ಹೊಸದಿಲ್ಲಿ : ‘ದಿಲ್ಲಿಯಲ್ಲಿನ ಚುನಾಯಿತ ಸರಕಾರದ ಸಲಹೆಗಗಳಿಗೆ ಲೆಫ್ಟಿನೆಂಟ್ ಗವರ್ನರ್ ಬದ್ಧರಾಗಿರತಕ್ಕದ್ದು’ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ದಿಲ್ಲಿ ಸರಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ನೇತಾರ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಈ ತೀರ್ಪು ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ಕೊಟ್ಟಿದೆಯಾದರೂ, ದಿಲ್ಲಿಗೆ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ದೊರಕಿಸುವ ಅಭಿಯಾನಕ್ಕೆ ಹಿನ್ನಡೆಯಾದಂತಾಗಿದೆ.
ದಿಲ್ಲಿಯ ಚುನಾಯಿತ ಆಪ್ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರದ ಕಿತ್ತಾಟವನ್ನು ಬಗೆಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ಸಂದೇಶ ನೀಡಿತು. ದಿಲ್ಲಿಯ ಲೆ| ಗವರ್ನರ್ ಅವರು ದಿಲ್ಲಿ ಸರಕಾರದ ಪರಮೋಚ್ಚ ಕಾರ್ಯನಿರ್ವಾಹಕರಾಗಿರುವ ಹೊರತಾಗಿಯೂ ಅವರು ಚುನಾಯಿತ ಸರಕಾರದ ಸಲಹೆಗೆ ಬದ್ಧರಾಗಿರ ತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿತು. ಮಾತ್ರವಲ್ಲದೆ ಎಲ್ಲ ಕಾಲಕ್ಕೂ ಅವರು ದಿಲ್ಲಿ ಸಚಿವ ಸಂಪುಟದೊಂದಿಗೆ ಹೊಂದಾಣಿಕೆಯಲ್ಲಿ ಕಾರ್ಯವೆಸಗ ತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಹೇಳಿತು.
“ಸಂವಿಧಾನವನ್ನು ಎಲ್ಲರೂ ಎಲ್ಲ ಕಾಲದಲ್ಲೂ, ಯಾವುದೇ ವೆಚ್ಚದಲ್ಲಾದರೂ ಸರಿ, ಅನುಸರಿಸತಕ್ಕದ್ದು; ಅರಾಜಕತೆಗೆ ಯಾವುದೇ ಅವಕಾಶ ಇರುವುದಿಲ್ಲ; ದಿಲ್ಲಿಗೆ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ಇರುವುದಿಲ್ಲ; ಆದರೂ ಅದು ವಿಶೇಷ ಸ್ಥಾನಮಾನವನ್ನು ಹೊಂದಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿತು.
‘ಎಲ್ ಜಿ ಅವರು ಚುನಾಯಿತ ಸರಕಾರರೊಂದಿಗೆ ಸಾಮರಸ್ಯದಿಂದ, ಹೊಂದಾಣಿಕೆಯಿಂದ ಕಾರ್ಯವೆಸಗತಕ್ಕದ್ದು; ಅಂತೆಯೇ ಚುನಾಯಿತ ಸರಕಾರದ ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರಬೇಕು; ಅದೇ ಸರಕಾರ ಕೂಡ ತನ್ನ ನೀತಿ ನಿರ್ಧಾರಗಳಿಗೆ ಎಲ್‌ಜಿ ಅವರ ಪೂರ್ವಾನುಮತಿಯನ್ನು ಪಡೆದುಕೊಳ್ಳತಕ್ಕದ್ದು’ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಆಮ್ ಆದ್ಮಿ ಸರಕಾರಕ್ಕೆ ಎರಡಲಗಿನ ಖಡ್ಗವಾಗಿ ಪರಿಣಮಿಸಿದೆ. ಸರಕಾರದ ನೀತಿ ನಿರ್ಧಾರಗಳನ್ನು ತಡೆಯುವ ಅಧಿಕಾರ ಎಲ್‌ಜಿ ಗೆ ಇಲ್ಲವೆಂಬ ಈಗ ಕಾನೂನಿನ ಮಾನ್ಯತೆ ಆಪ್ ಗೆ ದೊರಕಿರುವುದೇನೋ ಸರಿ; ಆದರೆ ದಿಲ್ಲಿಗೆ ಪೂರ್ಣಮಟ್ಟದ ರಾಜ್ಯ ಸ್ಥಾನಮಾನ ಪಡೆಯುವಲ್ಲಿನ ತನ್ನ ಅಭಿಯಾನಕ್ಕೆ ಸುಪ್ರೀಂ ಕೋರ್ಟಿನ ಈ ತೀರ್ಪು ತಣ್ಣೀರೆರಚಿದೆ ಎಂಬ ಅಭಿಪ್ರಾಯ ಆಪ್ ಉನ್ನತ ವಲಯದಲ್ಲಿ ವ್ಯಕ್ತವಾಗಿದೆ.