ವಿಶ್ವದಾದ್ಯಂತ ಪತ್ರಿಕೆಗಳ ಹೆಡ್ ಲೈನ್ ಗಳಲ್ಲಿ ಇವಳೇ ಇದ್ದಳು. ಯಾಕೆಂದರೆ ಇವಳು ಆಗಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 30ವರ್ಷ ಹಿಂದೆ ಮಾಡಿದ್ದ ದಾಖಲೆಯನ್ನು ಮುರಿದಿದ್ದಳು.
ಈಕೆ ಶಫಾಲಿ ವರ್ಮಾ. ಈಗ 16 ವರ್ಷ. ಹರ್ಯಾಣದ ರೋಹ್ಟಕ್ ಹುಡುಗಿ. ತಂದೆಗೆ ಜ್ಯುವೆಲ್ಲರಿ ಶಾಪ್. ಬಾಯ್ ಕಟ್ ಮಾಡಿಕೊಂಡಿರುವ ಶಫಾಲಿ ನೋಡಲು ಮಾತ್ರವಲ್ಲದೆ ಈಕೆಯ ಕ್ರಿಕೆಟ್ ಶಾಟ್ ಗಳು ಕೂಡ ಹುಡುಗರಂತೆಯೇ ಪವರ್ ಫುಲ್.
ಅದು 2013. ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತನ್ನ ಜೀವನದ ಅಂತಿಮ ರಣಜಿ ಪಂದ್ಯವಾಡಲು ಹರ್ಯಾಣದ ಲಹ್ಲಿಗೆ ಬರುತ್ತಾರೆ. ಆ ಪಂದ್ಯ ನೋಡಲು ಪುಟ್ಟ ಹುಡುಗಿ ಶಫಾಲಿಯೂ ತಂದೆಯ ಜೊತೆ ಹೋಗುತ್ತಾಳೆ. ಆ ಪಂದ್ಯದಲ್ಲಿ ಸಚಿನ್ ಅಜೇಯ 79 ರನ್ ಬಾರಿಸಿ ಮುಂಬೈ ಜಯದ ರೂವಾರಿಯಾಗಿದ್ದರು. ಕ್ರಿಕೆಟ್ ದೇವರನ್ನು ನೋಡಿದ್ದ ಈಕೆಯ ಮನಸ್ಸಿನಲ್ಲಿ ಒಂದು ವಿಷಯ ಅಚ್ಚೋತ್ತಿತ್ತು. ತಾನು ಒಂದು ದಿನ ಇಂತಹ ದಾಖಲೆಗಳನ್ನು ಮಾಡಬೇಕೆಂದು ಅಂದೇ ನಿಶ್ಚಯಿಸಿದ್ದಳು. ಮುಂದಿನದು ಇತಿಹಾಸ.
ಸ್ವತಃ ಸ್ಥಳೀಯ ಕ್ರಿಕೆಟ್ ಆಟಗಾರನಾಗಿದ್ದ ತಂದೆ ಶಫಾಲಿಗೆ ಮೊದಲು ಕ್ರಿಕೆಟ್ ನ ಆರಂಭಿಕ ಪಾಠ ಮಾಡುತ್ತಾರೆ. ನಂತರ ಅಕಾಡೆಮಿಯಲ್ಲಿ ತರಬೇತಿ ಕೊಡಬೇಕೆಂದರೆ ರೋಹ್ಟಕ್ ನ ಯಾವುದೇ ಅಕಾಡಮಿ ಹುಡುಗಿಗೆ ಕ್ರಿಕೆಟ್ ಕಲಿಸಲು ಮುಂದೆ ಬರುವುದಿಲ್ಲ. ಬಹಳ ಹುಡುಕಾಟದ ನಂತರ ಒಂದು ಅಕಾಡಮಿಗೆ ಶಫಾಲಿ ಸೇರುತ್ತಾಳೆ. ಇದಕ್ಕಾಗಿ ಈ ಎಳೆಯ ಹುಡುಗಿ ದಿನಾ ಎಂಟು ಕಿ.ಮೀ ಸೈಕಲ್ ತುಳಿಯಬೇಕಿತ್ತು. ಶಫಾಲಿ ಅಕಾಡೆಮಿಯಲ್ಲಿ ಹುಡುಗರ ಜೊತೆ ಆಡಬೇಕಿತ್ತು. ಇದೂ ಒಂದು ಸಮಸ್ಯೆಯಾಗಿತ್ತು.
ಹುಡುಗರ ಜೊತೆ ಅಂದು ನಾನು ಆಡಿದ್ದಕ್ಕೆ ಇಷ್ಟು ಬೇಗ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತಾಗಿದೆ ಎನ್ನುತ್ತಾರೆ ಶಫಾಲಿ. ತನಗಿಂತ ಜಾಸ್ತಿ ಪ್ರಾಯದ ಹುಡುಗರ ವೇಗದ ಎಸೆತಗಳನ್ನು ಶಫಾಲಿ ಲೀಲಾಜಾಲವಾಗಿ ಎದುರಿಸುತ್ತಿದ್ದಳು. ಬಾಯ್ ಕಟ್ ಮಾಡಿದ ಕಾರಣ ಹುಡುಗರಂತೆ ಕಾಣುತ್ತಿದ್ದ ಈಕೆ ಹಲವು ಕೂಟಗಳಲ್ಲಿ ತನ್ನ ಅಣ್ಣನ ಹೆಸರಿನಲ್ಲಿ ಹುಡುಗನಾಗಿ ಆಡುತ್ತಿದ್ದಳು. ಅಷ್ಟೇ ಅಲ್ಲದೇ ಅಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಳು.
ಮುನ್ನುಗ್ಗಿ ಹೊಡೆಯುವುದು ಶಫಾಲಿಯ ಶೈಲಿ. ಈ ಆಟದಿಂದಲೇ ಹರ್ಯಾಣ ರಾಜ್ಯ ತಂಡದಲ್ಲಿ ಯಶಸ್ಸು ಪಡೆದಳು. ರಾಜ್ಯದ ಪರ ಆರು ಶತಕ ಮೂರು ಅರ್ಧ ಶತಕ ಬಾರಿಸಿದ ಶಫಾಲಿ 1923 ರನ್ ಗಳಿಸಿ ಟೀಂ ಇಂಡಿಯಾಗೆ ಆಯ್ಕೆಯಾದಳು. ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ಈಕೆ ವಿಂಡೀಸ್ ವಿರುದ್ಧ ಅರ್ಧ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ 30 ವರ್ಷದ ಹಿಂದೆ ಮಾಡಿದ್ದ ದಾಖಲೆಯನ್ನು ಮುರಿದಳು.
ಸದ್ಯ ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಟ್ ಬೀಸುತ್ತಿರುವ ಈಕೆ ವಿಶ್ವ ರಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾಳೆ. ಸಾಧನೆಗೆ ಯಾವುದೂ ಅಡ್ಡಿಯಿಲ್ಲ ಎಂದು ತೋರಿಸಿದ ಹುಡುಗಿ ವಿಶ್ವಕಪ್ ಗೆದ್ದು ತರಲಿ ಎನ್ನುವುದು ನಮ್ಮ ಹಾರೈಕೆ.
– ಕೀರ್ತನ್ ಶೆಟ್ಟಿ ಬೋಳ