ಈಗಲೂ ಆಕಸ್ಮಿಕವಾಗಿ ಹೆಡ್ಮಾಸ್ತರರು ಎದುರಾದಾಗ, ಅವರ ಕೈಲಿ ಬೆತ್ತವಿದೆಯೋ ಹೇಗೆ ಎಂದು ಹುಷಾರಾಗಿ ಗಮನಿಸುತ್ತೇನೆ. ಬೆತ್ತವಿಲ್ಲ ಅನ್ನೋದು ಖಾತ್ರಿಯಾದ ಮೇಲಷ್ಟೇ ನನ್ನ ಉಸಿರಾಟ ಸರಾಗವಾಗುತ್ತದೆ!
ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಎರಡನೇ ತರಗತಿಯಲ್ಲಿದ್ದೆ. ಆಗ ಅಂಗನವಾಡಿ ಜಾರಿಯಲ್ಲಿ ಇಲ್ಲದ್ದರಿಂದ ನೇರವಾಗಿ ಒಂದನೇ ತರಗತಿಗೆ ಪ್ರವೇಶ ಪಡೆದ ಅದೃಷ್ಟ ನಮ್ಮದು. ಶಾಲೆ ಎಂದರೆ ನನಗಂತೂ ಜೈಲಿನಂತೆ. ಮನೆಯವರ ಒತ್ತಡಕ್ಕೆ ಶಾಲೆಗೆ ಹೋಗುತ್ತಿದ್ದ ನಾನು ಪಾಟಿಚೀಲವನ್ನು ಮಾತ್ರ ಶಾಲೆಯಲ್ಲಿರಿಸಿ, ಇಡೀ ದಿನ ಗೆಳೆಯರ ಜೊತೆ ಗ್ರಾಮದ ಹನುಮಪ್ಪ ದೇವಸ್ಥಾನದಲ್ಲೇ ಇರುತ್ತಿದ್ದೆ. ಗುಡಿಯ ಗಂಟೆ ಗಡಿಯಾರ ನಾಲ್ಕು ಶಬ್ದ ಮಾಡಿತೆಂದರೆ ಶಾಲೆ ಬಿಡುವ ಹೊತ್ತು ತಿಳಿಯುತ್ತಿತ್ತು. ಆಗ, ನಾನು ಮತ್ತು ನನ್ನ ಜತೆಗಾರರು, ಶಾಲೆ ಕಡೆ ಹೋದವರು ಒಳಗೆ ನುಸುಳಲು ಸಾಧ್ಯವಿದ್ದರೆ ನುಸುಳಿ ಎಲ್ಲ ಮಕ್ಕಳೊಂದಿಗೆ ಬೆರೆತು ಸಭ್ಯರಂತೆ ಪಾಟೀಚೀಲವನ್ನು ಹೆಗಲಿಗೇರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆವು. ಒಳ ಹೋಗಲು ಸಾಧ್ಯವಾಗದಿದ್ದರೆ, ಉಳಿದ ಗೆಳೆಯರು ನಮ್ಮ ಚೀಲ ತಂದುಕೊಟ್ಟು ಪರೋಪಕಾರ ಮೆರೆಯುತ್ತಿದ್ದರು.
ದಿನಗಳೆದಂತೆ ನಮ್ಮ ಈ ನಿರಂತರ ಚಕ್ಕರ್ ಚಟುವಟಿಕೆ ನಮ್ಮ ಸೀನಿಯರ್‌ಗಳಿಗೆ ಮತ್ಸರವನ್ನುಂಟು ಮಾಡಿತು. ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಸೀನಿಯರ್‌ಗಳಾದ ಲಕ್ಷ್ಮಣ, ಕುರಿ ವಸಂತ, ಕುಂಟನಾಗ, ನಾಯಕರ ಲಚ್ಚ ಹಾಗೂ ಇನ್ನೊಂದಷ್ಟು ಜನ ಸೇರಿ ಸಭೆ ನಡೆಸಿ, ಶಾಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ನಮ್ಮನ್ನು ಹೇಗಾದರೂ ಮಾಡಿ ಸರಿದಾರಿಗೆ ತರಬೇಕೆಂದು ತೀರ್ಮಾನಿಸಿದ್ದರು. ಮೊದಲೊಮ್ಮೆ ಬಣ್ಣದ ಮಾತಿನಿಂದ ನಂಬಿಸಿ ಶಾಲೆಗೆ ಕರೆದೊಯ್ದು ಯಂಕಪ್ಪ ಮಾಸ್ತರರ ಕೈಯಿಂದ ಬೆತ್ತದ ರುಚಿ ಉಣಿಸಿದ್ದರಿಂದ ನಮಗೆಲ್ಲ ಅವರು ಮಹಾನ್ ಶತ್ರುಗಳಂತೆ ಕಾಣಿಸುತ್ತಿದ್ದರು. ನಂತರ ಅವರ ಬಣ್ಣದ ಮಾತಿಗೆ ನಾವು ಸೊಪ್ಪು ಹಾಕದ ಕಾರಣ, ಯಂಕಪ್ಪ ಮಾಸ್ತರರ ಕುಮ್ಮಕ್ಕಿನ ಮೇರೆಗೆ ನಮ್ಮನ್ನು ಬಲವಂತವಾಗಿ ಹೊತ್ತುಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದರು. ಆಗ ಕುಂಟನಾಗನದು ನನ್ನ ಪಾಟೀಚೀಲ ಹೊರುವ ಕಾಯಕವಾದರೆ ಉಳಿದವರಿಗೆ ನನ್ನನ್ನು ಹೊತ್ತುಕೊಂಡು ಸಾಗುವ ಕಾಯಕ. ಅವರಿಂದ ತಪ್ಪಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದೆನಾದರೂ ಸಾಧ್ಯವಾಗದ ಕಾರಣ ಒಮ್ಮೆ ವಸಂತನ ಬಲಗೈಗೆ ಕಚ್ಚಿ ಗಾಯ ಮಾಡಿ ತಪ್ಪಿಸಿಕೊಂಡು ಹೋಗಿದ್ದೆ. ಕೊನೆಗೊಂದು ದಿನ ಅವರೆಲ್ಲ ಸೇರಿ ನನ್ನನ್ನು ಹೊತ್ತುಕೊಂಡು ಹೋಗಿ, ಹೆಡ್ಮಾಸ್ತರ್ ಹನುಮಂತಪ್ಪ ನಾಯಕರ ಮುಂದೆ ಪ್ರತಿಷ್ಟಾಪಿಸಿಬಿಟ್ಟರು! ಅತ್ತ ದರಿ, ಇತ್ತ ಪುಲಿ ಎಂಬಂತಾಗಿತ್ತು ನನ್ನ ಪಾಡು.
ಧಡೂತಿ ದೇಹ, ಉರಿಗಣ್ಣು, ಮೈ ಜುಮ್ಮೆನ್ನುವಂಥ ಧ್ವನಿಯ ಹೆಡ್ ಮಾಸ್ತರರ ಮುಂದೆ ನಿಂತು, ಮೇಲಕ್ಕೆ ಕೆಳಕ್ಕೆ ನೋಡುವುದೊಂದನ್ನು ಬಿಟ್ಟರೆ ನನಗೆ ಬೇರೆ ಗತಿ ಇರಲಿಲ್ಲ. ಮಾತು ಗಂಟಲಿನಿಂದ ಹೊರ ಬರುವುದಂತೂ ಅಸಾಧ್ಯ. ನೆನಪಿಸಿಕೊಂಡರೆ ಈಗಲೂ ನಡುಕ. ಅಂಥ ವ್ಯಕ್ತಿತ್ವ ನಮ್ಮ ಮಾಸ್ತರರದ್ದು. ನಮ್ಮ ಘನ ಕಾರ್ಯದ ಬಗ್ಗೆ ಅವರಿಗೆ ಪೂರ್ವ ಮಾಹಿತಿ ಇದ್ದ ಕಾರಣ, ಹೆಚ್ಚಿನ ವಿಚಾರಣೆಗೊಳಪಡಿಸದೇ “ಕಪ್ಪು ಸುಂದರಿ’ ಎಂದೇ ಕರೆಸಿಕೊಳ್ಳುತ್ತಿದ್ದ ಬೆತ್ತದಿಂದ ಮರೆಯಲಾಗದ ನೆನಪಿನ ಕಾಣಿಕೆ ನೀಡಿದರು! ಆ ದಿನ ನನ್ನ ಪಾಲಿಗೆ ದುರದೃಷ್ಟದ ದಿನವಾದರೂ, ವಿದ್ಯಾಭ್ಯಾಸಕ್ಕೆ ತಿರುವು ಕೊಟ್ಟ ದಿನವದು. ಆ ಕಪ್ಪು ಸುಂದರಿಯ ಹೊಡೆತದ ರಭಸಕ್ಕೆ ಹೆದರಿ, ಇನ್ನೆಂದೂ ಶಾಲೆ ತಪ್ಪಿಸುವ ಸಾಹಸಕ್ಕೆ ತಲೆ ಹಾಕಲಿಲ್ಲ.
ಈಗಲೂ ನಮ್ಮ ಹೆಡ್ಮಾಸ್ತರರು ಅಪರೂಪಕ್ಕೊಮ್ಮೆ ಕಂಡಾಗಲೆಲ್ಲ ಕಣ್ಣುಗಳು ನನಗೆ ಅರಿವಿಲ್ಲದೆಯೇ ಅವರ ಬಲಗೈಯತ್ತ ತಿರುಗಿ ಅಲ್ಲಿ ಕಪ್ಪು ಸುಂದರಿ ಇಲ್ಲವೆಂದು ಖಾತ್ರಿಪಡಿಸಿಕೊಳ್ಳುತ್ತವೆ. ಎತ್ತಲೋ ಸಾಗಬಹುದಾಗಿದ್ದ ನನ್ನ ಬದುಕಿನ ಬಂಡಿಯನ್ನು ಸರಿದಾರಿಗೆ ತಂದವರು ಅನೇಕರು. ಕೈ ಕಚ್ಚಿಸಿಕೊಂಡೋ, ಹೊತ್ತುಕೊಂಡೋ ಕಷ್ಟಪಟ್ಟು ಕಾಳಜಿಯಿಂದ ನಾನು ಶಾಲೆ ತಪ್ಪಿಸದಂತೆ ನೋಡಿಕೊಂಡ ಹಿರಿಯ ಗೆಳೆಯರನ್ನು ಎಷ್ಟು ಸ್ಮರಿಸಿದರೂ ಸಾಲದು. ಈಗ ನಾನೂ ಒಬ್ಬ ಶಿಕ್ಷಕನಾಗಿದ್ದು, ನನ್ನ ಬದುಕಿಗೆ ತಿರುವು ಕೊಟ್ಟ “ಕಪ್ಪು ಸುಂದರಿ’ ಕಂಡಾಗಲೆಲ್ಲಾ ಮಗುವಾಗಿ ಬಿಡುತ್ತೇನೆ.
ಸೋಮಲಿಂಗಪ್ಪ, ಬೆಣ್ಣಿ ಗುಳದಳ್ಳಿ