Advertisement

ಪರವಾನಗಿ ಕಡ್ಡಾಯ; ಚಿಲ್ಲರೆ ವ್ಯಾಪಾರಿಗಳ ಪ್ರತಿಭಟನೆ

05:34 PM Aug 30, 2022 | Team Udayavani |

ಧಾರವಾಡ: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಚಿಲ್ಲರೆ ವ್ಯಾಪಾರಿಗಳಿಗೆ ಬೈಲಾಗಳ ಮೂಲಕ ಲೈಸನ್ಸ್‌ ಕಡ್ಡಾಯಗೊಳಿಸುವ ಕಾಯ್ದೆ ಜಾರಿ ಖಂಡಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

ಹಿಂದಿ ಪ್ರಚಾರ ಸಭಾ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡು, ಕರ್ನಾಟಕ ಮುನಿಸಿಪಾಲಿಟಿಗಳ (ಸಿಗರೇಟುಗಳು ಮತ್ತಿತರೆ ತಂಬಾಕು ಉತ್ಪನ್ನಗಳ ಮಾರಾಟ ನಡೆಸುವ ಸ್ಥಳಗಳ ನಿಯಂತ್ರಣಗಳು ಮತ್ತು ತನಿಖೆ) ಮಾದರಿ ಬೈಲಾಗಳು-2020ರ ಅನುಷ್ಠಾನ ಖಂಡಿಸಲಾಯಿತು. ಅಲ್ಲದೇ ಡಿಸಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ಕೈಗೊಂಡು, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಣ್ಣ ವ್ಯಾಪಾರಿಗಳಿಗೆ ಲೈಸನ್ಸ್‌ ಪಡೆಯುವುದು ಸವಾಲಿನದಾಗಿದೆ. ಅವರಲ್ಲಿ ಪಾವತಿಸಲು ಹಣವೂ ಇಲ್ಲ, ಅನುಮತಿ ಪಡೆಯಲು ಅಗತ್ಯವಾದ ಕಾಗದಪತ್ರಗಳನ್ನು ಸಿದ್ಧಪಡಿಸುವ ಶಿಕ್ಷಣವೂ ಇಲ್ಲ. ಹೆಚ್ಚು ಕಾನೂನುಗಳು ಎಂದರೆ ನಮ್ಮ ಸದಸ್ಯರನ್ನು ಶೋಷಣೆ ಮಾಡಲು ಅಧಿಕಾರಿಗಳಿಗೆ ಹೆಚ್ಚು ಅವಕಾಶಗಳನ್ನು ನೀಡಿದಂತಾಗುತ್ತದೆ ಎಂದು ಆರೋಪಿಸಲಾಯಿತು.

ಲೈಸನ್ಸ್‌ ಮತ್ತು ನವೀಕರಣಗಳಿಗೆ ಹೆಚ್ಚುವರಿ ಖರ್ಚು ಮಾಡಲು ಅಸಾಧ್ಯವಾಗಿದೆ. ವ್ಯಾಪಾರಿಗಳಿಗೆ ಆದಾಯ ನಷ್ಟ ಉಂಟು ಮಾಡುವಂತಹ ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ರಾಜ್ಯ ಸರ್ಕಾರ ಪರ್ಯಾಯ ಜೀವನೋಪಾಯಗಳನ್ನು ಪೂರೈಸಬೇಕು. ತಂಬಾಕು ಉತ್ಪನ್ನಗಳ ವ್ಯಾಪಾರಕ್ಕೆ ಯಾವುದೇ ಹೊಸ ಪರವಾನಗಿ ನಿಯಮದ ಅಗತ್ಯವೇ ಇಲ್ಲ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘದ ವಕ್ತಾರ ರತ್ನಾಕರ ಶೆಟ್ಟಿ ಮಾತನಾಡಿ, ಈಗಾಗಲೇ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಈಗಿನ ಬೈಲಾದ ಕರಡಿನ ಪ್ರಕಾರ ತಂಬಾಕು ಉತ್ಪನ್ನ ಮಾರಾಟಗಾರರು ಪರವಾನಗಿ ಪಡೆಯಬೇಕು. ಪ್ರತಿವರ್ಷ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಪರವಾನಗಿ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಇತ್ಯಾದಿಗಳಿಂದ ತೀವ್ರ ತೊಂದರೆಯಾಗಲಿದ್ದು, ಕೂಡಲೇ ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಸುಕೇಶ ಶೆಟ್ಟಿ, ಶಿವಾರಮ್‌ ಶೆಟ್ಟಿ, ಜಯಕರ ಶೆಟ್ಟಿ, ಜಯರಾಮ ಪೂಜಾರಿ, ಬಾಬಣ್ಣ ಅಂಗಡಿ, ಸಮೀರ್‌ ಮುಲ್ಲಾ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next