Advertisement

ಮಳೆಯಲ್ಲಿ ತೇಲಿ ಹೋಗುತ್ತಿದೆ ಬದುಕು; ಕೇರಳದಲ್ಲಿ ಮೂವರ ಸಾವು

09:17 PM Jul 24, 2023 | Team Udayavani |

ನವದೆಹಲಿ: ದೇಶಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಹಲವೆಡೆ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಗುಜರಾತ್‌, ದೆಹಲಿ, ಉತ್ತರಾಖಂಡ, ಕೇರಳ, ಮಹಾರಾಷ್ಟ್ರ, ಒಡಿಶಾದ ಹಲವು ಜಿಲ್ಲೆಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ.

Advertisement

ಕೇರಳದಲ್ಲಿ ಮೂವರ ಸಾವು: ಕೇರಳದ ವಯನಾಡ್‌ ಮತ್ತು ತ್ರಿಶ್ಶೂರ್‌ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಕಾರಣ ಮೂವರು ಮೃತಪಟ್ಟಿದ್ದಾರೆ. ವಯಾನಾಡ್‌ ಜಿಲ್ಲೆಯಲ್ಲಿ ಹಧಿ ಮತ್ತು ಹಶೀರ್‌ ಎಂಬ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತ್ರಿಶ್ಶೂರ್‌ ಜಿಲ್ಲೆಯಲ್ಲಿ ಯುವಕನೊಬ್ಬ ಅಸುನೀಗಿದ್ದಾನೆ. ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕಲ್ಲಿಕೋಟೆ, ವಯನಾಡ್‌ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕೊಚ್ಚಿಹೋದ ಸಿಲಿಂಡರ್‌ಗಳು: ದಕ್ಷಿಣ ಗುಜರಾತ್‌ನ ಕೆಲವು ಜಿಲ್ಲೆಗಳು ಹಾಗೂ ಸೌರಾಷ್ಟ್ರ-ಕಛ… ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಗುಜರಾತ್‌ನ ನವಸಾರಿಯಲ್ಲಿ ಸಿಲಿಂಡರ್‌ ಗೋದಾಮಿನಲ್ಲಿ ಸಂಗ್ರಹಿಸಿದ್ದ 100ಕ್ಕೂ ಹೆಚ್ಚು ಸಿಲಿಂಡರ್‌ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿರುಮಳೆಯಲ್ಲಿ ತಣ್ಣಗೆ ನಡೆದುಹೋದ ಸಿಂಹ
ಗುಜರಾತ್‌ನ ಜುನಾಗಢದಲ್ಲಿ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಈ ನಡುವೆ ಸಿಂಹವೊಂದು ವಾಹನಗಳು ಸಂಚರಿಸುತ್ತಿರುವ ಫ್ಲೈಓವರ್‌ನಲ್ಲಿ ರಸ್ತೆಯಲ್ಲಿ ಶಾಂತವಾಗಿ ನಡೆದು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೆಲವರು ತಮ್ಮ ಕಾರು ನಿಲ್ಲಿಸಿ, ಸಿಂಹದ ಫೋಟೊ ತೆಗೆದು, ವಿಡಿಯೊ ಮಾಡಿದ್ದಾರೆ. ಈ ಕುರಿತು ವಿಡಿಯೊ ಸಮೇತ ಮಾಜಿ ಕ್ರಿಕೆಟಿಗ ಸೈಯದ್‌ ಸಾಬಾ ಕರೀಮ್‌ ಟ್ವೀಟ್‌ ಮಾಡಿದ್ದಾರೆ.

ಬೆಳೆಗಳು ಹಾಳು
ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯ ಕಿನ್ವತ್‌ ತಾಲೂಕಿನಲ್ಲಿ ರೈತರು 13,246 ಹೆಕ್ಟೆರ್‌ನಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿವೆ. ಸರ್ವೆ ಪ್ರಕಾರ, 176 ಗ್ರಾಮಗಳ 21,415 ರೈತರಿಗೆ ಇದರಿಂದ ನಷ್ಟವಾಗಿದೆ. ಇನ್ನೊಂದೆಡೆ, ಕಳೆದ ವಾರ ಭೂಕುಸಿತದಿಂದ 27 ಮಂದಿ ಮೃತಪಟ್ಟ ರಾಯ್‌ಗಢ ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ(ಎನ್‌ಡಿಆರ್‌ಎಫ್) ಬೇಸ್‌ ಕ್ಯಾಂಪ್‌ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪ್ರಸ್ತಾಪ ಸಲ್ಲಸಿದೆ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ತಿಳಿಸಿದ್ದಾರೆ. ಇನ್ನೊಂದಡೆ, ರಾಯ್‌ಗಢ ಜಿಲ್ಲೆಯ ಇರ್ಶಲ್‌ವಾಡಿ ಗ್ರಾಮದಲ್ಲಿ ಉಂಟಾದ ಭೂಕುಸಿತದಲ್ಲಿ ಸಂತ್ರಸ್ತರಿಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಸೋಮವಾರವೂ ಶೋಧ ಕಾರ್ಯ ಮುಂದುವರಿಸಿದ್ದಾರೆ.

Advertisement

ಉತ್ತರಾಖಂಡ: ಕೊಚ್ಚಿ ಹೋದ ರಸ್ತೆ
ಉತ್ತರಾಖಂಡದಲ್ಲಿ ತೀವ್ರವಾಗಿ ಮಳೆಯಾಗುತ್ತಿದೆ. ರಾತ್ರಿಯಲ್ಲ ಸುರಿದ ಮಳೆಯಿಂದಾಗಿ ಪ್ರಸಿದ್ಧ ಯಾತ್ರಾಸ್ಥಳ ಬದರಿನಾಥವನ್ನು ಸಂಪರ್ಕಿಸುವ ಹೆದ್ದಾರಿ ಹಾನಿಯಾಗಿದೆ. ಕಮೆರಾದಲ್ಲಿ ಗೌಚರ್‌-ಬದರಿನಾಥ್‌ ಹೆದ್ದಾರಿಯ 100 ಮೀಟರ್‌ ರಸ್ತೆ ಮಳೆಯಲ್ಲಿ ಕೊಚ್ಚಿ ಹೋಗಿದೆ. ಇನ್ನೊಂದೆಡೆ, ಗೌಚರ್‌ ಸಮೀಪದ ಭಟ್‌ನಗರದಲ್ಲಿ ರಸ್ತೆಯ ಕೆಲವು ಭಾಗ ಕುಸಿದಿದ್ದು, ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಿದ್ದ ಐದು ವಾಹನಗಳು ಅವಶೇಷಗಳಡಿ ಸಿಲುಕಿವೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಯಮುನೆ
ನಿರಂತರ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಯುಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ನೀರು ಆಯೋಗದ ಮಾಹಿತಿ ಪ್ರಕಾರ, ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ, ಯುಮುನಾ ನದಿಯ ನೀರಿನ ಮಟ್ಟ 206.45 ಮೀ. ಇದರ ಅಪಾಯದ ಮಟ್ಟವು 205.33 ಮೀ.

Advertisement

Udayavani is now on Telegram. Click here to join our channel and stay updated with the latest news.

Next