Advertisement

ಅನ್ಯೋನ್ಯತೆಯಿಂದ ಬದುಕಿನಲ್ಲಿ ಸಂತಸ: ಸಮದಾನಿ

06:32 PM Apr 03, 2017 | |

ಉಪ್ಪಳ: ಜಗತ್ತಿನ ವಿಭಿನ್ನ ಜನಾಂಗ, ಮತ-ಧರ್ಮಗಳ ನಡುವೆ ಬೆಳೆದು ಬಂದಿರುವ ಭಾಷೆಗಳ ಮೂಲ ಆಶಯ ಭಾವನೆ ಗಳನ್ನು ಪರಸ್ಪರ ಹಂಚಿಕೊಳ್ಳುವುದಷ್ಟೆ ಆಗಿದ್ದು ಅದರ ಹೆಸರಲ್ಲಿ ಸಂಘರ್ಷ ಗಳಾಗಬಾರದು. ಭಿನ್ನತೆಗಳು ಜಗತ್ತಿನ ಸಾಮಾನ್ಯ ನಿಯಮವಾಗಿದ್ದು, ಪರಸ್ಪರ ಹೊಂದಾಣಿಕೆಯೊಂದಿಗೆ ಒಂದಾಗುವ ಮನಸ್ಸುಗಳು, ಅನ್ಯೋನ್ಯತೆ ಮಾನವ ಬದುಕನ್ನು ಸಂತಸ, ಸಮಾಧಾನದತ್ತ ಕೊಂಡೊಯ್ಯುವುದು ಎಂದು ಖ್ಯಾತ ವಾಗ್ಮಿ ಎಂ.ಪಿ. ಅಬ್ದು ಸಮದ್‌ ಸಮದಾನಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕೇರಳ ತೆಹ್ರೀಕ್‌ ಇ ಉರ್ದು ನೇತೃತ್ವದಲ್ಲಿ ಹಮ್ಮಿಕೊಂಡ ಕೇರಳ ಉರ್ದು ಯಾತ್ರೆಗೆ ರವಿವಾರ  ಉಪ್ಪಳದಲ್ಲಿ ಯಾತ್ರೆಯ ಧ್ವಜವನ್ನು ನಾಯಕ ಮೊಹಮ್ಮದ್‌ ಅಝೀಂ ಮಣಿಮುಂಡ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಭಾರತದ ಎಲ್ಲ ಭಾಷೆಗಳು ಪರಸ್ಪರ ಸಂಬಂಧಗಳನ್ನು ಹೊಂದಿದ್ದು, ಸಂಸ್ಕೃತ ಭಾಷೆಯ ಪ್ರಭಾವ ದಟ್ಟವಾಗಿದೆ. ಜತೆಗೆ ಭಾಷಾ ಸಾಮರಸ್ಯ, ಕೊಂಡುಕೊಳ್ಳುವಿಕೆಯ ದ್ಯೋತಕವಾಗಿ ಬೆಳೆದು ಬಂದಿರುವ ವಿವಿಧ ಜನಾಂಗಗಳ ನಂಬಿಕೆ ನಡವಳಿಕೆ, ಜೀವನ ಕ್ರಮಗಳು ಒಟ್ಟು ರಾಷ್ಟ್ರೀಯತೆಯನ್ನು ಬಿಂಬಿಸುವಲ್ಲಿ ಪ್ರಧಾನ ಪಾತ್ರವಹಿಸಿವೆ ಎಂದು ಅವರು ತಿಳಿಸಿದರು.

ಭಾಷೆಗಳು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುವಂತೆ ಅದನ್ನು ಮಾತನಾಡುವ ಜನರೂ ಸಾಮರಸ್ಯ, ಏಕತೆಯಿಂದ ಇರಬೇಕೆಂದು ಅವರು ತಿಳಿಸಿದರು. ವಿಶಿಷ್ಟ ಸಾಂಸ್ಕೃತಿಕ ಶ್ರೀಮಂತಿಕೆಯ ಉರ್ದು ಭಾಷೆ ಭಾರತದ ಸಮಗ್ರತೆ, ಏಕತೆಯನ್ನು ಕಾಯ್ದುಕೊಳ್ಳುವಲ್ಲಿ ತನ್ನದೇ ಕೊಡುಗೆ ನೀಡಿದೆ ಎಂದು ತಿಳಿಸಿದ ಅವರು, ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಹೋರಾಟಕ್ಕೆ ಧೀಶಕ್ತಿಯಾಗಿ ಉರ್ದು ಭಾಷೆಯ ಕೊಡುಗೆಯನ್ನು ವಿವರಿಸಿದರು.

ಪ್ರತಿಯೊಂದು ಭಾರತೀಯ ಭಾಷೆಗಳ ಉಳಿಯುವಿಕೆಗೆ ವಿವಿಧ ಆಯಾಮಗಳ ವಿಸ್ತೃತ ಕಾರ್ಯಚಟುವಟಿಕೆಗಳ ಅಗತ್ಯವಿದೆ. ಯುವ ಸಮುದಾಯವನ್ನು ಸಾಮಾಜಿಕ ಏಕತೆ, ಸಾಂಸ್ಕೃತಿಕ ಚೌಕಟ್ಟಿನೊಂದಿಗೆ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದ ಅವರು ಮಿತಿಯೊಳಗಿನ ಬದುಕಿನಲ್ಲಿ ವಿವಿಧ ಭಾಷೆಗಳ ಒಂದಷ್ಟು ಅರಿವಿಗೆ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಅವರು ಕರೆ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌ ಮಾತನಾಡಿ, ರಾಷ್ಟ್ರದಲ್ಲೇ ಅತಿ ಹೆಚ್ಚು ವಿಭಿನ್ನ ಭಾಷೆಗಳನ್ನಾಡುವ ಜನರಿರುವ ಕಾಸರಗೋಡಿನ ಜನತೆ ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದು, ಅದನ್ನು ಉಳಿಸಿ-ಬೆಳೆಸುವ ಯತ್ನ ಗಳಾಗಬೇಕೆಂದು ತಿಳಿಸಿದರು. ಜಿಲ್ಲೆಯ ಸಾಮಾಜಿಕ, ವ್ಯಾವಹಾರಿಕ ವ್ಯವಸ್ಥೆಯಲ್ಲಿ ವಿಶಿಷ್ಟರಾಗಿ ಗುರುತಿಸಿಕೊಂಡಿರುವ ಉರ್ದು ಭಾಷೆಯ ಸಮಗ್ರ ಉನ್ನತಿಗೆ ಸರಕಾರ, ಸಾಮಾಜಿಕ ಸಂಸ್ಥೆಗಳ ಮೂಲಕ ಪ್ರಯತ್ನಿಸ ಲಾಗುವುದೆಂದು ಅವರು ಭರವಸೆ ನೀಡಿದರು. ಯುವ ಸಮುದಾಯ ಮಾತೃ ಭಾಷೆ, ಸಂಸ್ಕೃತಿ, ಜೀವನಕ್ರಮಗಳನ್ನು ಉಳಿಸುವ ನಿಟ್ಟಿನಲ್ಲಿ ಕಟಿಬದ್ಧತೆಯಿಂದ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.

Advertisement

ಕೇರಳ ಉರ್ದು ಯಾತ್ರೆಯ ಅಧ್ಯಕ್ಷ ಹಾಜಿ ಬಿ.ಎಸ್‌. ಅಬ್ದುಲ್‌ ರಹಮಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಅಬ್ದುಲ್‌ ಹಮೀದ್‌ ಯುಎಇ,  ಅಬ್ದುಲ್‌ ಲತೀಫ್‌ ಉಪ್ಪಳಗೇಟ್‌, ಕೇರಳ ಉರ್ದು ಟೀಚರ್ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ತಿರುವನಂತಪುರ, ಜಿಲ್ಲಾ ಪಂಚಾ ಯತ್‌ ಸ್ಥಾಯಿ ಸಮಿತಿ ಅಧ್ಯಕ್ಷ ಫರೀದಾ ಝಕೀರ್‌, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌ ಕೆ., ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಶಾಹುಲ್‌ ಹಮೀದ್‌ ಬಂದ್ಯೋಡು, ಕೇರಳ ಉರ್ದು ಸಂಶೋಧನಾ ಕೇಂದ್ರದ ಅಧಿಕಾರಿ ಬಾಬು ಕೆ, ಟಿ.ಎ.ಮೂಸಾ, ಡಾ.ಗೌಸ್‌ ಮೊಹಿಯುದ್ದೀನ್‌ ತಲಶ್ಚೇರಿ, ಅಬ್ದುಲ್‌ ರಸಾಕ್‌ ಚಿಪ್ಪಾರು, ಸುಜಾತಾ ಶೆಟ್ಟಿ, ಎಂ. ಮೋಹನ ಮಾಸ್ತರ್‌, ಅಶ್ರಫ್‌ ರಂಝಾನ್‌, ಮೊಹಮ್ಮದ್‌ ರಫೀಕ್‌ ಕೆ.ಐ, ಹಾಜಿ ಸೈಯ್ಯದ್‌ ಮೆಹಮ್ಮೂದ್‌, ಕೇಶವ ಪ್ರಸಾದ ನಾಣಿತ್ತಿಲು, ಡಾ| ರಿಯಾಝ್ ಅಹಮ್ಮದ್‌ ಖಾನ್‌, ಮೆಕೂºಲ್‌ ಅಹಮ್ಮದ್‌, ಯಾಸಿನ್‌ ಕುಡುಕ್ಕೋಟಿ ಉಪಸ್ಥಿತರಿದ್ದು ಮಾತನಾಡಿದರು.

ಡಾ| ಫೈಝಲ್‌ ಮಾವುಲಡತ್ತಿಲ್‌ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕೇರಳ ಉರ್ದು ಯಾತ್ರೆಯ ನಿರ್ದೇಶಕ ಪಿ.ಕೆ.ಸಿ. ಮೆಹಮ್ಮದ್‌ ಸ್ವಾಗತಿಸಿದರು. ಮೊಯ್ದಿàನ್‌ ಟಿ. ವಂದಿಸಿದರು.

ಉರ್ದುವಿನಿಂದ ಮತ ಸೌಹಾರ್ದ ಮತ್ತು ರಾಷ್ಟ್ರೀಯ ಏಕೀಕರಣ ಎಂಬ ಧ್ಯೇಯ ವಾಕ್ಯವನ್ನು ಎತ್ತಿಹಿಡಿದುಕೊಂಡು ಉರ್ದು ಭಾಷಾ ಸ್ನೇಹಿತರೊಂದಿಗೆ ತಹ್ರೀಕೆ ಉರ್ದು ಕೇರಳ ಎ. 2ರಿಂದ 7ರ ವರೆಗೆ ಕಾಸರ ಗೋಡಿನಿಂದ ತಿರುವನಂತಪುರಕ್ಕೆ ಕೇರಳ ಉರ್ದು ಯಾತ್ರೆಯನ್ನು ಆಯೋಜಿಸಿದ್ದು, ಉಪ್ಪಳದಲ್ಲಿ  ಚಾಲನೆಗೊಂಡ ಯಾತ್ರೆ, ಉಪ್ಪಳದಿಂದ ಹೊರಟು ಕಾಸರಗೋಡು ನಗರ, ಕಣ್ಣೂರು, ವಡಗರ, ಮಾನಂದವಾಡಿ, ಕಲ್ಲಿಕೋಟೆ, ಕೋಟಕ್ಕಲ್‌, ಮಲಪ್ಪುರಂ, ಪಾಲಕ್ಕಾಡ್‌, ತ್ರಿಶೂರ್‌, ಎರ್ನಾಕುಳಂ, ಕೊಲ್ಲಂನ ಪ್ರಮುಖ ಕೇಂದ್ರಗಳಲ್ಲಿ ಸಂಚರಿಸಿ ಎ. 7 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next