Advertisement

ಸಂಗೀತ ಕಛೇರಿ ಮುಗಿದ ಮೇಲಿನ ಬದುಕು

07:30 AM Mar 25, 2018 | |

ಸಂಗೀತ ಕಛೇರಿಯೊಂದು ಮುಕ್ತಾಯದ ಹಂತ ತಲುಪಿರುತ್ತದೆ. ಅದುವರೆಗೆ ಕೂತು ನಿಜದ ಆನಂದಕ್ಕೋ, ಆಸ್ವಾದಕ್ಕೋ ಅನುಭೂತಿಗೋ ಸಮಯಾಲಾಪಕ್ಕೋ ಒಟ್ಟಿನಲ್ಲಿ ಸಂಗೀತವು ನಮ್ಮನ್ನು ಹಿಡಿದು ಕೂರಿಸಿರುತ್ತದೆ. ಕಛೇರಿಯು ಕೊನೆಗೂ ಕೊನೆಯಾಗುತ್ತದೆ. ನಾವು ನಮ್ಮ ಮನೆಗೆ ಹೋಗುತ್ತೇವೆ ಮತ್ತು ಕಲಾವಿದರು ಅವರ ಮನೆಗೆ ಹೋಗುತ್ತಾರೆ. ಕಲಾವಿದರ ಬದುಕು ಶುರುವಾಗುತ್ತದೆ ಮತ್ತು ಕೇಳುಗರ ಬದುಕು ಮುಗಿದಿರುತ್ತದೆ.

Advertisement

ಬಹಳ ಸರ್ತಿ ಹೀಗಾಗುತ್ತದೆ. ಕಛೇರಿಯಲ್ಲಿ ನಾವು ಬಯಸಿದ್ದ ರಾಗವು ಹೊಮ್ಮಿರುವದಿಲ್ಲ. ನಾವು ಬಯಸಿದ್ದ ತೀವ್ರತೆಯು ಹುಟ್ಟಿರುವುದಿಲ್ಲ. ನಮ್ಮ ಬಗೆಯನ್ನು ಬಗೆವ ವಾತಾವರಣವು ಹುಟ್ಟಿರುವುದಿಲ್ಲ. ರಾಗ ರಂಜನೆಯಾಗಿರುತ್ತದೆ ಮತ್ತು ರಂಜನೀಯವಾಗಿಯೇ ಮುಗಿದಿರುತ್ತದೆ. ಸಾವಿರ ಕೈಗಳ ಚಪ್ಪಾಳೆಗಳ ನಡುವೆ ನಾಲ್ಕಾರು ಶೀಟಿಗಳೂ ಬಿದ್ದಿರುತ್ತವೆ. ನಮ್ಮ ಕೈಗಳೂ ಆ ಸಾವಿರ ಚಪ್ಪಾಳೆಗಳ ಮಿಶ್ರತಾಲದಲ್ಲಿ ಜೊತೆಯಾಗಿರುತ್ತವೆ ಮತ್ತು ಅಂದಿನ ಕಛೇರಿಯು ಹಾಗೆ ಮಿಶ್ರತಾಲದಲ್ಲಿ ಮುಕ್ತಾಯವಾಗುತ್ತದೆ. ಇಲ್ಲಿ ನಾವು ಬಯಸುವ ಫ‌ರ್ಮಾಯಿಶೀ ರಾಗಗಳು ನಮ್ಮಲ್ಲಿಯೇ ಬಯಕೆಯಾಗಿ ಉಳಿಯುತ್ತದೆ ಮತ್ತು ಅದೇ ಕಲಾವಿದರ ಮುಂದಿನ ಕಛೇರಿಯಲ್ಲಿ ನಮ್ಮ ಫ‌ರ್ಮಾಯಿಶೀ ರಾಗವನ್ನು ಕೇಳಿ ಮೆಸೇಜ್‌ ಬರೆಯಲು ನಾವವರ ವೆಬ್‌ಸೈಟನ್ನೋ ಅಥವಾ ಫೇಸ್‌ಬುಕ್‌ ಪುಟವನ್ನೋ ತೆರೆಯುತ್ತೇವೆ, ಹುಡುಕುತ್ತೇವೆ, ಬರೆಯುತ್ತೇವೆ. ಅಲ್ಲಿಗೆ ನಮಗೊಂದು ಆಶಾಭಾವ. ಇಂದಲ್ಲ ನಾಳೆ ನಾವು ಅದೇ ಕಲಾವಿದರ ಯಾವುದಾದರೂ ಕಛೇರಿಯಲ್ಲಿ ನಮ್ಮ ಬಯಕೆಯ ರಾಗವನ್ನು ಕೇಳಿಯೇ ತೀರುತ್ತೇವೆ ಎಂಬ ದೈವೀಭಾವದ ಪ್ರೀತಿ ಮತ್ತು ಶ್ರದ್ಧೆ. ಅಲ್ಲಿಗೆ ಆ ಬದುಕು ಒಂದು ರೀತಿಯಲ್ಲಿ ಅಂತ್ಯವನ್ನೂ ಮತ್ತೂಂದು ಬಗೆಯಲ್ಲಿ ಆದಿಯನ್ನೂ ಕಾಣುತ್ತದೆ. 

ಇನ್ನು ಕಲಾವಿದರ ಬದುಕು ಶುರುವಾಗುವುದು ಹೀಗೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಶುರುವಾಗುವುದು ತಾನು ಹೇಗೆ ನುಡಿಸಿದೆ ಅಥವಾ ಹಾಡಿದೆ ಎಂಬ ಉದ್ವೇಗ ತುಂಬಿದ ತೃಪ್ತಿಯ ಜೊತೆಗೆ ತನ್ನನ್ನು ಜನ ಹೇಗೆ ಸ್ವೀಕರಿಸಿರಬಹುದು ಎಂಬ ತಳಮಳವೂ ಸೇರಿ ಒಂದು ಬಗೆಯ ವಿಚಿತ್ರ ಭಾವ ಆವರಿಸಿರುತ್ತದೆ. ಇದು ಸಾಮಾನ್ಯವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರಲ್ಲಿ ಬಹಳ ಸತ್ಯವಾದರೂ ಕಲಾವಿದರಾಗಿ ಸಂಪೂರ್ಣ ಸ್ಥಾನಮಾನಗಳನ್ನು ಪಡೆದವರಲ್ಲಿಯೂ ಅಂಥ ಬದಲಾವಣೆಯೇನೂ ಇರುವುದಿಲ್ಲ. ಉಸ್ತಾದ್‌ ವಿಲಾಯತ್‌ ಖಾನರು ಒಮ್ಮೆ ಹೀಗೆ ಹೇಳುತ್ತಾರೆ : ಪ್ರತಿಯೊಂದು ಕಾರ್ಯಕ್ರಮವೂ, ಅದೆಷ್ಟೇ ದೊಡ್ಡ ಅಥವಾ ಚಿಕ್ಕ ಕಾರ್ಯಕ್ರಮವಾಗಿರಲಿ. ಒಂದು ಪರೀಕ್ಷೆಯಿದ್ದಂತೆ. ವೇದಿಕೆಯ ಮೇಲೆ ಹತ್ತಿ ಕುಳಿತು ದಿನನಿತ್ಯದ ಮನೆಯಲ್ಲಿ ಕುಳಿತು ಮಾಡುವ ಅಭ್ಯಾಸವನ್ನು, ಅಭ್ಯಾಸದಂತೆ ನುಡಿಸುವುದಲ್ಲ. ಬದಲಾಗಿ, ನಿತ್ಯದ ಅಭ್ಯಾಸದ ಫ‌ಲವನ್ನು ಶ್ರೋತ್ರುಗಳ ಮುಂದಿಡುವುದು  ನಿಜವಾದ ಕಲಾವಿದನ ಸವಾಲು ಮತ್ತು ಪರೀಕ್ಷೆ. ಹಾಗೆ, ಕಲಾವಿದನ ಮನಸ್ಸು ಕಾರ್ಯಕ್ರಮದ ನಂತರ ಯಾವಾಗಲೂ ಇಂಥ ಒಂದು ಸಾಮಾನ್ಯ ತೊಯ್ದಾಟದಲ್ಲಿ ಕೆಲವು ಗಂಟೆಗಳ ಕಾಲವಾದರೂ ಒ¨ªಾಡುತ್ತಲೇ ಇರುತ್ತದೆ. ಉಸ್ತಾದ್‌ ಶಾಹಿದ್‌ ಪರ್ವೇಝ್ರು ಒಮ್ಮೆ ಹೀಗೆ ಹೇಳುತ್ತಾರೆ. ಕಲಾವಿದನಿಗೆ ತಾನು ಆ ಕಾರ್ಯಕ್ರಮದಲ್ಲಿ ಅತ್ಯಂತ ಯಶಸ್ವಿಯಾಗಿ ನುಡಿಸಿದ್ದೇನೆ ಎಂದನ್ನಿಸಿದರೆ ಶ್ರೋತೃವಿಗೆ ಆ ಕಾರ್ಯಕ್ರಮವು ಇಷ್ಟವಾಗದೇ ಇರಬಹುದು. ಮತ್ತು ಕೆಲವೊಮ್ಮೆ ಶ್ರೋತೃವಿನಲ್ಲಿ ಅತ್ಯಂತ ಆನಂದವನ್ನು ಸು#ರಿಸಿದಂಥ ಕಾರ್ಯಕ್ರಮವು ಕಲಾವಿದರಿಗೆ ತೃಪ್ತಿಯನ್ನು ತರದೇ ಇರಬಹುದು. ಹೀಗೆಲ್ಲ ಆಗುತ್ತದೆ. ಬದುಕಿನ ನಿಯಮಗಳು, ಸತ್ಯದ ಅನ್ವೇಷಣೆಯ ಬಗೆಬಗೆಯ ಭಾವಗಳು ಸಂಗೀತ ಕಛೇರಿಯೆಂಬ ಆ ಹೊತ್ತಿನ ಬದುಕಿಗೂ ಯಾವುದೇ ನಿಮಿತ್ತವಿಲ್ಲದೆ ಅನ್ವಯವಾಗುತ್ತವೆ. 

ಮೊನ್ನೆ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಗಿಟಾರ್‌ ವಾದಕನೊಬ್ಬನೊಂದಿಗೆ ನಡೆದ ನನ್ನ ಜುಗಲ್‌ ಬಂದಿಯ ಕೊನೆಯಲ್ಲಿ ಶ್ರೋತೃಗಳೊಂದಿಗಿನ ಸಂವಾದದಲ್ಲಿ ಹೀಗಾಯಿತು. ಯುರೋಪಿಯನ್‌ ಮೂಲದ ದಕ್ಷಿಣ ಆಫ್ರಿಕಾದ ಕೇಳುಗರೊಬ್ಬರಗೆ ಜೀವನದಲ್ಲಿ “ಸಿತಾರ್‌’ ಎಂಬ ವಾದ್ಯವನ್ನು ಮೊದಲ ಬಾರಿಗೆ ಕುಳಿತು ಕಂಡಿದ್ದೇ, ಕೇಳಿದ್ದೇ ದೊಡ್ಡ ವಿಷಯವಾಯಿತು ಮತ್ತು ತಮ್ಮ ಶಬ್ದಗಳಲ್ಲಿ ವರ್ಣಿಸಿ ಹೇಳಿದ್ದರು. ಅವರ ಮಾತಿನ ಧಾಟಿಗೆ ನಾನು ನನ್ನ ಧಾಟಿಯನ್ನು ಸೇರಿಸಿ ಹೇಳಿದ್ದು ಹೀಗೆ. “ಸಿತಾರ್‌’ ಎಂಬ ವಾದ್ಯವನ್ನು ನೀವು ನೋಡಿ ಕೇಳಿದ್ದೇನೆ ಎನ್ನುವುದಕ್ಕಿಂತ ಕಾರ್ಯಕ್ರಮದಲ್ಲಿ ಸಿತಾರ್‌ ಮಾತ್ತು ಗಿಟಾರ್‌, ಹಾಗೆಯೇ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಈ ಎರಡೂ ಪದ್ಧತಿಗಳು ಒಂದಾಗಿದ್ದುದನ್ನು ಕೂಡ ನೋಡಿದ್ದೀರಿ. ಕೆಲವೊಮ್ಮೆ ಮನೆಯನ್ನು ಅಳೆಯುವಾಗ  ಆ ಮನೆಯೊಳಗಿನ ಎಲ್ಲ ಕೋಣೆಗಳನ್ನೂ ಸೇರಿಸಿ ಅಳೆಯಬೇಕಾಗುತ್ತದೆ. ಮನೆಯು ಹೊರಗಿನಿಂದ ಗಾತ್ರ ಮತ್ತು ವಿಸ್ತೀರ್ಣವನ್ನು ನಮಗೆ ತೋರಿಸುತ್ತದೆಯಷ್ಟೆ. ಒಳಹೊಕ್ಕು ಅಳೆದರೆ ಮನೆಯೆಂಬ ಸಮಷ್ಟಿಭಾವವು ನಮಗೆ ಗೋಚರವಾಗುತ್ತದೆ.

ಸಂಗೀತವೆಂಬ ವಿಶ್ವವನ್ನು ಅಕ್ಷರಗಳಲ್ಲಿ ಬಂಧಿಸಿಡುವುದು ಎಷ್ಟು ತಾಪತ್ರಯದ ಸಂಗತಿಯೋ ಹಾಗೆಯೇ ಅಕ್ಷರಗಳ ವಿಶ್ವವನ್ನು ಸಂಗೀತದಲ್ಲಿ ಬಂಧಿಸುತ್ತೇನೆಂದು ಕೂರುವುದೂ ಅಸಾಧ್ಯವಾದ ಸಂಗತಿ. ಆದರೆ ಒಂದು ಸಾಧ್ಯತೆಯಿದೆ. ಸಂಗೀತ ಮತ್ತು ಅಕ್ಷರಗಳು ಮುಹೂರ್ತವನ್ನು ಮೀರಿ ಕೂಡ ಮದುವೆಯಾಗಿ ನೆಮ್ಮದಿಯ ಜೀವನ ನಡೆಸಬಲ್ಲವು, ಅದನ್ನು ಅರ್ಥ ಮಾಡಿಕೊಳ್ಳಲು ನಮಗೆ ಅರ್ಧ ಮುಷ್ಟಿ ಸಂಗೀತ ಒಂದು ಮುಷ್ಟಿ ಅಕ್ಷರಗಳ ಜ್ಞಾನವಿದ್ದರೆ ಸಾಕು. ಜೀವನ ಸುಗಮ ಮತ್ತು ಸರಾಗವಾಗಿ ನಡೆಯುತ್ತದೆ.

Advertisement

ವೃತ್ತಿಯಲ್ಲಿ ಆಯುರ್ವೆದ ವೈದ್ಯನಾದ ನನಗೆ ವೃತ್ತಿಯು ಬದುಕನ್ನೂ ಪ್ರವೃತ್ತಿಯಾದ ಸಂಗೀತವು ಒಳಗಿನ ಬದುಕನ್ನೂ ನೀಡುತ್ತ ಬರುತ್ತಿವೆ. ಮತ್ತು ದಕ್ಷಿಣ ಆಫ್ರಿಕಾದ ವೈವಿಧ್ಯಮಯ ಜಗತ್ತಿನ ಬೇರು ಮತ್ತು ಬೆವರು ನನ್ನನ್ನು ಸದ್ಯ ಪೋಷಿಸುತ್ತಲಿವೆ. ಒಂದು ಸಣ್ಣ ಚಹಾ ವಿರಾಮದ ನಂತರ ಮುಂದಿನ ಕಛೇರಿಯಲ್ಲಿ ಹೊಸ ವಿಷಯಗಳೊಂದಿಗೆ ಭೇಟಿಯಾಗೋಣ. ನನ್ನ ಮತ್ತು ನನ್ನ ಸಂಗೀತದ ದಾಹ ಮತ್ತು ಮೋಹದ ಬಗ್ಗೆ ಬರೆಯಲು ಅವಕಾಶವಿತ್ತ ಉದಯವಾಣಿ ಬಳಗಕ್ಕೆ ಹೃದಯಪೂರ್ವಕ ನಮಸ್ಕಾರಗಳು

ಕಣಾದ ರಾಘವ 

Advertisement

Udayavani is now on Telegram. Click here to join our channel and stay updated with the latest news.

Next