ಕಲಬುರಗಿ: ಮನುಷ್ಯನ ಬದುಕು ಮತ್ತು ಜಾನಪದ ಸಾಹಿತ್ಯಕ್ಕೆ ಅತ್ಯಂತ ಹತ್ತಿರವಾದ ಸಂಬಂಧವಿದ್ದು, ಜಾನಪದದ ಪ್ರತಿ ಸಾಲಿನಲ್ಲಿಯೂ ಜೀವನದ ಪಾಠಗಳನ್ನು ಹೇಳಿಕೊಡಲಾಗಿದೆ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.
ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಜಾನಪದ ಪರಿಷತ್ ಹಾಗೂ ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಸ್ಥಾಪನಾ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾನಪದ ಮನುಷ್ಯನಿಗೆ ಜೀವಿಸುವುದನ್ನು ಕಲಿಸಿಕೊಡುತ್ತದೆ. ಜತೆಗೆ ದಂಪತಿಯಲ್ಲಿ ಸಮಾನತೆ ಬೆಳೆಸುತ್ತದೆ. ಸಂಸಾರದ ಬಂಡಿ ಸುಸೂತ್ರವಾಗಿ ನಡೆಯುವಂತೆ ಮಾಡುತ್ತದೆ ಎಂದರು. ಸಾಹಿತಿ ಮಂಗಳಾ ಕಪರೆ ಮಾತನಾಡಿ, ಡಾ| ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದ್ದಾರೆ. ಇದರಿಂದಲೇ ಇಂದು ಮಹಿಳೆಯರು ಪುರುಷರಷ್ಟೇ ಸಮಾನ ಹಕ್ಕು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು,
ಇದೇ ವೇಳೆ ಮಹಿಳಾ ಸಾಧಕರಾದ ಡಾ| ನಾಗರತ್ನ ದೇಶಮಾನೆ, ಭಾರತಿಬಾಯಿ ಧನ್ನಿ, ಸಿಂಧುಮತಿ ಭೋಸಲೆ, ತಾರಾಬಾಯಿ ಬಿಳಲ್ ಕರ್, ಮಹಾದೇವಿ ಮುರಡಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ, ಚಿತ್ರಲೇಖಾ, ಜಾವೀದಾ, ಸುರೇಶ ಬಡಿಗೇರ, ಲಕ್ಷ್ಮಣ ಕಾಂಬಳೆ, ಸುಭಾಷ ಚಕ್ರವರ್ತಿ, ನಿಂಗಣ್ಣ ಪೂಜಾರಿ, ಹಣಮಂತ ಮಡಪೆ, ಸಿದ್ಧರಾಮ ಶೆಳ್ಳಗಿ, ಶಿವಶಂಕರ ವರ್ಮಾ, ಸಿದ್ದರಾಮ ಪೊಲೀಸ್ ಪಾಟೀಲ, ಶಿವಲಿಂಗಪ್ಪ ಗೌಳಿ, ಜ್ಯೋತಿಲಕ್ಷ್ಮಿಇದ್ದರು.