Advertisement

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

06:11 PM Apr 19, 2024 | Team Udayavani |

■ ಉದಯವಾಣಿ ಸಮಾಚಾರ
ಶಿರಸಿ: ಧರ್ಮದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮದಲ್ಲಿ ನಡೆಯಲು ಗುರುವಿನ ಉಪದೇಶ ಪಡೆದು ಮುನ್ನಡೆಯಬೇಕು ಎಂದು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ನುಡಿದರು.

Advertisement

ಗುರುವಾರ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಆಶೀರ್ವಚನ ನೀಡಿದರು. ಜೀವನ-ಬದುಕು ನಡೆಸುವುದು ಎಂದರೆ ಪ್ರಾಣಿಗಳೂ ಜೀವನ ಮಾಡುತ್ತವೆ. ಆದರೆ ಮನುಷ್ಯ ಅದಕ್ಕಿಂತ ಬೇರೆಯಾಗಿದ್ದಾನೆ. ಮನುಷ್ಯ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆಗ ಈ ಜನ್ಮಸಾರ್ಥಕ ಆಗುತ್ತದೆ. ಧರ್ಮಾಚರಣೆಯಿಂದ ಇದು ಸಾಧ್ಯ. ಪರಂಪರೆಯ ಗುರುಗಳಿಂದ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯ ನಡೆದಿದೆ ಎಂದರು.

ಧರ್ಮ ಮಾರ್ಗ ಬೋಧಿಸಿ, ನಿಷ್ಠೆ ತೋರಿದವರು ಶಂಕರಾಚಾರ್ಯರು. ಧರ್ಮವನ್ನು ದೃಢವಾಗಿ ಸ್ಥಾಪಿಸಿದ್ದಾರೆ. ಆಕ್ರಮಣ ಆದರೂ, ಆಗುತ್ತಿದ್ದರೂ ಧರ್ಮ ನಿಂತಿದೆ. ಶ್ರೀ ಶಂಕರರು ದೃಢವಾಗಿ ಧರ್ಮ ಸ್ಥಾಪನೆ ಮಾಡಿದ್ದು ಅದಕ್ಕೆ ಕಾರಣ. ರಾಗ, ದ್ವೇಷ ಇಲ್ಲದವರು ಸನ್ಯಾಸಿಗಳು. ಶಿಷ್ಯರಿಗೆ ವೈರಾಗ್ಯದಿಂದ ಮಾರ್ಗದರ್ಶನ ಮಾಡುತ್ತಾರೆ. ಧಾರ್ಮಿಕ ಉನ್ನತಿಗೆ, ಧರ್ಮಾಚರಣೆಗೆ ಗುರುವಿನ ಮಾರ್ಗದರ್ಶನ ಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಬ್ಧ ಎಂಬ ಬೆಳಕು ಬೆಳಗದೇ ಇದ್ದರೆ ಮೂರು ಲೋಕಗಳು ಕತ್ತಲಾಗುತ್ತಿದ್ದವು. ಶಂಕರಾಚಾರ್ಯರು ಎಂಬ ಅವತಾರಿಗಳು ಬಾರದೇ ಇದ್ದರೆ ಲೋಕ ಅಂಧಕಾರದಲ್ಲಿ ಇರುತ್ತಿತ್ತು. ಅವರಿಂದ ಜ್ಞಾನ ಎಂಬ ಬೆಳಕು ಬಂತು. ವೇದೋಕ್ತ ಜ್ಞಾನ ಕಾಂಡಕ್ಕೆ ಶಂಕರರಿಂದ ಬೆಳಕು ಬಂದಿದೆ. ಭಗವದ್ಗೀತೆ ಗಮನಕ್ಕೆ ಬರಲು ಅವರ ಭಾಷ್ಯವೇ ಕಾರಣ. ಜ್ಞಾನದ ಬೆಳಕು ಇಷ್ಟೊಂದು ಬರಲು ಶಂಕರರೇ ಕಾರಣ ಎಂದರು.

ಮಠಗಳಲ್ಲಿ ಜ್ಞಾನದ ಪರಂಪರೆ ಇಂದಿಗೂ ಮುನ್ನಡೆಯುತ್ತಿದೆ. ಶೃಂಗೇರಿಯಲ್ಲಿ ಪರಂಪರೆ ಮುಂದುವರಿದಿದೆ. ಆನಂದದ
ಅನುಭವ ಜೀವನದಲ್ಲಿ ಮುಖ್ಯ. ಧರ್ಮದ ಅನುಭವ ಹೇಳುವಾಗಲೂ ಅದನ್ನೇ ಹೇಳುವರು. ಅಂತರಾತ್ಮಕ್ಕೆ ತೃಪ್ತಿ ಆದರೆ
ಆನಂದದ ಅನುಭವ ಬರುತ್ತದೆ. ಆನಂದದ ಅನುಭವ ಆಗಬೇಕಾದರೆ ಸಂತುಷ್ಟಿಯಿಂದ ಆತ್ಮ ಸಾಕ್ಷಿಯಾಗಬೇಕು. ಅದೇ ಧರ್ಮ.
ಶೃಂಗೇರಿ ಜಗದ್ಗುರುಗಳು ಶ್ರೀ ಮಠಕ್ಕೆ ಆಗಮಿಸಿದ್ದು ಆನಂದ ಉಂಟಾಗಿದೆ ಎಂದರಲ್ಲದೇ ಮಠದಲ್ಲಿ ನಡೆದ ಶಿಷ್ಯ ಸ್ವೀಕಾರದ ಅನುಭವ ಹಂಚಿಕೊಂಡರು. ಶ್ರೀ ಆನಂದಬೋಧೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್‌.ಹೆಗಡೆ ಬೊಮ್ಮನಳ್ಳಿ ಪಾದಪೂಜೆ ನೆರವೇರಿಸಿದರು.

Advertisement

ಕಾರ್ಯದರ್ಶಿ ಗಣಪತಿ ಹೆಗಡೆ ಗೊಡವೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು. ರಾಜರಾಜೇಶ್ವರಿ ಸಂಸ್ಕೃತ
ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು. ವಸಂತವೇದ ಶಿಭಿರಾರ್ಥಿಗಳು, ಭಕ್ತರು-ಶಿಷ್ಯರು
ಭಾಗವಹಿಸಿದ್ದರು. ಕಿರುಕುಂಭತ್ತಿ ಮಹಾಬಲೇಶ್ವರ ಭಟ್ಟ ನಿರ್ವಹಿಸಿದರು. ಮಾತೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಗುರುವಿನ ಮಾರ್ಗವನ್ನು ಶ್ರದ್ಧೆಯಿಂದ ಪಾಲಿಸಬೇಕು. ಗುರುವಿನ ಎದುರು ಶಿಷ್ಯರು ಶಿಷ್ಯರಾಗಿಯೇ ಇರಬೇಕು.
* ವಿಧುಶೇಖರ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next