Advertisement

ಹಾಸ್ಯಪ್ರಜ್ಞೆ ಇಲ್ಲದ ಜೀವನ ನೀರಸ : ತರಳಬಾಳು ಶ್ರೀ

11:16 AM Mar 21, 2022 | Team Udayavani |

ದಾವಣಗೆರೆ: ಪ್ರತಿಯೊಬ್ಬರೂ ಹಾಸ್ಯಪ್ರಜ್ಞೆ ಹೊಂದಿರಬೇಕು. ಹಾಸ್ಯದ ಪ್ರಜ್ಞೆ ಇಲ್ಲದೇ ಹೋದಲ್ಲಿ ಜೀವನ ಮಾಮೂಲು ಮತ್ತು ನೀರಸವಾಗಿ ಹೋಗುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಕನ್ನಡ ಕುವೆಂಪು ಭವನದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ| ಎಸ್‌.ಬಿ. ರಂಗನಾಥ್‌ ಅವರಿಗೆ ಸಹಸ್ರ ಚಂದ್ರದರ್ಶನ ಅಭಿನಂದನೆ ಮತ್ತು “ರಂಗ ವಿಸ್ತಾರ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಬದುಕಿನಲ್ಲಿ ಹಾಸ್ಯಮನೋಭಾವ ಇರಬೇಕು. ಆಗ ಸಹಜವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಾಸ್ಯ ಅಪಹಾಸ್ಯವೂ ಆಗಬಾರದು. ಒಳ್ಳೆಯ ಮಾತುಗಳು ಅನೇಕ ಬಾರಿ ಒಳ್ಳೆಯ ಹಾಸ್ಯಕ್ಕೆ ಕಾರಣವಾಗುತ್ತವೆ ಎಂಬುದು ತಮ್ಮ ಸ್ವ ಅನುಭವಕ್ಕೆ ಬಂದಿದೆ ಎಂದರು.

ನಮ್ಮ ದೊಡ್ಡ ಗುರುಗಳು ಬಹಳ ಹಾಸ್ಯಪ್ರಜ್ಞೆ ಹೊಂದಿದ್ದರು. ಕಾರ್ಯಕ್ರಮಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಡೊಳ್ಳು ಬಾರಿಸುವವರು, ಇನ್ನೊಬ್ಬ ಸ್ವಾಮೀಜಿಯೊಬ್ಬರು ಬರುತ್ತಾರೆ. ಇಬ್ಬರು ಒಟ್ಟಿಗೆ ಹೋದರಾಯಿತು ಎಂದರಂತೆ. ಆಗ ದೊಡ್ಡ ಸ್ವಾಮೀಜಿಯವರು, ಅವರಿಗೆ ಚೆನ್ನಾಗಿ ಬಾರಿಸಿ ಕರೆದುಕೊಂಡು ಬನ್ನಿ, ನಾವು ವೇದಿಕೆಗೆ ಹೋಗುತ್ತೇವೆ ಎಂದು ಹೇಳಿದರಂತೆ. ಅಷ್ಟೊಂದು ಹಾಸ್ಯಪ್ರಜ್ಞೆ ಅವರಲ್ಲಿತ್ತು ಎಂದು ತಿಳಿಸಿದರು.

ಪ್ರೊ| ಎಸ್‌.ಬಿ. ರಂಗನಾಥ್‌ ನಮ್ಮ ಮಠದ ಆಡಳಿತಾಧಿಕಾರಿಯೂ ಆಗಿದ್ದಾರೆ. ನಮ್ಮ ಹಿರಿಯ ಗುರುಗಳು ಅವರನ್ನು ಅಂಟುಗ ಎಂದೇ ಕರೆಯುತ್ತಿದ್ದರು. ಅಂದರೆ ಹಿಡಿದ ಕೆಲಸ ಮುಗಿಯುವ ತನಕ ಬಿಡುವವರೇ ಅಲ್ಲ. ಅವರ ಕಾರಣದಿಂದಾಗಿಯೇ ಸಾಕಷ್ಟು ವಿರೋಧವಿದ್ದರೂ ಕನ್ನಡ ಭವನ ನಿರ್ಮಾಣವಾಗಿದೆ ಎಂದು ತಿಳಿಸಿದರು.

Advertisement

ಖ್ಯಾತ ಸಾಹಿತಿ ಡಾ| ಬಿ.ಎಲ್‌. ವೇಣು ಅಭಿನಂದನಾ ನುಡಿಗಳನ್ನಾಡಿದರು. ಹಿರಿಯ ಪತ್ರಕರ್ತ ಎನ್‌. ವಿಶಾಖ ‘ಕಚಗುಳಿ (ಗೆ) ಕಾಲ’ ಕೃತಿ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ , ಪ್ರೊ| ಎಸ್‌.ಬಿ. ರಂಗನಾಥ್‌ ದಂಪತಿ ಇದ್ದರು.

ಯಾವುದೇ ಕಾರಣಕ್ಕೂ ವಯಸ್ಸಾಯಿತು. ಕಾಯಿಲೆ ಎಂದು ಅಂದುಕೊಳ್ಳಲೇಬಾರದು. ವಯಸ್ಸಾಗಿಲ್ಲ, ಕಾಯಿಲೆ ಇಲ್ಲ ಎಂಬ ಭಾವನೆಯಿಂದ ಇದ್ದಾಗ ಯಾವುದೂ ಸಮಸ್ಯೆ ಅನಿಸುವುದೇ ಇಲ್ಲ. ವಯಸ್ಸಾದ ನಂತರ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವುದನ್ನ ಕಲಿಯಬೇಕು. ಮಠಾಧೀಶರಾದ ನಮಗೆ ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ ಎಂದುಕೊಂಡಿಲ್ಲ. ನಮ್ಮ ಶಾಲೆಗಳಲ್ಲಿ ಓದುವಂತಹವರೇ ನಮ್ಮ ಮಕ್ಕಳು, ಮೊಮ್ಮಕ್ಕಳು ಬಿಡುವು ಸಿಕ್ಕಾಗಲೆಲ್ಲ ನಾವು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆ – ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next