Advertisement

ಜೀವಿತದಲ್ಲಿರುವಾಗಲೇ ಜೀವಿತ ಪತ್ರಕ್ಕೆ ಪರದಾಟ!

01:32 AM Dec 02, 2020 | mahesh |

ಉಡುಪಿ: ಜೀವಿತವಿದ್ದಾಗಲೇ ಜೀವಿತ ಪ್ರಮಾಣಪತ್ರಕ್ಕೆ “ಪರದಾಟ’ವೆ? ಎಂದು ಪ್ರಶ್ನಿಸಬೇಡಿ. ಹಾಗಿದೆ ಪರಿಸ್ಥಿತಿ… ಯಾವುದೇ ಪಿಂಚಣಿದಾರರು ಅದನ್ನು ಪಡೆಯ ಬೇಕಾದರೆ ನಾವು ಜೀವಿತ ಇದ್ದೇವೆ ಎಂದು ಸಾಬೀತುಪಡಿಸಬೇಕು. “ಸಜೀವ’ ಸಶರೀರವಾಗಿ ಹೋಗಿ ನಿಂತರೆ ಸಾಕಾಗುವುದಿಲ್ಲ. ಅದಕ್ಕೊಂದು “ನಿರ್ಜೀವ’ ದಾಖಲೆ ಬೇಕು. ಅದುವೇ ಜೀವಿತ ಪ್ರಮಾಣಪತ್ರ (ಲೈಫ್ ಸರ್ಟಿಫಿಕೇಟ್‌).

Advertisement

ಪ್ರತಿ ನವೆಂಬರ್‌, ಡಿಸೆಂಬರ್‌ನಲ್ಲಿ ಅದನ್ನು ಪಡೆದು ಪಿಂಚಣಿ ಪಡೆಯುವ ಬ್ಯಾಂಕ್‌/ ಅಂಚೆ ಕಚೇರಿಗಳಿಗೆ ಸಲ್ಲಿಸಬೇಕು. ಕೇಂದ್ರ ಭವಿಷ್ಯನಿಧಿ ಸಂಘಟನೆಯಿಂದ ಪಿಂಚಣಿ ಪಡೆಯುವವರು ಜೀವಿತ ಪ್ರಮಾಣಪತ್ರವನ್ನು ಫೆಬ್ರವರಿ 28ರ ಒಳಗೆ ಸಲ್ಲಿಸಬಹುದು ಎಂದು ಕೇಂದ್ರ ಸರಕಾರ ಇತ್ತೀಚೆಗೆ ತಿಳಿಸಿದೆ. ಆದರೆ ಅದನ್ನು ಪಡೆಯುವುದು ಹರಸಾಹಸ ಎಂಬುದಕ್ಕೆ ಹಲವರು ಸಾಕ್ಷಿಗಳಿದ್ದಾರೆ.

ಬ್ಯಾಂಕ್‌ಗಳಲ್ಲಿಲ್ಲ ಅಗತ್ಯ ಪರಿಕರ!
ಪಿಂಚಣಿ ಪಡೆಯುವ ಬ್ಯಾಂಕ್‌ಗೆ ಹೋದರೆ ಅಲ್ಲಿ ಫಿಂಗರ್‌ಪ್ರಿಂಟ್‌ ತಾಳೆಯಾಗದೆ ಇದ್ದಾಗ ಸಮಸ್ಯೆ ಎದುರಾಗುತ್ತಿದೆ. ವಯಸ್ಸಾದಂತೆ ಹಸ್ತರೇಖೆ ಅಳಿಸಿಹೋಗಿ ತಾಳೆಯಾಗ ದಿರುವ ಸಾಧ್ಯತೆ ಇದೆ. ಆಗ ಕಣ್ಣಿನ ಕರಿಗುಡ್ಡೆ (ರೆಟಿನಾ- ಐರಿಸ್‌ ಸ್ಕ್ಯಾನರ್‌) ಮೂಲಕ ಜೀವಿತ ಪ್ರಮಾಣಪತ್ರ ಪಡೆಯಲು ಸಾಧ್ಯವಿರುತ್ತದೆ. ಆದರೆ ಬ್ಯಾಂಕ್‌ಗಳಲ್ಲಿ ಇದಕ್ಕೆ ಬೇಕಾದ ಕೆಮರಾಗಳಿಲ್ಲ. “ಗ್ರಾಹಕರ ಸಮಸ್ಯೆಗೆ ಸ್ಪಂದಿಸಿ ಮಾತನಾಡುವ ಸೌಜನ್ಯವೂ ಕನ್ನಡ ಬಾರದ ಸಿಬಂದಿಗೆ ಇಲ್ಲ’ ಎಂಬ ಅನುಭವ ಹಲವರದ್ದು.

ಎಲ್ಲೆಡೆಯೂ ಸಮಸ್ಯೆ
ಇಪಿಎಫ್ ಕಚೇರಿಗೆ ತೆರಳಿ ಹೇಳಿದರೆ “ಬ್ಯಾಂಕುಗಳಿಗೆ ಕೆಮರಾ ಇಟ್ಟುಕೊಳ್ಳಲಾಗದೆ?’ ಎಂದು ಪ್ರಶ್ನಿಸುತ್ತಾರೆ. ಬ್ಯಾಂಕ್‌ನಲ್ಲಿ ಕೇಳಿದರೆ ಅಂಚೆ ಕಚೇರಿಗಳಲ್ಲಿ ಕೇಳಿ ಎನ್ನುತ್ತಾರೆ. ಅಂಚೆ ಇಲಾಖೆಯಲ್ಲಿ ಶೇ. 50ರಷ್ಟು ಪೋಸ್ಟ್‌ಮ್ಯಾನ್‌ಗಳಿಗೆ ಐಪಿಪಿಬಿ ಮೊಬೈಲ್‌ ಕೊಡಲಾಗಿದೆ. ಇಂತಹವರಲ್ಲಿ ಜೀವಿತ ಪ್ರಮಾಣಪತ್ರ ಸಿಗಬಹುದೆ ವಿನಾ ಫಿಂಗರ್‌ ಪ್ರಿಂಟ್‌ ತಾಳೆಯಾಗದೆ ಇದ್ದರೆ ಪರ್ಯಾಯ ಮಾರ್ಗಗಳಿಲ್ಲ. ಕೆಲವು ಪೋಸ್ಟ್‌ಮ್ಯಾನ್‌ಗಳಿಗೆ ಐಪಿಪಿಬಿ ಮೊಬೈಲ್‌ ಪೂರೈಕೆ ಆಗಿಲ್ಲ.

ಗ್ರಾಮೀಣ ಪ್ರದೇಶದ ವಿಧವಾ ಮಾಸಾಶನ, ವೃದ್ಧಾಪ್ಯ ವೇತನದಂತಹ ಪಿಂಚಣಿಗಳನ್ನು ಪಡೆಯುವವರ ಪಾಡು ಹೇಳತೀರದು. ಪಿಂಚಣಿ ಪಡೆಯುವವರಿಗೆ ಸಿಎಸ್‌ಸಿ, ಇಪಿಎಫ್, ಲೈಫ್ ಸರ್ಟಿಫಿಕೇಟ್‌ ಎಂದು ಹೇಳಿದರೆ ತಿಳಿಯುವುದೂ ಕಷ್ಟ. ಎಷ್ಟೋ ಜನರು ಇದನ್ನು ಕೊಡದೆ ಸರಕಾರದ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ.

Advertisement

ಪಿಂಚಣಿಯನ್ನು ಬ್ಯಾಂಕ್‌ನಲ್ಲಿ ಪಡೆಯುವುದಾದರೆ ಆ ಬ್ಯಾಂಕ್‌ನ ಯಾವುದೇ ಸಮೀಪದ ಶಾಖೆಯಿಂದಲೂ ಅಂಚೆ ಕಚೇರಿಯಿಂದ ಪಡೆಯುವುದಾದರೆ ಅಲ್ಲಿಂದಲೇ ಜೀವಿತಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಆನ್‌ಲೈನ್‌ನಲ್ಲೂ ಈ ಸೌಲಭ್ಯವಿದೆ. ವೈದ್ಯಕೀಯ ಕಾರಣದಿಂದ ಜೀವಿತ ಪ್ರಮಾಣ ಪಡೆಯುವುದು ಕಷ್ಟವಾದರೆ ಬ್ಯಾಂಕ್‌ಗಳ ಶಾಖಾ ಪ್ರಬಂಧಕರು ಮನೆಗೆ ಹೋಗಿ ಪ್ರಮಾಣಪತ್ರವನ್ನು ಕೊಡುತ್ತಾರೆ. ಬ್ಯಾಂಕ್‌ಗಳಲ್ಲಿ ಐರಿಸ್‌ ಸ್ಕ್ಯಾನರ್‌ ಅಳವಡಿಕೆ ಇನ್ನೂ ಆಗಿಲ್ಲ.
– ರುದ್ರೇಶ್‌, ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕರು, ಉಡುಪಿ

ಆಧಾರ್‌ ಅಪ್‌ಡೇಶನ್‌ ಮಾಡುವ ಜಿಲ್ಲೆಯ 250 ಕಾಮನ್‌ ಸರ್ವಿಸ್‌ ಸೆಂಟರ್‌(ಸಿಎಸ್‌ಸಿ)ಗಳಲ್ಲಿ ಐರಿಸ್‌ ಸ್ಕ್ಯಾನರ್‌ ಅಳವಡಿಸಲಾ ಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.
– ಗೋವರ್ಧನ್‌ ಎಚ್‌., ನಿತೀಶ್‌ ಶೆಟ್ಟಿಗಾರ್‌,  ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next