ಸಿರುಗುಪ್ಪ: ತಾಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ತಾಲೂಕು ಪಂಚಾಯಿತಿ ವತಿಯಿಂದ ಕೃಷಿ ಹೊಂಡ, ಬದುನಿರ್ಮಾಣ ಮತ್ತು ಹೂಳು ತುಂಬಿದ ಕಲ್ಯಾಣಿಗಳ ಸ್ವಚ್ಛತೆಗೆ ಮುಂದಾಗಿದ್ದು, ತಾಲೂಕಿನಲ್ಲಿ ನರೇಗಾ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿರುವ ಕೂಲಿ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿಯೇ ನರೇಗಾ ಯೋಜನೆಯಡಿ ಕೆಲಸ ಕಾರ್ಯ ಮಾಡಲು ಅವಕಾಶ ದೊರೆಯುತ್ತಿದೆ.
2021-22ನೇ ಸಾಲಿನಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 11,50,912 ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 40,259 ಕೂಲಿಕಾರರ ಜಾಬ್‌ಕಾರ್ಡ್‌ಗಳಿದ್ದು, 1,13,921 ಕೂಲಿಕಾರರಿದ್ದು ಇಲ್ಲಿವರೆಗೆ 10,47,219 ಮಾನವ ದಿನಗಳನ್ನು ಸೃಜಿಸಿ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡಲಾಗಿದೆ.
ತಾಲೂಕಿನಲ್ಲಿ ಬಹುತೇಕ ನೀರಾವರಿ ಪ್ರದೇಶ ಇರುವುದರಿಂದ ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. ರೈತರ ಹೊಲಗಳಲ್ಲಿ ಬದು ನಿರ್ಮಾಣಕ್ಕೂ ಅವಕಾಶ ನೀಡಲಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ತಾಪಂ ವತಿಯಿಂದ ನರೇಗಾ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಕಳೆದ ವರ್ಷ ನಿರ್ಮಾಣವಾದ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದ್ದು, ರೈತರು ಬೆಳೆ ಬೆಳೆಯಲು ಹಾಗೂ ಪಶು, ಪಕ್ಷಿ, ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲವಾಗಿದೆ.
ತಾಲೂಕಿನ ಕೆಂಚನಗುಡ್ಡ, ಉಪ್ಪಾರಹೊಸಳ್ಳಿ, ರಾರಾವಿ, ರಾವಿಹಾಳ್, ಸಿರಿಗೇರಿ ಗ್ರಾಮಗಳಲ್ಲಿರುವ ಹಳೆಯ ಬಾವಿ ಮತ್ತು ಕಲ್ಯಾಣಿಗಳಲ್ಲಿ ತುಂಬಿದ ಹೂಳನ್ನು ನರೇಗಾ ಯೋಜನೆಯಡಿ ತೆಗೆದು ಸ್ವತ್ಛಗೊಳಿಸಿ ಬಣ್ಣ ಬಳಿದು ಅಂದಗೊಳಿಸಲಾಗಿದೆ. ನರೇಗಾ ಯೋಜನೆಯಲ್ಲಿ 2021-22ನೇ ಸಾಲಿನಲ್ಲಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಘನತಾಜ್ಯ ವಿಲೇವಾರಿ ಘಟಕ, ತಾಳೂರು ಪ್ರೌಢಶಾಲೆ ಆವರಣದಲ್ಲಿ ಮಳೆ ಕೊಯ್ಲು ತೊಟ್ಟಿ ನಿರ್ಮಾಣ, ಶಾನವಾಸಪುರ ಪ್ರೌಢಶಾಲೆಯಲ್ಲಿ ಅಡುಗೆ ಕೋಣೆ, ಭೋಜನಶಾಲೆ, ಸಿರಿಗೇರಿಯಲ್ಲಿ ಬಾವಿಗಳ ಪುನಶ್ಚೇತನ, ಅಗಸನೂರಿನಲ್ಲಿ ಗೋದಾಮು, ಅಂಗನವಾಡಿ ಕಟ್ಟಡ ನಿರ್ಮಾಣ, ಮಾಳಾಪುರ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನರೇಗಾ ಯೋಜನೆಯಿಂದ ಕೂಲಿ ಕಾರ್ಮಿಕರಿಗೆ ಕೆಲಸ ದೊರೆಯುತ್ತಿದೆ. ಅಲ್ಲದೆ ರೈತರಿಗೆ ಬೆಳೆ ಬೆಳೆಯಲು ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣ ಅನುಕೂಲವಾಗಲಿದೆ.
ಕೆರೆಯಲ್ಲಿರುವ ಹೂಳನ್ನು ತೆಗೆಯುವುದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿದ್ದು, ಕೃಷಿ ಕಾರ್ಯಗಳಿಗೆ ನೆರವಾಗಲಿದೆ. ಗ್ರಾಮಗಳಲ್ಲಿರುವ ಹಳೆ ಕಲ್ಯಾಣಿ ಮತ್ತು ಬಾವಿಗಳನ್ನು ಸ್ವತ್ಛಗೊಳಿಸಲು ಆದ್ಯತೆ ನೀಡಲಾಗಿದೆ. ಶಿವಪ್ಪ ಸುಬೇದಾರ್, ತಾಪಂ ಇಒ ತಾಲೂಕಿನಲ್ಲಿ ಒಟ್ಟು 11,50.912 ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ಇಲ್ಲಿವರೆಗೆ 10,47,219 ಮಾನವ ದಿನಗಳನ್ನು ಸೃಜಿಸಿ ಕೂಲಿಕಾರ್ಮಿಕರಿಗೆ ಕೆಲಸ ನೀಡಲಾಗಿದೆ.
– ರಾಜೇಶ್ವರಿ, ನರೇಗಾ ಯೋಜನೆ ತಾಲೂಕು ನಿರ್ದೇಶಕಿ
– ಆರ್. ಬಸವರೆಡ್ಡಿ ಕರೂರು