ಕಾರವಾರ: ಮೀನುಗಾರಿಕೆ ಹಾಗೂ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದವರಿಗೆ ಪರವಾನಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸದಸ್ಯರ ಸಿಆರ್‌ಝಡ್ ಕರಾವಳಿ ನಿಯಂತ್ರಣ ವಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕವಾಗಿ ಮೀನುಗಾರಿಕೆ ನಡೆಸಿಕೊಂಡು ಬಂದಂತಹ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮೀನುಗಾರಿಕೆ ನಡೆಸಲು ಪರವಾನಿಗೆ ಪಡೆಯಲು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರವಾನಿಗೆಯನ್ನು ನೀಡುವ ಕಾರ್ಯ ತ್ವರಿತವಾಗಿ ಆಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಸಲ್ಲಿಸದೇ ಇರುವ ಅರ್ಜಿದಾರರಿಗೆ ಯಾವ ಕಾರಣಕ್ಕಾಗಿ ಪರವಾನಿಗೆಯನ್ನು ನೀಡುತ್ತಿಲ್ಲವೆಂಬುದನ್ನು ಹಿಂಬರಹ ನೀಡಿ. ಪರಿಶೀಲಿಸಬೇಕಾದರೆ ಸೂಕ್ತ ದಾಖಲೆಗಳಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಹೊಂದಿರುವ ದಾಖಲೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರ, ದಾಸ್ತಾನು ಪ್ರದೇಶ ಹೊಂದಿರುವ ಅಥವಾ ಜಮೀನು ಹೊಂದಿರುವ ಮಾಲೀಕರಿಂದ ನೋಂದಾಯಿತ ಒಪ್ಪಿಗೆ ಪ್ರಮಾಣ ಪತ್ರದ ದಾಖಲೆ ಸಲ್ಲಿಸಲು ಸೂಚಿಸಬೇಕು. ಇಂತಹ ದಾಖಲೆಗಳನ್ನು ಸಲ್ಲಿಸಿದವರಿಗೆ ಪರವಾನಿಗೆ ನೀಡಬಹುದು. ಸಲ್ಲಿಸದೇ ಇರುವವರ ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಸೂಚಿಸಿದರು.
ಮೀನುಗಾರಿಕೆ ಹಾಗೂ ಮರಳು ದಿಬ್ಬಗಳ ಲೈಸೆನ್ಸ್ ಪಡೆಯಲು ಯಾವುದೇ ಕೋರ್ಟ್ ವ್ಯಾಜ್ಯಗಳಿಲ್ಲವೆಂಬುದನ್ನು ಪರಿಶೀಲಿಸಿ ಅಂತಹ ಅರ್ಜಿಗಳಿಗೆ ಪರವಾನಿಗೆ ನೀಡಬೇಕು. ಮರಳು ತೆಗೆಯಲು ಪರವಾನಿಗೆ ನೀಡಿರುವ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ತಲಾ 4000 ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ನೀಡಿರುವ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 1000 ಮೆಟ್ರಿಕ್ ಟನ್ ಮರಳು ತೆಗೆಯಲು ಒಟ್ಟಾರೆ 5000 ಮೆಟ್ರಿಕ್ ಟನ್ ಮರಳು ತೆಗೆಯಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸುಮನ್ ಪೆನ್ನೆಕರ್, ಸಹಾಯಕ ವಿಭಾಗಾಧಿಕಾರಿ ಜಯ ಲಕ್ಷ್ಮೀ ರಾಯಕೋಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.