ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಜಗತ್ತಿನ 180ಕ್ಕೂ ಅಧಿಕ ದೇಶಗಳನ್ನು ಕಂಗೆಡಿಸಿದೆ. ಈ ಸೋಂಕು ಹರಡಲು ಚೀನಾ ಕಾರಣ ಎಂದು ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುವ ಮೂಲಕ ವಾಕ್ಸಮರ ನಡೆಯುತ್ತಿದೆ ಏತನ್ಮಧ್ಯೆ ಕೋವಿಡ್ 19 ವೈರಸ್ ಹರಡಲು ಕಾರಣವಾದ ಚೀನಾದ ವಿರುದ್ಧ ಅಮೆರಿಕದ ಮಿಸೌರಿ ರಾಜ್ಯ ಮೊಕದ್ದಮೆ ದಾಖಲಿಸಿದೆ. ಕೋವಿಡ್ 19 ವೈರಸ್ ತಡೆಗಟ್ಟಲು ಅಸಮರ್ಪಕ ಕಾರ್ಯತಂತ್ರ ಹಾಗೂ ಉದ್ದೇಶ ಪೂರ್ವಕವಾದ ವಂಚನೆ ಎಸಗಿದ್ದರಿಂದ ನಷ್ಟ ಭರಿಸಬೇಕೆಂದು ಮಿಸೌರಿ ರಾಜ್ಯ ಹೇಳಿದೆ.
ಅಮೆರಿಕ ಈಗಾಗಲೇ ಚೀನಾ ವಿರುದ್ಧ ಆಕ್ರೋಶವ್ಯಕ್ತಪಡಿಸುತ್ತಲೇ ಇರುವಾಗಲೇ ಅಮೆರಿಕದ ಮಿಸೌರಿ ಚೀನಾಕ್ಕೆ ದಂಡನೆ ನೀಡಬೇಕೆಂದು ಮೊಕದ್ದಮೆ ಹೂಡಿದ ಮೊದಲ ರಾಜ್ಯವಾಗಿದೆ. ಕೋವಿಡ್ 19 ವೈರಸ್ ಹರಡುವಿಕೆ ಹಿಂದೆ ಬೀಜಿಂಗ್ ಕೈವಾಡ ಇದ್ದಿರುವುದಾಗಿ ಟ್ರಂಪ್ ಆರೋಪಿಸಿದ್ದರು.
ಮಿಸೌರಿಯ ಟ್ರಂಪ್ ನೇತೃತ್ವ ರಿಪಬ್ಲಿಕ್ ಪಕ್ಷ ಚೀನಾದ ವಿರುದ್ಧ ಫೆಡರಲ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿ(ನಷ್ಟದ ನಿಖರ ಮೊತ್ತ ದಾಖಲಿಸಿಲ್ಲ) ನಷ್ಟ ಭರಿಸುವಂತೆ ತಿಳಿಸಿದೆ.
ಸದ್ದಿಲ್ಲದೆ ಮನುಷ್ಯನ ದೇಹ ಸೇರುವ ಕೋವಿಡ್ 19 ಮಾರಣಾಂತಿಕ ಹಾಗೂ ಅಪಾಯಕಾರಿ ಸೋಂಕಿನ ಬಗ್ಗೆ ಚೀನಾ ಸರ್ಕಾರ ಇಡೀ ಜಗತ್ತಿಗೆ ಸುಳ್ಳು ಹೇಳಿದೆ. ಅಲ್ಲದೇ ಈ ಸೋಂಕು ಹರಡುವುದನ್ನು ತಡೆಯುವಲ್ಲಿಯೂ ಸ್ವಲ್ಪ ಪ್ರಮಾಣದ ಕೆಲಸ ಮಾಡಿರುವುದಾಗಿ ಮಿಸೌರಿ ಅಟಾರ್ನಿ ಜನರಲ್ ಎರಿಕ್ ಸ್ಕಿಮ್ಮಿಟ್ ತಿಳಿಸಿದ್ದಾರೆ.
ಚೀನಾ ಕೈಗೊಂಡ ಕಾರ್ಯದ ಬಗ್ಗೆ ಹೊಣೆ ಹೊರಬೇಕಾಗಿದೆ. ಅಮೆರಿಕದ ಕಾನೂನಿನ ಪ್ರಕಾರ ಚೀನಾ ವಿರುದ್ಧ ಹೂಡಿರುವ ಮೊಕದ್ದಮೆ ವಿಚಾರದಲ್ಲಿ ಯಶಸ್ಸು ಕಾಣುವುದು ದೂರದ ವಿಚಾರವಾಗಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್ ಅವರ ಫ್ರೀಡಮ್ ವಾಚ್ ಸಂಸ್ಥೆ, ಟೆಕ್ಸಾಸ್ ನ ಬಝ್ ಫೋಟೋಸ್ ಎಂಬ ಕಂಪನಿಯ
ಜತೆಗೂಡಿ ಚೀನಾ ಸರ್ಕಾರ, ಚೀನಾ ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ನಿರ್ದೇಶಕ ಶೀ ಝೆಂಗ್ಲಿ ವಿರುದ್ಧ 20 ಲಕ್ಷ
ಕೋಟಿ ಡಾಲರ್ ಪ್ರಕರಣ ದಾಖಲಿಸಿದ್ದರು.