Advertisement
ಬದುಕೇ ದೊಡ್ಡದು ಎನ್ನುತ್ತದೆ ನೂರಾರು ಕಿ.ಮೀ. ದೂರದಿಂದ ಬಂದು ಆದಿ ಉಡುಪಿಯಲ್ಲಿ ಬೀಡು ಬಿಟ್ಟು ಶ್ರಮಪಡುತ್ತಿರುವ ಪಂಜಾಬ್‌ನ ಸಿಂಗ್ ಕುಟುಂಬ. ಗುಡಿ ಕೈಗಾರಿಕೆಗಳೆಲ್ಲ ಬದಿಗೆ ಸರಿದು ಯಂತ್ರಗಳಿಂದ ಸಾಮೂಹಿಕ ಉತ್ಪಾದನೆಯ ಕಾಲವಿದು. ಕಮ್ಮಾರ ಎಂಬ ಕುಲಕಸುಬೇ ಕಾಣೆಯಾಗಿರುವ ಸಂದರ್ಭದಲ್ಲಿ ಅದನ್ನು ನೆನಪಿಸುತ್ತಿದೆ ಈ ಸಿಂಗ್ ಕುಟುಂಬ. ವಾಹನದ ಕಬ್ಬಿಣದ ಬಿಡಿಭಾಗಗಳನ್ನು ಕೆಂಪಗೆ ಕಾಯಿಸಿ, ಹೊಡೆದು, ಬಡಿದು ಕತ್ತಿ, ಕೊಡಲಿಗಳನ್ನು ರೂಪಿಸುವುದು ಇವರ ಕಾಯಕ. ಅದೇ ಅವರ ಬದುಕಿನ ನಿರ್ವಾಹಕ. ಹೆಲಿಪ್ಯಾಡ್ ಬಳಿ ಎರಡು ಕುಟುಂಬಗಳಿವೆ. ಕಾಯಕವೇ ಕೈಲಾಸ ಎಂಬುದು ಇವರ ಧರ್ಮ. ಸ್ಪ್ರಿಂಗ್‌ಪ್ಲೇಟ್‌ಗಳನ್ನು ಬಳಸಿ ಕತ್ತಿ, ಕೊಡಲಿ ಮತ್ತು ಮಚ್ಚುಗಳನ್ನು ತಯಾರಿಸಿದರೆ ಅವು ಸುದೀರ್ಘಕಾಲ ಹರಿತವಾಗಿಯೇ ಉಳಿಯುತ್ತವೆ, ತುಕ್ಕು ಹಿಡಿಯುವುದಿಲ್ಲ ಎಂಬ ಮಾತಿದೆ. ಪತ್ನಿ, ಮಕ್ಕಳು ಹೆಚ್ಚು ತೂಕದ ಸುತ್ತಿಗೆಯನ್ನು ಎತ್ತಿ ಕಬ್ಬಿಣವನ್ನು ತಮ್ಮಿಷ್ಟದ ಆಕಾರಕ್ಕೆ ತರುವ ಸನ್ನಿವೇಶ ಬೆರಗುಗೊಳಿಸುವಂಥದ್ದು. ಸುಮಾರು ಎರಡು ನೂರರಿಂದ ಒಂದು ಸಾವಿರ ರೂ. ವರೆಗೂ ಈ ಆಯುಧಗಳಿಗೆ ಬೆಲೆ. ಈ ಊರಿಗೆ ಬಂದು ಎರಡು ತಿಂಗಳಾದವು. ಅತ್ಯಧಿಕ ಲಾಭವಿಲ್ಲ. ಆದರೆ ಬದುಕಲು ಅಡ್ಡಿಯಿಲ್ಲ ಎನ್ನುತ್ತಾರೆ ಹರ್‌ಪ್ರೀತ್ ಸಿಂಗ್.
Related Articles
Advertisement