“ಮುಸ್ಲಿಂ ಯುವಕನೊಬ್ಬ ಯಕ್ಷಗಾನ ಕಲಿಯಲು ಹೋದಾಗ ಎದುರಾಗುವ ಸಮಸ್ಯೆಗಳು ಮತ್ತು ಆ ವೇಳೆ ಮುಸ್ಲಿಂ ಸಮುದಾಯ ಆತನಿಗೆ ಬೆನ್ನೆಲುಬಾಗಿ ನಿಲ್ಲುವ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಕಲೆಗೆ ಜಾತಿ-ಧರ್ಮ ಇಲ್ಲ ಎಂಬ ಅಂಶದೊಂದಿಗೆ ಸಿನಿಮಾ ಮಾಡಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಇಸ್ಮಾಯಿಲ್. ಇದು ತುಂಬಾ ಸೆನ್ಸಿಟಿವ್ ವಿಷಯವಾದರೂ ಯಾರಿಗೂ ನೋವಾಗದಂತೆ ಕಲೆಯನ್ನಷ್ಟೇ ಕೇಂದ್ರಬಿಂದುವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾಗಿ ಹೇಳುವ ಅವರು, ಚಿತ್ರೀಕರಣ ಸಮಯದಲ್ಲೂ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎನ್ನಲು ಮರೆಯುವುದಿಲ್ಲ. ಕೃಷ್ಣ ನಾಯ್ಕ ಈ ಸಿನಿಮಾ ನಿರ್ಮಾಪಕರು.
Advertisement
ಚಿತ್ರದಲ್ಲಿ ರವಿರಾಜ್ ಶೆಟ್ಟಿ ಪ್ರಮುಖ ಪಾತ್ರ ಮಾಡಿದ್ದು, ಅವರಿಗೆ ಮೊದಲು ಈ ಪಾತ್ರ ಒಪ್ಪಿಕೊಳ್ಳುವಾಗ ಭಯವಾಯಿತಂತೆ. ಏಕೆಂದರೆ, ಪಾತ್ರಕ್ಕೆ ಯಕ್ಷಗಾನ ಕಲಿಯಬೇಕಿತ್ತು. ಕೊನೆಗೆ ಸವಾಲಾಗಿ ಸ್ವೀಕರಿಸಿ ಕೊಟ್ಟ ಪಾತ್ರಕ್ಕೆ ಒದಗಿಸಿದ ಖುಷಿ ಅವರಿಗಿದೆ. ಚಿತ್ರದಲ್ಲಿ ಹಿರಿಯ ನಟ ಸತ್ಯಜಿತ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಚಿತ್ರತಂಡ ಅವರಿಂದ ಡಬ್ಬಿಂಗ್ ಮಾಡಿಸದೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಬೇಸರ ತಂದಿದೆಯಂತೆ. ತನ್ನಿಂದಲೇ ಡಬ್ಬಿಂಗ್ ಮಾಡಿಸಿ ಎಂದು ಚಿತ್ರತಂಡದವರಲ್ಲಿ ಮನವಿ ಮಾಡಿಕೊಂಡರು ಸತ್ಯಜಿತ್.