ನವದೆಹಲಿ: ಬಹುದಿನಗಳ ಬೇಡಿಕೆಯಾಗಿರುವ ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ ನನಸಾಗುವ ಸಮಯ ಸಮೀಪಿಸಿದಂತಿದೆ. ನೂತನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೇವಲ ಎರಡು ವಾರಗಳಲ್ಲೇ ಯೋಜನೆಯ ನೀಲನಕ್ಷೆಯನ್ನು ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ. ನಾನು ರೈಲ್ವೆ ಸಚಿವನಾಗುವುದಕ್ಕೂ ಮೊದಲೇ ಸಚಿವ ಅನಂತ್‌ಕುಮಾರ್ ಈ ಬಗ್ಗೆ ನನಗೆ ಹೇಳಿದ್ದರು.
1996ರಿಂದಲೂ ಸಬ್‌ಅರ್ಬನ್ ರೈಲು ಯೋಜನೆಗಾಗಿ ಪ್ರಯತ್ನ ನಡೆದಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದಿರುವ ಗೋಯೆಲ್, ಸೆಪ್ಟೆಂಬರ್ 18ರಂದು ನೈಋತ್ಯ ವಲಯದ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಿದ್ದರು.
ಇದಕ್ಕೆ ಅವರು ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದರು. ಅಲ್ಲದೆ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕಿಸುವುದಕ್ಕಾಗಿ ಎತ್ತರಿಸಿದ ರೈಲು ಮಾರ್ಗ ನಿರ್ಮಾಣ ಸಾಧ್ಯತೆಯನ್ನೂ ಪರಿಶೀಲಿಸುವಂತೆ ಅವರು ಸೂಚಿಸಿದ್ದರು. ಈ ಬಗ್ಗೆ ತ್ವರಿತ ಕ್ರಮ ಕೈಗೊಂಡ ಅಧಿಕಾರಿಗಳು ಕೇವಲ 28 ದಿನಗಳಲ್ಲಿ ಜಾರಿಗೊಳಿಸಬಹುದಾದ ಕಾರ್ಯಯೋಜನೆಯೊಂದನ್ನು ಸೆ.20ಂದೇ ನೀಡಿದ್ದರು.
ನಂತರ ಸೆ.26ರಂದು ಭಾರತೀಯ ರೈಲ್ವೆಯ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕಾನಮಿಕ್ ಸರ್ವೀಸಸ್ (ಆರ್‌ಐಟಿಇಎಸ್)ಗೆ ಸುಧಾರಿತ ಯೋಜನೆ ಮತ್ತು ಅಧ್ಯಯನ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಯಿತು. ಕೇವಲ ನಾಲ್ಕೇ ದಿನಗಳಲ್ಲಿ ಗೂಗಲ್ ಮ್ಯಾಪ್ ಬಳಸಿಕೊಂಡು ಇಲಾಖೆಯು ಯೋಜನೆ ರೂಪಿಸಿದ್ದಲ್ಲದೆ, ಭೂಮಿ ಲಭ್ಯವಿರುವ ಕಡೆಯಲ್ಲಿ ಎಲ್ಲೆಲ್ಲಿ ಮಾರ್ಗ ವಿಸ್ತರಿಸಬಹುದು ಎಂದು ಕಚ್ಚಾ ನೀಲನಕ್ಷೆ ರೂಪಿಸಿದೆ.
ಜತೆಗೆ ಯಾವ ಪ್ರದೇಶದಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕು ಮತ್ತು ಯಾವ ಪ್ರದೇಶದಲ್ಲಿ ನೆಲದ ಮೇಲೆ ಹಳಿ ನಿರ್ಮಿಸಬೇಕು ಎಂಬ ಬಗ್ಗೆಯೂ ಇಲಾಖೆ ಯೋಜನೆ ರೂಪಿಸಿದೆ. ಅ.18ರ ಹೊತ್ತಿಗೆ ಆರ್‌ಐಟಿಇಎಸ್ ಸಂಪೂರ್ಣ ಯೋಜನೆ ರೂಪುರೇಷೆಯನ್ನು ಹೊಂದಿತ್ತು.
ಈ ಯೋಜನೆಯನ್ನಿಟ್ಟುಕೊಂಡು ನಾವು ಈಗ ಹಣಕಾಸು ಸೌಲಭ್ಯದ ಬಗ್ಗೆ ಚರ್ಚೆ ನಡೆಸಬಹುದಾಗಿದೆ ಎಂದು ಗೋಯೆಲ್ ಹೇಳಿದ್ದಾರೆ. ರೈಲ್ವೆ ಇಲಾಖೆ ಈಗ ತ್ವರಿತವಾಗಿ ಕ್ರಮಕೈಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪಿಯೂಷ್ ಗೋಯೆಲ್ ಈ ದೃಷ್ಟಾಂತವನ್ನು ಮುಂದಿಟ್ಟಿದ್ದಾರೆ.