Advertisement

ಸಂಬಂಧ ಗಟ್ಟಿಯಾದಾಗ ಜೀವನದಲ್ಲಿ ಸಂತೋಷ ಕಾಣಲು ಸಾಧ್ಯ

09:46 PM Feb 06, 2020 | Lakshmi GovindaRaj |

ಹಳೇಬೀಡು: ಸಂಬಂಧಗಳು ಗಟ್ಟಿಯಾದಾಗ ಮಾತ್ರ ಜೀವನದಲ್ಲಿ ಸಂತೋಷ ಕಾಣಲು ಸಾಧ್ಯ ಎಂದು ಖ್ಯಾತ ಚಿಂತಕ ಡಾ. ಗುರುರಾಜ್‌ ಕರ್ಜಗಿ ತಿಳಿಸಿದರು. ತರಳಬಾಳು ಹುಣ್ಣಿಮೆ ಮಹೋತ್ಸದ ಕಾರ್ಯಕ್ರಮದಲ್ಲಿ ಬದುಕಿನಲ್ಲಿ ಸಂತೋಷ ಎಂಬ ವಿಷಯ ಕುರಿತು ಅವರು ಮಾತನಾಡಿದ ಅವರು, ಸಂತೋಷ ಎಂಬುದು ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲ. ಅದು ಮನಸ್ಸಿನ ಆಲೋಚನೆಗಳಿಂದ ಸಿಗುವಂತಹದ್ದು ಎಂದು ಹೇಳಿದರು.

Advertisement

ಸಂತೋಷಕ್ಕೆ ಭಾವನೆ ಕಾರಣ: ಪಾಶ್ಚಿಮಾತ್ಯರು ಐಷಾರಾಮಿ ಜೀವನದಿಂದ ಪಡೆಯಬಹುದು ಎಂಬ ಭಾವನೆ ಹೊಂದಿರುತ್ತಾರೆ. ಆದರೆ ಭಾರತೀಯರು ಮನಸ್ಸಿನೊಳಗಿರುವ ಭಾವನೆಗಳಿಂದ ಸಂತೋಷ ಪಡುತ್ತಾರೆ. ಮಗು ತನ್ನ ತಾಯಿ ತೊಡೆ ಮೇಲೆ ಮಲಗಿ ನಿದ್ರಿಸುವಾಗ ಸಿಗುವ ಸಂತೋಷ ಕೋಟಿಗಟ್ಟಲೆ ಹಣ ಕೊಟ್ಟರೂ ಸಿಗುವುದಿಲ್ಲ ಎಂದರು.

ಕಳಚುತ್ತಿರುವ ಸಂಬಂಧದ ಕೊಂಡಿ: ಇತ್ತೀಚಿನ ದಿನಗಳಲ್ಲಿ ಪರಸ್ಪರ ಸಂಬಂಧಗಳ ಕೊಂಡಿ ಕಳಚುತ್ತಿದ್ದು, ಭಾವನಾತ್ಮಕ ಸ್ಪಂದನೆಗಳು ದೂರವಾಗುತ್ತಿವೆ. ಸಂತೋಷವನ್ನು ಅನುಭವಿಸುವಲ್ಲಿ ಭಾರತೀಯರಿಗೂ ಮತ್ತು ಪಾಶ್ಚಾತ್ಯರಿಗೂ ಬಹಳ ವ್ಯತ್ಯಾಸವಿದೆ ಎಂದರು.

ಅವಿಭಕ್ತ ಕುಟುಂಬ ವಿರಳ: ಮನೆಗೆ ಅತಿಥಿಗಳು ಬಂದಾಗ ಸಂತೋಷದಿಂದ ಬರಮಾಡಿಕೊಳ್ಳುವುದು ಭಾರತೀಯರ ಸಂಪ್ರದಾಯ. ಮನೆಗೆ ಬಂದು ಬಳಗ ಬಂದಾಗ ಸಿಗುವ ಸಂತೋಷ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಆದರೆ ಈಗ ಮನೆಗೆ ಸಂಬಂಧಿಕರು ಸ್ನೇಹಿತರು ಬಂದಾಗ ಗಂಟುಮುಖ ಹಾಕಿಕೊಂಡು ಒಳಗೆ ಕರೆಯುತ್ತಾರೆ.

ಅವಿಭಕ್ತ ಕುಟುಂಬ ನಶಿಸಿ ವಿಭಕ್ತ ಕುಟುಂಬಗಳು ಹೆಚ್ಚಾದಂತೆಲ್ಲಾ ಸಂತೋಷವು ದೂರವಾಗುತ್ತಾ ಬರುತ್ತಿದೆ. ಜೀವನ ರಸ ನಿಮಿಷಗಳನ್ನು ಸಂತೋಷದಿಂದ ಆಸ್ವಾದಿಸಬೇಕು. ಸಂಸಾರದಲ್ಲಿ ಜಂಜಾಟ ವಿರಸವಿದ್ದರೂ ಅಂತಃ ಕರಣ ಭಾವನೆ ಹೊಂದಿ ಎಲ್ಲರೊಂದಿಗೂ ಬೆರೆತಾಗ ಸಂತೋಷದ ಕ್ಷಣಗಳನ್ನು ಕಾಣಲು ಸಾಧ್ಯ ಎಂದು ಹೇಳಿದರು.

Advertisement

ನಾವು ನಮ್ಮ ಸುತ್ತಮುತ್ತಲಿನ ವಾತಾವರಣ ಅಹ್ಲಾದಕರವಾಗಿರುವಂತೆ ನೋಡಿಕೊಳ್ಳಬೇಕು ನಾನು ಸಂತೋಷವಾಗಿರಬೇಕಾದರೆ ನಮ್ಮ ನೆರೆ ಹೊರೆಯವರು ಖುಷಿಯಿಂದ ಇರುವಂತೆ ನಾವು ನಡೆದುಕೊಳ್ಳಬೇಕು. ಆಗ ಸಂತೋಷ ತಾನಾಗಿಯೇ ಬರುತ್ತದೆ ಎಂದರು.

ಜೇನು ಹುಳುಗಳಂತೆ ಬದುಕಿ: ಮನುಷ್ಯ ಬದುಕಿದರೆ ಜೇನು ಹುಳುಗಳಂತೆ ಬದುಕಬೇಕು. ನೊಣದಂತೆ ಕೆಟ್ಟದನ್ನು ಹುಡುಕಿಕೊಂಡು ಹೋಗಬಾರದು ಆಗ ಜೀವನ ಸಂಭ್ರಮವಾಗುತ್ತದೆ. ಜಗತ್ತಿನಲ್ಲಿ ನೂರಾರು ಸಂತೋಷ ತರುವ ಕೇಂದ್ರಗಳಿವೆ ಉತ್ತಮ ಸಾಹಿತ್ಯ ನೃತ್ಯ ಜತೆಗೆ ಒಳ್ಳೆಯ ಮಾತುಗಳನ್ನು ತುಂಬಿಕೊಂಡಾಗ ನಾವೇ ಸಂತೋಷದ ಕೇಂದ್ರವಾಗುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿ.ಸಿ. ಪಟೀಲ್‌ ಗಣಿ ಭೂವಿಜ್ಞಾನ ಮತ್ತು ವಾಣಿಜ್ಯ ಸಚಿವರು ಮಾತನಾಡಿದರು. ಮುರುಗರಾಜೇಂದ್ರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಬಾಲಕೃಷ್ಣ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ಸಾಹಿತಿ ಚಟ್ನಳ್ಳಿ ಮಹೇಶ್‌, ತಾಹಶೀಲ್ದಾರ್‌ ನಟೇಶ್‌, ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ .ಕೆ.ಎಸ್‌.ಲಿಂಗೇಶ್‌, ಮಾಜಿ ಸಚಿವ ಶಿವರಾಂ ತರಳ ಬಾಳು ಹುಣ್ಣಿಮೆ ಮಹೋತ್ಸವ ಸಮಿತಿ ಅದ್ಯಕ್ಷ ಕಾಂತರಾಜು, ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next