ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹಕ್ಕೆ ಬರುವ ಕೈದಿಗಳ ಮನ ಪರಿವರ್ತನೆ ನಿಟ್ಟಿನಲ್ಲಿ ಉಪ ಕಾರಾಗೃಹದ ಅಧಿಕಾರಿಗಳು ಮಹತ್ವದ ಹೆಜ್ಜೆ ಇರಿಸಿದ್ದಾರೆ.
ವಿಶ್ವೇಶ್ವರನಗರದ ಉಪ ಕಾರಾಗೃಹಕ್ಕೆ ಬಂದ ಮೇಲೆ ಕೆಲವರು ಗಲಾಟೆ ಮಾಡುವುದು, ಆತ್ಮಹತ್ಯೆ ಯತ್ನಕ್ಕೆ ಮುಂದಾಗುವುದು, ಸೇಡಿನ ಮನೋಭಾವ ಬೆಳೆಸಿಕೊಳ್ಳುವುದು ಮಾಡುತ್ತಾರೆ. ಇಂಥವರ ಮನಪರಿವರ್ತನೆ ಮಾಡಲೆಂದು ಗ್ರಂಥಾಲಯ ತೆರೆಯುವ ಮೂಲಕ ಅವರ ಮನಪರಿವರ್ತನೆ ಯತ್ನ ಕೈಗೊಳ್ಳಲಾಗಿದೆ. ಏಪ್ರಿಲ್ ತಿಂಗಳಲ್ಲಿ ಕಾರಾಗೃಹ ಅಧೀಕ್ಷಕ ಅಶೋಕ ಭಜಂತ್ರಿ ಅವರು ಕೈಗೊಂಡಿರುವ ಪ್ರಯತ್ನದ ಫಲವಾಗಿ ಜೈಲಿನಲ್ಲಿರುವ ಕೈದಿಗಳ ಹೊಡೆದಾಟ, ಘರ್ಷಣೆ, ವಾದ-ವಿವಾದಗಳು ನಿಂತಿದ್ದು, ಬಹುತೇಕ ಕೈದಿಗಳು ಪುಸ್ತಕ, ಕಾದಂಬರಿ, ಆಧ್ಯಾತ್ಮಿಕದತ್ತ ವಾಲುತ್ತಿದ್ದಾರೆ.
ಉಪ ಕಾರಾಗೃಹದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಪುಸ್ತಕಗಳು ಇವೆ. ಸಿದ್ಧಾರೂಢರ ಚರಿತ್ರೆ, ರಾಮಾಯಣ, ದ.ರಾ. ಬೇಂದ್ರೆ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ, ಚಂದ್ರಶೇಖರ ಕಂಬಾರ, ಎಸ್. ಎಲ್.ಭೈರಪ್ಪ, ದೇವನೂರು ಮಹದೇವ ಸೇರಿದಂತೆ ಮತ್ತಿತರ ಪ್ರಮುಖ ಲೇಖಕರು, ಕವಿಗಳ ರಚಿಸಿರುವ ಸಾಹಿತ್ಯ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.
ಭಗವದ್ಗೀತೆ, ಮಹಾಭಾರತದಂಥ ಪುಸ್ತಕಗಳೂ ಇವೆ. 120 ಕೈದಿಗಳು: ವಿವಿಧ ಪ್ರಕರಣಗಳನ್ನು ಹೊಂದಿರುವ 120 ಕೈದಿಗಳು ಹುಬ್ಬಳ್ಳಿ ಸಬ್‌ಜೈಲ್‌ನಲ್ಲಿ ಇದ್ದಾರೆ. ಕಳೆದ ಐದಾರು ತಿಂಗಳಿಂದ ಬಹುತೇಕರು ಪುಸ್ತಕಗಳ ಓದಿನತ್ತ ಹೆಚ್ಚು ಗಮನ ನೀಡುತ್ತಿದ್ದಾರಂತೆ. ಸುಮಾರು 15ರಿಂದ 20 ವಿದ್ಯಾರ್ಥಿಗಳು ಇದ್ದು, ಅವರು ಕೂಡಾ ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳ ಕುರಿತ ಪುಸ್ತಕಗಳ ಓದಿಗೆ ಮುಂದಾಗಿದ್ದಾರೆ.