Advertisement
ಬ್ಯೂರೋಕ್ರಸಿ ಹಿಂದೆ ಹೋದಾಗ
Related Articles
Advertisement
ಅನುಭವದ ಜ್ಞಾನೋದಯ
ಅನುಭವ ಬಲಿತಂತೆ “ನಾವು ಅಧಿಕಾರಿಗಳ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ, ಕುಳಿತಲ್ಲಿಂದಲೇ ನ್ಯಾಯವನ್ನು ಪಡೆದುಕೊಳ್ಳಬಹುದು’ ಎಂದು ಸಂಜೀವರಿಗೆ ಜ್ಞಾನೋದಯವಾಯಿತು. ಆಗ ಎಂಡೋಸಲ್ಫಾನ್ ತೊಂದರೆ ಶುರುವಾಗಿತ್ತು. ಎಂಡೋ ದುರಂತದಿಂದ ಕಣ್ಣು ಕಳೆದುಕೊಂಡು ಶಿಕ್ಷಕನಾಗಬೇಕೆಂಬ ಹಂಬಲದಿಂದ ದೂರ ಉಳಿಯಬೇಕಾಗಿ ಬಂದರೂ ಶ್ರೀಧರ ಗೌಡರು ಮಾಡಿದ ಹೋರಾಟ ಸಂಜೀವರಿಗೆ ಪ್ರೇರಣೆಯಾಯಿತು. ಆರಂಭದಲ್ಲಿ ಎಂಡೋ ಸಮಸ್ಯೆ ಇದ್ದುದು ಕೊಕ್ಕಡ, ಪಟ್ರಮೆ, ನಿಡ್ಲೆಯಲ್ಲಿ ಮಾತ್ರ. ಆಗ ಸಂಜೀವರು ಮಾನವ ಹಕ್ಕು ಆಯೋಗ, ರಾಜ್ಯಪಾಲರೇ ಮೊದಲಾದವರಿಗೆ ದೂರು ಸಲ್ಲಿಸಿದರು. ಶೋಭಾ ಕರಂದ್ಲಾಜೆಯವರು ಸ್ಥಳಕ್ಕೆ ಬಂದು ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. 231 ಕುಟುಂಬಗಳಿಗೆ ತಲಾ 50,000 ರೂ. ಪರಿಹಾರ ಸಿಕ್ಕಿತ್ತು. 2005ರಲ್ಲಿ ಮಾಹಿತಿ ಹಕ್ಕು ಕಾಯಿದೆ ಬಂತು. 2009ರಲ್ಲಿ ಎಲ್ಲೆಲ್ಲಿ ಕೆಸಿಡಿಸಿಯವರು ಎಂಡೋಸಲ್ಫಾನ್ ದ್ರಾವಣವನ್ನು ಸಿಂಪಡಿಸಿದ್ದಾರೆಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದರು. ಆಗ 92 ಗ್ರಾಮಗಳಲ್ಲಿ ದ್ರಾವಣ ಸಿಂಪಡಿಸಿದ್ದಾರೆಂದು ಗೊತ್ತಾಯಿತು. 1980ರಲ್ಲಿಯೇ ಪತ್ರಿಕಾ ಪ್ರಕಟನೆ ನೀಡಿ ಸಿಂಪಡಿಸಿದ 10 ದಿನಗಳ ಕಾಲ ಆ ಗೇರು ತೋಟಕ್ಕೆ ಹೋಗಬಾರದೆಂದು ಕಂಪೆನಿ ತಿಳಿಸಿತ್ತು ಎನ್ನುವುದನ್ನು ಸಂಜೀವ ತಿಳಿದುಕೊಂಡರು. ಒಂದು ಸಮಸ್ಯೆ ಕುರಿತು ಇಷ್ಟು ಆಳಕ್ಕೆ ಹೋಗಬೇಕಾದರೆ ಅದು ಪರಿಶ್ರಮವನ್ನು ಬೇಡುತ್ತದೆ ಎಂಬ ನೀತಿ ನಮಗೆ ಸಿಗುತ್ತದೆ.
ಸಿರಿವಂತರಿಗೂ ಬಡವನ ನೆರವು
ವೈವಾಹಿಕ ಸಮಸ್ಯೆಯೂ ಸೇರಿದಂತೆ ಸಿರಿವಂತರೂ ಸಂತ್ರಸ್ತರಾದ ಸಾವಿರಾರು ಪ್ರಕರಣಗಳಿಗೆ ಸಂಜೀವರು ಒಂದು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ಎಂಟೆಕ್ ಓದಿದ ಬೆಳಗಾವಿ ಜಿಲ್ಲೆಯ ಯುವತಿಯೊಬ್ಬಳು ದ.ಕ. ಜಿಲ್ಲೆಯ ಯುವಕನೊಬ್ಬನ ಪ್ರೇಮ ಪಾಶಕ್ಕೆ ಸಿಲುಕಿ ಜೀವವನ್ನೇ ಬಲಿ ತೆಗೆದುಕೊಳ್ಳಲು ಹೊರಟ ಪ್ರಕರಣವೂ ಸೇರಿದಂತೆ ಅದೆಷ್ಟೋ ಜೀವಗಳನ್ನು ಉಳಿಸಿದ (ಪುಣ್ಯ)ಕೀರ್ತಿ ಆರ್ಥಿಕ-ಶೈಕ್ಷಣಿಕ “ಬಡ’ ಸಂಜೀವರ ಖಾತೆಯಲ್ಲಿದೆ. ಸಂಜೀವರು ಹೇಳುವ ಪ್ರಕಾರ ಎಲ್ಲರಿಗೂ ಇದು ಸಾಧ್ಯ. ಸಂಜೀವರ ಸಾಮರ್ಥ್ಯವೇ ಇಷ್ಟಿದ್ದರೆ, ಗುರು ಡಾ|ರವೀಂದ್ರನಾಥ ಶ್ಯಾನುಭಾಗರ ಸಾಮರ್ಥ್ಯ ಎಷ್ಟಿರಬೇಡ? ಆದರೆ ಶ್ಯಾನುಭಾಗರು ಹೇಳುವುದಿಷ್ಟು: “ನಮಗಾದರೂ ಜೀವನದ ಭದ್ರತೆ ಇದೆ. ಆತನಿಗೆ ಆ ದಿನ ದುಡಿದರೆ ಉಂಟು, ನಾಳೆಯ ಭದ್ರತೆ ಏನೂ ಇಲ್ಲ. ಆತ ಇಷ್ಟು ಮಾಡಿದ್ದು ದೊಡ್ಡದು’.
ಆಗ ಬಿಸಿರಕ್ತವಿತ್ತು. ಬೆಳಗ್ಗೆ, ಸಂಜೆ ಹೊತ್ತು ಸಮಯ ಬಿಡುವು ಮಾಡಿಕೊಂಡು ಜನರ ಕೆಲಸ ಮಾಡುತ್ತಿದ್ದೆ. ನನಗೇನೂ ಸ್ವಾರ್ಥವಿಲ್ಲ, ಪ್ರಚಾರವೂ ಬೇಡ. ನನ್ನಂತಹವರು ಬೆಳೆದದ್ದು ಶ್ಯಾನುಭೋಗ್ ಸರ್ ಅವರಿಂದ. ಸೂಕ್ತ ಕಚೇರಿಗೆ ದೂರು ಸಲ್ಲಿಸುವುದು, ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವುದು, ಸಂತ್ರಸ್ತನೇ ದೂರು ಸಲ್ಲಿಸುವುದೇ ಮೊದಲಾದ ಕ್ರಮಗಳಿಂದ ಶೇ.100 ಪರಿಹಾರ ಸಾಧ್ಯ. ಇದರ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲ. ನಾವು ಕೇವಲ ಪತ್ರ ವ್ಯವಹಾರದಲ್ಲಿಯೇ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಮುಖ್ಯವಾಗಿ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಲೇಬೇಕು. ಶ್ಯಾನುಭೋಗರು ದಾರಿ ತೋರಿಸದೆ ಇದ್ದರೆ ನಾವು ಬೆಳೆಯುತ್ತಿರಲಿಲ್ಲ. ಆದ್ದರಿಂದ ನಾನು ಬಯಸುವುದಿಷ್ಟೆ ಇತರರಿಗೆ ಸ್ಫೂರ್ತಿಯಾಗಬೇಕು.
– ಸಂಜೀವ ಕಬಕ, ಸಾಮಾಜಿಕ ಕಾರ್ಯಕರ್ತ
– ಮಟಪಾಡಿ ಕುಮಾರಸ್ವಾಮಿ