Advertisement

ಕೂಡಿ ಬಾಳಿದರೆ ಸ್ವರ್ಗ ಸುಖ

03:50 AM Mar 22, 2017 | |

ಮೊದಲೆಲ್ಲ ಅವಿಭಜಿತ ಕುಟುಂಬಗಳಿದ್ದುದರಿಂದ ಎಷ್ಟೇ ಮನಸ್ತಾಪಗಳು ಬಂದರೂ ಸಹ ಓರಗಿತ್ತಿಯರ ಮುಂದೆಯೋ, ನಾದಿನಿಯರ ಮುಂದೆಯೋ ಅಥವಾ ಹಿರಿಯಜ್ಜಿಯ ಮುಂದೆಯೋ ಹೇಳಿ ಸಮಾಧಾನ ಪಟ್ಟುಕೊಂಡು ಮರುದಿನ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ನಿರತರಾಗಿಬಿಡುತ್ತಿದ್ದರು. ಇಂದು ಜಗಳವಾಡಿದರೂ ಸಹ ಯಾಕೆ ಜಗಳವಾಡುತ್ತೀರಿ? ಎಂದು ಸಮಾಧಾನದ ಮಾತುಗಳನ್ನಾಡಲು ಮನೆಯ ಇತರ ಸದಸ್ಯರೇ ಇರುವುದಿಲ್ಲ. ಹೀಗಾಗಿ ಗಂಡ ಹೆಂಡತಿಯರ ನಡುವೆ ಚಿಕ್ಕ ವಿಷಯಕ್ಕಾಗಿಯೇ ಬಂದಿರುವ ಮನಸ್ತಾಪ ಕಂದಕವಾಗುತ್ತಾ ಹೋಗುತ್ತದೆ. 

Advertisement

“ಗಂಡ ಹೇಗಿದ್ದಾನೋ ಹಾಗೇ ಒಪ್ಪಿಕೊಳ್ಳಬೇಕಮ್ಮ’ ಎಂದು ಹೇಳಿದ ಅಜ್ಜಿಯ ನುಡಿ ಎಷ್ಟು ಸತ್ಯ?! ಇದರರ್ಥ, ಗಂಡ ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರಬೇಕೆನ್ನುವುದಲ್ಲ! ಇಬ್ಬರೂ ಹೊಂದಿಕೊಂಡು ಹೋಗಬೇಕೆನ್ನುವುದು ಅದರ ಹಿಂದಿರುವ ತಥ್ಯ. ಅವರ ಅನುಭವದ ಸಾರ ಅಳವಡಿಸಿಕೊಂಡು ಹೋದರೆ ಜೀವನ ನಿಜವಾಗಿಯೂ ಹೂವೆತ್ತಿದಷ್ಟು ಹಗುರವಾಗಿ ಕಳೆಯುತ್ತದೆ.

ಇಷ್ಟೆಲ್ಲ ಪೀಠಿಕೆ ಹೇಳಲು ಕಾರಣ, ಮೂರು ತಿಂಗಳ ಹಿಂದೆ ಮದುವೆಯಾಗಿ ಅತ್ತೆ ಮನೆ ಸೇರಿದ ಅನಿತಾ ನಾಲ್ಕನೇ ತಿಂಗಳು ನನಗೆ ಗಂಡನೊಂದಿಗೆ ಮತ್ತು ಅತ್ತೆಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ತವರಿಗೆ ಬಂದುಬಿಟ್ಟಿದ್ದಳು. ನಾನ್ಯಾವುದೋ ಕಲಿಯಲಾರದ 18 ವಯಸ್ಸಿಗೇ ಮದುವೆ ಮಾಡಿದ ಹುಡುಗಿಯ ಬಗೆಗೆ ಮಾತನಾಡುತ್ತಿಲ್ಲ. ಅನಿತಾ ಸಾಫ್ಟವೇರ್‌ ಇಂಜಿನಿಯರ್‌. ಗಂಡ ಕೂಡ ಸಾಫ್ಟವೇರ್‌ ಇಂಜಿನಿಯರ್‌. ಕೈ ತುಂಬಾ ಸಂಬಳ. ಸುಖೀ ಜೀವನ ನಡೆಸುವರೆಂದು ತಂದೆ- ತಾಯಿ ಹುಡುಕಿ ಮಾಡಿದ ಅರೇಂಜ್‌ ಮ್ಯಾರೇಜ್‌. 

ಇಷ್ಟೆಲ್ಲಾ ಇದ್ದರೂ ಅವಳಿಗೆ ಹೊಂದಿಕೆಯಾಗಲು ಸಾಧ್ಯವಾಗದಿರುವುದಕ್ಕೆ ಕಾರಣ, ನಮ್ಮೆಲ್ಲರಲ್ಲಿಯೂ ಸಹಜ ಸ್ವಾಭಾವಿಕವಾಗಿ ಬೆಳೆಸಿಕೊಂಡು ಬಂದಂತಹಧ್ದೋ? ಅಥವಾ ನಾವು ಬೆಳೆಯುತ್ತಿರುವ ಇಂದಿನ ವಾತಾವರಣದ ಎಫೆಕ್ಟೋ? ಅಂತೂ ನಮ್ಮಲ್ಲಿ ಬೀಡು ಬಿಟ್ಟಿರುವ ಹೊಂದಾಣಿಕೆಯಾಗದ ಸ್ವಭಾವ. ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬಾಳಿನಲಿ… ಎಂದು ಕವಿ ಸುಮ್ಮನೆ ಹೇಳಿರುವರೇ?

ಈ ಸ್ವಭಾವ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ ಎಂದುಕೊಳ್ಳಬೇಕಿಲ್ಲ. ಹೊಂದಾಣಿಕೆ ಎರಡೂ ದಿಕ್ಕಿನಿಂದ ಆಗಬೇಕು. ಆಗ ಮಾತ್ರ ಕೂಡಲು ಸಾಧ್ಯ. ಹಿಂದೆಲ್ಲಾ ಗಂಡ- ಹೆಂಡತಿ ಒಂದೇ ಮನೆಯಲ್ಲಿ ಅವಿಭಜಿತ ಕುಟುಂಬದಲ್ಲಿ ಇದ್ದು ಸಂಸಾರ ನಡೆಸುತ್ತಿದ್ದರು ಎಂದು ನಮ್ಮಜ್ಜಿ ಹೇಳುತ್ತಿದ್ದರು. ಕಾರಣ? ಅವಿಭಜಿತ ಕುಟುಂಬ ಎಂದರೆ ಏನೆನ್ನುವ ಕಲ್ಪನೆಯೂ ಸಹ ತೀರಾ ಇತ್ತೀಚಿಗೆ ನಮ್ಮಲ್ಲಿ ಉಳಿದಿಲ್ಲ. ಆದರೆ ಇಂದೇನಾಗಿದೆ? ನೂರು ದಿವಸವೂ ಸಹ ಸಹನೆಯಿಂದ ಸಂಸಾರ ಮಾಡಲು ಅಸಾಧ್ಯವಾಗುತ್ತಿರುವುದು ಏಕೆ? ಆ ಕಾಲದಲ್ಲಿ ಕೂಡಿರಲು ಇರುವ ಯಾವ ಬಾಂಡಿಂಗ್‌ ಏಜೆಂಟ್‌ ಇಂದು ನಮ್ಮಲ್ಲಿ ದೊರೆಯುತ್ತಿಲ್ಲ! ಹೊಂದಾಣಿಕೆಯೆಂಬ ಬಾಂಡಿಂಗ್‌ ಏಜೆಂಟ್‌ ಕೊರತೆಯಿಂದಾಗಿ ಇಷ್ಟೆಲ್ಲಾ ಅನಾಹುತಗಳು ಸೃಷ್ಟಿಯಾಗಿವೆ ಅಷ್ಟೆ.

Advertisement

ಈ ಬಾಂಡಿಂಗ್‌ ಏಜೆಂಟ್‌ ಎಲ್ಲಿ ದೊರೆಯುತ್ತದೆ ಗೊತ್ತೆ? ನಮ್ಮಲ್ಲಿಯೇ. ನಮ್ಮ ಮನಸ್ಸಿನಲ್ಲಿಯೇ! ಹೊಂದಾಣಿಕೆಯ ಸ್ವಭಾವವೇ ನಮ್ಮ ಮೂಲ ಬಾಂಡಿಂಗ್‌ ಏಜೆಂಟ್‌. ಹೊಂದಿಕೆಯ ಸ್ವಭಾವ ನಮ್ಮೆಲ್ಲರಲ್ಲಿಯೂ ಇದೆ. ಆದರೆ ಸುಳ್ಳು ಅಹಂಭಾವದ ಪರದೆ ಅದರ ಮೇಲೆ ಮುಚ್ಚಿರುವುದರಿಂದ ಅದರ ಹೊಳಪು ನಮಗೆ ಕಾಣುತ್ತಿಲ್ಲ ಅಷ್ಟೇ. ಈ ಕಾರಣಕ್ಕೆ, ಚಿಕ್ಕ ಪುಟ್ಟ ವಿಷಯಗಳಿಂದಲೇ ಹೊಂದಿಕೆ ಅಸಾಧ್ಯವೆನಿಸಲು ಪ್ರಾರಂಭಿಸುತ್ತದೆ. ಗಂಡ ಬೇಗ ತನ್ನ ಮೊಬೈಲ್‌ ಕಾಲ್‌ ರಿಸೀವ್‌ ಮಾಡಿಲ್ಲ ಎಂತಲೋ, ಹೆಂಡತಿ ಮಾರ್ಕೆಟಿಂದ ಬೇಗ ಬರಲಿಲ್ಲವೆಂತಲೋ, ಅತ್ತೆ ಅಡುಗೆ ಮಾಡುವಾಗ ಸ್ವತ್ಛತೆಯ ಬಗೆಗೆ ಗಮನ ಹರಿಸಿಲ್ಲವೆಂತಲೋ, ಸೊಸೆ ತನಗೆ ಬೇಕಾದ ಟಿವಿ ಚಾನೆಲ್‌ ಹಾಕಿಕೊಂಡು ನೋಡುತ್ತಿರುತ್ತಾಳೆ ಎಂತಲೋ ಹೀಗೆ ಸುಖಾಸುಮ್ಮನೆ ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಮನಸ್ತಾಪ ಮಾಡಿಕೊಂಡು ವಿಷಯಗಳು ವಿಕೋಪಕ್ಕೆ ಹೋಗುವಂತೆ ನಾವೇ ಕೈಯ್ನಾರೆ ಮಾಡಿಕೊಳ್ಳುತ್ತೇವೆ. ಇಷ್ಟೊಂದು ಶಿಕ್ಷಣ ಪಡೆದು, ಆರ್ಥಿಕವಾಗಿ ಸಧೃಢರಾಗಿರಬೇಕೆಂದು ಬಯಸುವ ನಮಗೆ ಚಿಕ್ಕ ಪುಟ್ಟ ವಿಷಯಗಳಿಗಾಗಿ ಕಾದಾಡಿ ಹೊಡೆದಾಡುವಷ್ಟು ಸಮಯವಿಲ್ಲ ಎಂಬುದರ ಅರಿವು ಇದ್ದರೂ ಸಹ ನಮ್ಮ ಅಹಂ ನಮ್ಮನ್ನು ಮತ್ತದೇ ದಾರಿಗೆ ತಳ್ಳುತ್ತದೆ. 

ಮೊದಲೆಲ್ಲ ಅವಿಭಜಿತ ಕುಟುಂಬಗಳಿದ್ದುದರಿಂದ ಎಷ್ಟೇ ಮನಸ್ತಾಪಗಳು ಬಂದರೂ ಸಹ ಓರಗಿತ್ತಿಯರ ಮುಂದೆಯೋ, ನಾದಿನಿಯರ ಮುಂದೆಯೋ ಅಥವಾ ಹಿರಿಯಜ್ಜಿಯ ಮುಂದೆಯೋ ಹೇಳಿ ಸಮಾಧಾನ ಪಟ್ಟುಕೊಂಡು ಮರುದಿನ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ನಿರತರಾಗಿಬಿಡುತ್ತಿದ್ದರು. ಇಂದು ಜಗಳವಾಡಿದರೂ ಸಹ ಯಾಕೆ ಜಗಳವಾಡುತ್ತೀರಿ? ಎಂದು ಸಮಾಧಾನದ ಮಾತುಗಳನ್ನಾಡಲು ಮನೆಯ ಇತರ ಸದಸ್ಯರೇ ಇರುವುದಿಲ್ಲ. ಹೀಗಾಗಿ ಗಂಡ ಹೆಂಡತಿಯರ ನಡುವೆ ಚಿಕ್ಕ ವಿಷಯಕ್ಕಾಗಿಯೇ ಬಂದಿರುವ ಮನಸ್ತಾಪ ಕಂದಕವಾಗುತ್ತಾ ಹೋಗುತ್ತದೆ. ಇದರೊಂದಿಗೆ ಪತಿ ಪತ್ನಿ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲೂ ಸಹ ಸಾಧ್ಯವಾಗದಷ್ಟು ಸಮಯದ ಅಭಾವ ಬೇರೆ. ಹೀಗಾಗಿ ಇಂದು ಮನಗಳೊಂದಿಗೆ ಮನೆಗಳೂ ಸಹ ಒಡೆಯುತ್ತಿರುವದು ತೀರಾ ಸ್ವಾಭಾವಿಕ ಎನ್ನುವಂತಾಗಿದೆ.

ಇದಕ್ಕೆ ಪರಿಹಾರ ಇದೆ! ಅದೇ ಹೊಂದಾಣಿಕೆ. ಹೊಂದಾಣಿಕೆ ಎನ್ನುವುದು ಯಾರದೋ ಬೋಧನೆಯಿಂದಲೋ ಅಥವಾ ಸ್ಫೂರ್ತಿದಾಯಕ ಮಾತುಗಳಿಂದಲೋ ಬರುವುದಿಲ್ಲ. ಅದು ಮನದ ಗೂಡಿನಲ್ಲಿರುತ್ತದೆ. ಒಂದು ಬಾರಿ ಜಾಗೃತಗೊಂಡರೆ ಸಾಕು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನೂ ಸಹ ಮರೆತು ನಾವು ಮೊದಲಿನಿಂದಲೂ ಹೀಗೆಯೇ ಅನ್ಯೋನ್ಯವಾಗಿದ್ದೇವೆ ಎನಿಸತೊಡಗುತ್ತದೆ. 

ಹಣ್ಣು ತಿಂದ ಮೇಲಷ್ಟೇ ರುಚಿ ತಿಳಿಯೋದು!
ಜಗತ್ತಿನಲ್ಲಿ ಯಾರೂ ನೂರಕ್ಕೆ ನೂರರಷ್ಟು ಪಫೆಕ್ಟ್ ಆಗಿರುವುದಿಲ್ಲ, The complete man or woman ಕೇವಲ ಜಾಹಿರಾತಿನಲ್ಲಿ ಮಾತ್ರ ಕಾಣಸಿಗುತ್ತಾರೆ. ಚಿನ್ನವನ್ನೇ ಅಪ್ಪಟವಾಗಿ ಬಳಸಲು ಸಾಧ್ಯವಿಲ್ಲ. ತಾಮ್ರವನ್ನು ಕೂಡಿಸಿದಾಗಲೇ ಅದೊಂದು ಆಭರಣವಾಗಲು ಸಾಧ್ಯ. ಅದರಂತೆ ಗಂಡ ಹೆಂಡತಿಯನ್ನು ಅವಳಿರುವಂತೆಯೇ ಒಪ್ಪಿಕೊಳ್ಳಬೇಕು. ಹೆಂಡತಿಯೂ ಸಹ ಗಂಡನನ್ನು ಆತನಿರುವಂತೆಯೇ ಒಪ್ಪಿಕೊಳ್ಳಬೇಕು. ನಂತರದ ಗಮ್ಮತ್ತನ್ನು ಅನುಭವಿಸಿಯೇ ತಿಳಿಯಬೇಕು. ಆತನಲ್ಲಿರುವ ಕೆಲ ಗುಣಗಳು ಹೆಂಡತಿಗೆ ಹಿಡಿಸದಿದ್ದಲ್ಲಿ ಅಥವಾ ಅವಳಲ್ಲಿರುವ ಕೆಲ ಗುಣಗಳು ಅವನಿಗೆ ಹಿಡಿಸಿದಿದ್ದಾಗ ಹೊಂದಾಣಿಕೆ ಸ್ವಲ್ಪ ಕಷ್ಟವೆನಿಸಿದಾಗ ಇಬ್ಬರ ಬತ್ತಳಿಕೆಯಲ್ಲಿಯೂ ಸದಾಕಾಲ ಎಲ್ಲಾ ಪ್ರಾಬ್ಲಿಂಗಳಿಗೂ ಸೊಲ್ಯೂಶನ್‌ ಎಂದು ಇಟ್ಟುಕೊಂಡಿರುವ ಬಾಣವೇ ಪ್ರೀತಿ… ಒಮ್ಮೆ ಇಬ್ಬರೂ ಬಾಣ ಬಿಟ್ಟು ನೋಡಿ, ಎಷ್ಟು ಕಷ್ಟವೋ ಹೊಂದಿಕೆಯೆಂಬುದು ಹೋಗಿ ಎಷ್ಟು ಸುಲಭ ಸುಂದರವೋ ಹೊಂದಿಕೆಯೆಂಬುದು ಎಂಬುದನ್ನು ನೀವೇ ತಿದ್ದಿಕೊಳ್ಳುತ್ತೀರಿ. ಬೇಕಾದರೆ ಒಂದು ಬಾರಿ ಪ್ರಯತ್ನಿಸಿ ನೋಡಿ. ಹಣ್ಣು ತಿಂದ ಮೇಲೆಯೇ ಅದರ ರುಚಿ ತಿಳಿಯುವುದಲ್ಲವೆ? ಒಂದು ಹೆಜ್ಜೆ ಮುಂದೆ ಬಂದು ನಕ್ಕು ಕೈ ಕುಲುಕಿ ನೋಡಿ. ಒಲವೇ ನಮ್ಮ ಬದುಕು ಅನ್ನೋ ಬದುಕು ನಮ್ಮದಾಗಿಬಿಟ್ಟರೆ ಬಾಳು ನಂದನವನವಾಗುವುದರಲ್ಲಿ ಸಂಶಯವಿಲ್ಲ.

ಮೃಣಾಲಿನಿ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next