ಇಟಾನಗರ : ರಾಜಧಾನಿ ಸಹಿತ ಅರುಣಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಇಂದು ಸೋಮವಾರ ಜಡಿ ಮಳೆಯಾಗುತ್ತಿದ್ದು ರಾಜ್ಯಾದ್ಯಂದ ಭೂ ಕುಸಿತ ಹಾಗೂ ಪ್ರವಾಹ ರೀತಿಯ ಪರಿಸ್ಥಿತಿ ಉಂಟಾಗಿದೆ. ಜನಜೀವನ ತೀವ್ರವಾಗಿ ಬಾಧಿತವಾಗಿದೆ.
ನದೀ ದಂಡೆಗಳ ವಾಸಿಗಳಿಗೆ, ಗುಡ್ಡ ಕಾಡು ಪ್ರದೇಶದವರಿಗೆ ಅಪಾಯದ ಎಚ್ಚರಿಕೆ ನೀಡಿರುವ ರಾಜ್ಯಾಡಳಿತೆಯು ಜನರನು ಸುರಕ್ಷಿತ ತಾಣಗಳಿಗೆ ಹೋಗುವಂತೆ ಸೂಚಿಸಿದೆ.
ರಸ್ತೆಗಳು, ಮೋರಿಗಳು, ಮನೆಗಳು ಹಾಗೂ ಮೂಲ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿರುವ ವರದಿಗಳು ವಿವಿಧ ಜಿಲ್ಲೆಗಳಿಂದ ಬಂದಿವೆ.
ನಾಲ್ವರು ರೋಗಿಗಳು, ಮೂವರು ಮಕ್ಕಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಭೂಕುಸಿತ, ಪ್ರವಾಹಗಳಲ್ಲಿ ಸಿಲುಕಿಕೊಂಡಿದ್ದ 20ಕ್ಕೂ ಅಧಿಕ ಸಂತ್ರಸ್ತರನ್ನು ಹೆಲಿಕಾಪ್ಟರ್ ಮೂಲಕ ಸಗಾಲೀ ಯಿಂದನಹರ್ಲಾಗುನ್ ಗೆ ಸಾಗಿಸಲಾಗಿದೆ.
ಇದೇ ವೇಳೆ ನಿರಂತರ ಜಡಿ ಮಳೆಯಿಂದಾಗಿ 415ನೇ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಭಾಗಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಿಂದ ನಹರ್ಲಾಗುನ್ ನಿಂದ ಇಟಾನಗರದ ನಡುವಿನ ರಸ್ತೆ ಸಂಪರ್ಕ ತೀವ್ರವಾಗಿ ಬಾಧಿತವಾಗಿದೆ.
ನೆರೆ ನೀರು ಏರುತ್ತಿರುವ ಕಾರಣ ಬಾರಾಪಾನಿ ಸೇತುವೆಯಡಿಯ ಮಣ್ಣು ಕೊಚ್ಚಿ ಹೋಗಿದ್ದು ಸೇತುವೆಗೆ ತೀವ್ರ ಅಪಾಯ ಒದಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.