ಹೌದಲ್ವಾ, ದೇವರಿಗೆ ಎಲ್ಲರೂ ಸಮಾನ ಅಂತಾರೆ. ಆದರೂ ಆತ ಸಮಾನವಾಗಿ ನೋಡಲ್ಲ. ಒಬ್ಬರಿಗೆ ದುಃಖವೇ ಇಲ್ಲ ಇನ್ನೊಬ್ಬರಿಗೆ ಸುಖವೇ ಗೊತ್ತಿಲ್ಲ. ಬರೀ ಬಿಸಿಲು. ತಂಪು ಮಳೆಯೇ ಇಲ್ಲ….
ಒಂದು ದಿನ ರಣರಣ ಬಿಸಿಲಿನಲ್ಲಿ ಕಾಲೇಜು ಮುಗಿಸಿಕೊಂಡು, ಮನೆ ತಲುಪಲು ಸಿಟಿ ಬಸ್ ಸ್ಟಾಂಡ್‌ಗೆ ಬರುವವಳಿದ್ದೆ. ಮನೆಗೆ ಬೇಕಾದ ಕಾಯಿಪಲ್ಯೆಗಳನ್ನು ತೆಗೆದುಕೊಂಡು ಹೋಗಬೇಕಿತ್ತು. ರಜೆಯಿದ್ದಾಗ ಬಿಸಿಲಿಗೆ ಹೆದರಿ, ಅನಿವಾರ್ಯವಿದ್ದಾಗಷ್ಟೇ ಮಾರ್ಕೆಟ್ ಕಡೆಗೆ ಬರುತ್ತಿದ್ದೆ. ಈಗ ಕಾಲೇಜು ಪ್ರಾರಂಭವಾದ್ದರಿಂದ ದಿನವೂ ಸಿಟಿಗೆ ಬರುತ್ತೇನೆ, ಕಾಲೇಜು ಮುಗಿಸಿ ಕಾಯಿಪಲ್ಯೆಗಳನ್ನು ತೆಗೆದುಕೊಂಡು ಮನೆಗೆ ಹೋಗುವುದು ಸಾಮಾನ್ಯ ರೂಢಿ.
ಬಸ್ಸಿನಿಂದ ಇಳಿದ ತಕ್ಷಣ, ಛತ್ರಿ ಏರಿಸಿ ನಡೆದೆ. ಅಬ್ಟಾ! ಎಂಥಾ ಬಿಸಿಲು! ನಮ್ಮ ಬೆಳಗಾವಿನೇ ಹೀಗಾದಾಗ, ಇನ್ನು ರಾಯಚೂರು, ಬೀದರ್ ಕಡೆ ಹೇಗೆ ದೇವ್ರೇ ಅನಿಸಿತು. ತಲೆ ಮೇಲೆ ಇದ್ದ ಛತ್ರಿ ಬಾಳ ತ್ರಾಸ ತೆಗೆದುಕೊಂಡು ನೆರಳನ್ನು ನೀಡಲು ಪ್ರಯತ್ನಿಸುತ್ತಿತ್ತು. ಹಾಗೆಯೇ ಒಂದು ರೌಂಡ್ ಭಾಜಿ ಮಾರ್ಕೆಟ್ ಅಡ್ಡಾಡಿ, ತಾಜಾ ಎನಿಸಿದ ಕಾಯಿಪಲೆÂಗಳನ್ನು ಖರೀದಿಸಿ ಹಾಗೆಯೇ ಮುಂದೆ ಬಂದೆ. ಒಬ್ಬ ಹಣ್ಣು ಹಣ್ಣು ಅಜ್ಜಿ ಸೌತೆಕಾಯಿ ಮಾರುತ್ತಿದ್ದಳು. ಸಣಕಲು ದೇಹ, ಸಾಧಾರಣ ಸೀರೆ, ಕುಂಕುಮವಿಲ್ಲದ ಹಣೆ, ನೆರಿಗೆಗಳಿಂದ ತುಂಬಿದ ಮುಖ. ಮೈ ಒರೆಸುವ ಟವೆಲ್ ಅನ್ನು 3-4 ಬಾರಿ ಮಡಚಿ, ಚೌಕಾಕಾರ ಮಾಡಿ, ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಲೆ ಮೇಲೆ ಇಟ್ಟುಕೊಂಡಿದ್ದಳು. ಸೌತೆಕಾಯಿಯನ್ನು ನೋಡಿ ಮುಂದೆ ಸಾಗುತ್ತಿದ್ದಾಗ, ಆ ಅಜ್ಜಿ “ಬಾ ಯವ್ವ, ಸೌತೆಕಾಯಿ ತೊಗೊ’ ಅಂದಳು. “ಪಾವ ಕೆ.ಜಿ.ಗೆ ಎಷ್ಟ ಅಜ್ಜಿ?’ ಅಂದೆ. “10 ರೂಪಾಯಿ’ ಅಂದಳು. ಅರ್ಧ ಕೆ.ಜಿ.ಗೆ ಎಷ್ಟು ಅಂತ ಮತ್ತೆ ಕೇಳಿದೆ. “ಯವ್ವ 20 ರೂಪಾಯಿ’ ಅಂತ ಉತ್ತರಿಸಿದಳು.
ನನಗೆ 15 ರೂಪಾಯಿಗೆ ಅರ್ಧ ಕಿಲೋ ಬೇಕಿತ್ತು. ಆದರೆ, ಬಿಸಿಲಿನಲ್ಲಿ ಸೋತು, ದಣಿದ, ಹಣ್ಣಾದ ಜೀವವನ್ನು ನೋಡಿದಾಗ, “ಆಯ್ತು ಆಯಿ, ಅರ್ಧ ಕಿಲೋ ಕೊಡಿ. ನೀ ಕಡಿಮೆ ಮಾಡದಿದ್ರೂ ತೊಗೊತೇನಿ. ಯಾಕಂದ್ರ ಬಿಸಲಾಗ ದಣಿದ ನಿನ್ನ ಮುಖಾ ನೋಡಾಕ ಆಗವಲ್ದವ್ವಾ’ ಎಂದೆ. “ಅಯ್ಯೋ ಯವ್ವ, ಇದೆಂಥ ಬಿಸಲ? ನನ್ನ ಜೀವನಾನ ಬಿಸಲಾಗ ತಗದೇನಿ. ಮುಂದೂ ತಗಿತೇನಿ. ಇದೆಂಥ ಬಿಸಲ ಬಿಡಯವ್ವಾ’ ಅಂದಳು. ಆಕೆಯ ಮಾತು ನನ್ನನ್ನು ಮರಗುವಂತೆ ಮಾಡಿತು.
ನನ್ನ ಒಂದು ಚಿಕ್ಕ ಕಾಳಜಿಗೆ ಅಜ್ಜಿ ಒಂದು ಸೌತೆಕಾಯಿ ಜಾಸ್ತೀನೇ ಕೊಟ್ಟಳು. ಜೊತೆಗೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಖರೀದಿಸಿದೆ. ಇಬ್ಬರೂ ಮುಗುಳ್ನಕ್ಕು ಬೀಳ್ಕೊಟ್ಟೆವು. ನಾನು ಮುಂದೆ ಸಾಗಿ ಸಿಟಿ ಬಸ್ ಹಿಡಿದೆ.
ಆದರೆ, ಅಜ್ಜಿ ಹೇಳಿದ ಮಾತು ಕಿವಿ, ಹೃದಯ ಹಾಗೂ ಮನಸ್ಸಿನಲ್ಲಿ ಹಾಗೆಯೇ ಸುಳಿದಾಡುತ್ತಿತ್ತು. ಎಂಥ ಅರ್ಥಗರ್ಭಿತ ಮಾತು. ಎಲ್ಲಾ ಜೀವನಾನ ಬಿಸಲಾಗ ತಗದೇನಿ… ಅಂದರೆ, ಇಲ್ಲಿವರೆಗೂ ಆ ಅಜ್ಜಿ ಎಷ್ಟು ಕಷ್ಟ ಉಂಡಿರಬೇಡ! ಒಂದು ವೇಳೆ ಆಕೆ ಸುಖವಾಗಿಯೇ ಇದ್ದಿದ್ದರೆ, ಈ ವಯಸ್ಸಿನಲ್ಲಿ, ಉರಿ ಬಿಸಿಲಿನಲ್ಲಿ ಕುಳಿತು ಕಾಯಿಪಲ್ಯ ಮಾರುವ ಅವಶ್ಯಕತೆ ಇರುತ್ತಿತ್ತೇ? ಯಾರಿಗೆ ಗೊತ್ತು, ಅಜ್ಜಿಗೆ ಮಕ್ಕಳಿದ್ದಾರೋ, ಇಲ್ಲವೋ? ಇದ್ದರೂ ನೋಡಿಕೊಳ್ಳುತ್ತಾರೋ ಇಲ್ಲವೋ? ಹಾಗೆಯೇ ಪ್ರಶ್ನೆಗಳು ಹುಟ್ಟ ಹತ್ತಿದವು. ಏನೇ ಆದರೂ ಮುದಿ ವಯಸ್ಸಿನಲ್ಲಿ ದುಡಿಯುವುದು ಕರ್ಮವೇ ಸರಿ. ಜೀವನದುದ್ದಕ್ಕೂ ಕಷ್ಟ ಉಂಡು ಉಂಡು, ಅದಕ್ಕೇ ಒಗ್ಗಿಹೋಗಿರುತ್ತಾರೆ. ಸುಖದ ಅಪೇಕ್ಷೆಯೇ ಇರುವುದಿಲ್ಲ. ನಮ್ಮಂಥವರ ಕಾಳಜಿ ಮಾತುಗಳೂ ಅವರಿಗೆ ಬೇಸರ ಮಾಡಬಹುದು.
ಹೌದಲ್ವಾ, ದೇವರಿಗೆ ಎಲ್ಲರೂ ಸಮಾನ ಅಂತಾರೆ. ಆದರೂ ಆತ ಸಮಾನವಾಗಿ ನೋಡಲ್ಲ. ಒಬ್ಬರಿಗೆ ದುಃಖವೇ ಇಲ್ಲ ಇನ್ನೊಬ್ಬರಿಗೆ ಸುಖವೇ ಗೊತ್ತಿಲ್ಲ. ಬರೀ ಬಿಸಿಲು. ತಂಪು ಮಳೆಯೇ ಇಲ್ಲ. ಇಂಥ ಬಿಸಿಲ ಜೀವನವನ್ನು ಮಂದಸ್ಮಿತದಿಂದಲೇ ಎದುರಿಸುವ ಶಕ್ತಿ ಇಂಥ ಬಡ ಅಜ್ಜಿಗೆ ಮಾತ್ರ ಇರಲು ಸಾಧ್ಯ.
ಮಾಲಾ ಮ. ಅಕ್ಕಿಶೆಟ್ಟಿ