ಹುಬ್ಬಳ್ಳಿ: ಗುರುಕುಲದಿಂದ ನನ್ನ ಜನ್ಮದಿನ ಆಚರಿಸಿರುವುದಕ್ಕೆ ಆಭಾರಿ ಆಗಿದ್ದೇನೆ. ಜೀವನಪೂರ್ತಿ ಸಂಗೀತಕ್ಕಾಗಿ ಜೀವನ ಮುಡುಪಾಗಿಟ್ಟಿರುತ್ತೇನೆ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂ| ಮಣಿ ಪ್ರಸಾದ ಹೇಳಿದರು. ಇಲ್ಲಿಯ ಉಣಕಲ್ಲ ಬಳಿಯ ಡಾ| ಗಂಗೂಬಾಯಿ ಹಾನಗಲ್ಲ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಅವರ 88ನೇ ಜನ್ಮದಿನಾಚರಣೆಯಲ್ಲಿ ಕೇಕ್ ಕತ್ತರಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಗೀತ ಕ್ಷೇತ್ರದ ಎಲ್ಲ ಗುರುಗಳ ಜನ್ಮದಿನವನ್ನು ಇದೇ ರೀತಿ ಇಲ್ಲಿ ಆಚರಿಸಬೇಕು. ಸಂಗೀತದ ವಾತಾವರಣ ಸೃಷ್ಟಿಸಬೇಕು ಎಂದರು. ಇದೇ ವೇಳೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಇವರಿಗೆ ನಿಖೀಲ ಜೋಶಿ ಸಿತಾರ, ಸುಜಯೇಂದ್ರ ಕುಲಕರ್ಣಿ ಮತ್ತು ಶ್ರೀಹರಿ ದಿಗ್ಗಾವಿ ತಬಲಾ, ಪ್ರವೀಣ ಮಿಶ್ರಾ ಹಾರ್ಮೋನಿಯಂ ಸಾಥ್ ನೀಡಿದರು.
ಗಂಗೂಬಾಯಿ ಹಾನಗಲ್ಲ ಅವರ ಪುತ್ರ ನಾರಾಯಣರಾವ್ ಹಾನಗಲ್ಲ, ಗಾಯಕ ಪಂ| ಕೇದಾರ ಬೋದಾಸ್, ಗುರುಕುಲ ಆಡಳಿತಾಧಿಕಾರಿ ಉಪತಹಶೀಲ್ದಾರ್ ಮಹೇಶ ಶಾನಬಾಲ್ ಹಾಗೂ ಶಿಷ್ಯರು, ಗುರುಗಳು, ಗುರುಕುಲದ ಸಿಬ್ಬಂದಿ, ವಿದ್ಯಾರ್ಥಿಗಳು ಇನ್ನಿತರರು ಪಂ| ಮಣಿಪ್ರಸಾದ ಅವರನ್ನು ಸನ್ಮಾನಿಸಿದರು.
ಗುರುಕುಲ ಬಳಗದವರು, ಅಭಿಮಾನಿಗಳು ಸಹ ಹಿರಿಯ ಗಾಯಕರಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ವಿನಿತಾ ರಾಜೂರ ಮತ್ತು ಸುಕನ್ಯಾ ಗದವೀರ ಭರತನಾಟ್ಯ ಪ್ರದರ್ಶಿಸಿದರು. ವಿದುಷಿ ವಿಜಯಾ ಜಾಧವ ಗಾಟ್ಲೆàವರ್, ಮೋನಿಕಾ, ಪಾಟೀಲ ನರೇಂದ್ರನಾಥ, ಪ್ರವೀಣ ಸಂಕಿನಮಠ, ರಮೇಶರಾವ್, ವಿಜಯಲಕ್ಷ್ಮೀ ಕೋಟಿ ಮೊದಲಾದವರಿದ್ದರು.
ನಗರದಲ್ಲಿ ಕಳೆದ ಆರು ವರ್ಷಗಳಿಂದ ವಾಸಿಸುತ್ತಿರುವ ಪಂ| ಮಣಿ ಪ್ರಸಾದ ಅವರನ್ನು ಅವರ ಶಿಷ್ಯಂದಿರು ಆತ್ಮೀಯವಾಗಿ ಸನ್ಮಾನಿಸುತ್ತಿದ್ದಾರೆ. ಗಂಗೂಬಾಯಿ ಗುರುಕುಲ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿ ಹಿರಿಯ ಗಾಯಕರೊಬ್ಬರ ಜನ್ಮದಿನ ಇಲ್ಲಿ ಆಚರಿಸಲಾಗುತ್ತಿದೆ ಎಂದು ಸಂಘಟಕ ಮನೋಜ ಹಾನಗಲ್ಲ ಹೇಳಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಗಾಯನ, ನೃತ್ಯ ಕಾರ್ಯಕ್ರಮಗಳು ನಡೆದವು.