Advertisement

ವಸತಿ ಸಮೀಕ್ಷೆಯಿಂದ ಗ್ರಾಮಕರಣಿಕರಿಗೆ ಮುಕ್ತಿ

10:01 PM Feb 18, 2020 | mahesh |

ಕುಂದಾಪುರ: ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಅಭಿವೃದ್ಧಿಪಡಿಸಿದ ವಸತಿ ಸಮೀಕ್ಷೆ ವಸತಿ ವಿಜಿಲ್‌ ಆ್ಯಪ್‌ನಿಂದ ಗ್ರಾಮ ಕರಣಿಕರನ್ನು ಹೊರತುಪಡಿಸಿ ಸರಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಪಂಚಾಯತ್‌ರಾಜ್‌ ಇಲಾಖೆ ನೌಕರರ ಜತೆ ಕಂದಾಯ ಇಲಾಖೆ ನೌಕರರು ಸಮೀಕ್ಷೆಗೆ ತೆರಳಲು ಕಾರ್ಯಬಾಹುಳ್ಯದ ನೆವದಲ್ಲಿ ತೆರಳದ ಕಾರಣ ಸಮೀಕ್ಷೆ ಹಿಂದುಳಿದಿತ್ತು. ರಾಜ್ಯದಲ್ಲಿ 53 ಸಾವಿರದಷ್ಟು ಮನೆಗಳು ಪೂರ್ಣವಾಗಿದ್ದು 1.7 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಅಷ್ಟೂ ಮನೆಗಳಿಗೆ ಅನುದಾನ ಬಿಡುಗಡೆಯಾಗಿರಲಿಲ್ಲ.

Advertisement

ಅನುದಾನ ಪಾವತಿಗೆ ಬಾಕಿ
ವಸತಿ ಯೋಜನೆಯಲ್ಲಿ ಮಂಜೂರಾಗಿ ಮನೆ ನಿರ್ಮಾಣ ಕೈಗೊಂಡವರಿಗೆ ಅನುದಾನ ಬರುತ್ತಿಲ್ಲ. ಕುಂದಾಪುರ ತಾಲೂಕಿನಲ್ಲಿ ಬಸವ ವಸತಿಯಲ್ಲಿ 571 ಮನೆಗಳಿಗೆ 1.87 ಕೋ.ರೂ., ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ 87 ಮಂದಿ ಫ‌ಲಾನುಭವಿಗಳಿಗೆ 35.2 ಲಕ್ಷ ರೂ., ಕಾರ್ಕಳ ತಾಲೂಕಿನಲ್ಲಿ ಬಸವ ವಸತಿಯಲ್ಲಿ ಒಟ್ಟು 370 ಮನೆಗಳಿಗೆ 1.02 ಕೋ.ರೂ., ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ 121 ಮನೆಗಳಿಗೆ 37 ಲಕ್ಷ ರೂ., ಉಡುಪಿ ತಾಲೂಕಿನಲ್ಲಿ 547 ಮಂದಿಗೆ 2.73 ಕೋ. ರೂ. ಬಸವ ವಸತಿಯಲ್ಲೂ, 74 ಮಂದಿಗೆ 35 ಲಕ್ಷ ರೂ. ಅಂಬೇಡ್ಕರ್‌ ವಸತಿಯಲ್ಲಿ ಎಂದು ಒಟ್ಟು 6.69 ಕೋ.ರೂ. ಬಾಕಿ ಇದೆ.

ಸಮೀಕ್ಷೆ
ವಸತಿ ಯೋಜನೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ನೈಜ ಫ‌ಲಾನುಭವಿಗಳನ್ನು ಪತ್ತೆ ಹಚ್ಚಲು ಡಿಸೆಂಬರ್‌ನಲ್ಲಿ ವಿಜಿಲ್‌ ತಂತ್ರಾಂಶವನ್ನು ಆರಂಭಿಸಲಾಗಿದೆ. ಇದರ ಪ್ರಕಾರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಕರಣಿಕರು ಮಂಜೂರಾದ ಪ್ರತಿ ಫ‌ಲಾನುಭವಿಯ ಮನೆಗೆ ತೆರಳಿ ಮನೆ ನಿರ್ಮಾಣದ ಹಂತಗಳ ಕುರಿತು, ದಾಖಲೆಗಳನ್ನು ಪರಿಶೀಲಿಸಿ ಮಾಹಿತಿಯನ್ನು ಆ್ಯಪ್‌ಗೆ ತುಂಬಿಸಬೇಕು. ಅದಾದ ಅನಂತರವೇ ಅನುದಾನ ಬಿಡುಗಡೆಯಾಗುತ್ತದೆ.

ನೆಟ್‌ವರ್ಕ್‌ ಸಮಸ್ಯೆ
ಬಿಎಸ್‌ಎನ್‌ಎಲ್‌ ಮೊಬೈಲ್‌ ಸಿಮ್‌ನ್ನೇ ಬಳಕೆ ಮಾಡಬೇಕೆಂದು ಈ ಹಿಂದೆಯೇ ಸರಕಾರ ಆದೇಶ ಮಾಡಿದೆ. ವಿಜಿಲ್‌ ಆ್ಯಪ್‌ ಮೂಲಕ ಪರಿಶೀಲನೆ ಮಾಡಬೇಕಾದರೆ ಫ‌ಲಾನುಭವಿಯ ಮನೆ ಇರುವ ಜಾಗದಲ್ಲಿ ಬಿಎಎಸ್‌ಎನ್‌ಎಲ್‌ ನೆಟ್‌ವರ್ಕ್‌ ಇರಲೇಬೇಕಾಗುತ್ತದೆ. ಇಲ್ಲದಿದ್ದರೆ ಪರಿಶೀಲನೆ ಅಸಾಧ್ಯ. ಇಷ್ಟಲ್ಲದೇ ಆ್ಯಪ್‌ಗೆ ಪ್ರವೇಶ ಮಾಡಲು ವಿಎ ಹಾಗೂ ಪಿಡಿಒ ಒಟಿಪಿ ಹಾಕಬೇಕಾಗುತ್ತದೆ. ಹಾಗೆ ಒನ್‌ ಟೈಮ್‌ ಪಾಸ್‌ವರ್ಡ್‌ ಬರಬೇಕಾದರೂ ಕಡಿಮೆ ಸಾಮರ್ಥ್ಯದ ನೆಟ್‌ವರ್ಕ್‌ ಇದ್ದರೆ ಕಷ್ಟ. ಇದಾದ ಬಳಿಕ ಫೋಟೊಗಳನ್ನು ಜಿಪಿಎಸ್‌ ಆಧಾರದಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಫ‌ಲಾನುಭವಿ, ಯೋಜನೆಯ ಮನೆ, ಪಿಡಿಒ ಹಾಗೂ ವಿಎ ಈ ಫೋಟೊದಲ್ಲಿ ಇರಬೇಕು. ಜಿಪಿಎಸ್‌ ಮೂಲಕ ಅದೇ ಸ್ಥಳದಲ್ಲಿ ತೆಗೆದುದು ಎಂದು ನಮೂದಾಗಬೇಕು. ಇಷ್ಟೆಲ್ಲ ಅಪ್‌ಲೋಡ್‌ ಆಗಲು ಇಂಟರ್ನೆಟ್‌ ಸಂಪರ್ಕ ಬೇಕೇಬೇಕು. ಆದರೆ ಗ್ರಾಮಾಂತರ ಪ್ರದೇಶದಲ್ಲಿ, ಹಳ್ಳಿಗಳಲ್ಲಿ ದೂರವಾಣಿ ಕರೆ ಮಾಡಲೆಂದೇ ಇನ್ನೂ ಐದಾರು ಕಿ.ಮೀ. ಹೋಗಬೇಕಾದ ಪ್ರದೇಶಗಳಿವೆ. ಹಾಗಿರುವಾಗ ಇಷ್ಟು ಸೌಕರ್ಯದ ಸುಧಾರಿತ ಆ್ಯಪ್‌ನ ಬಳಕೆ ಹೇಗೆ ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಪಿಡಿಒಗಳು.

ಹೊಂದಾಣಿಕೆ ಸಮಸ್ಯೆ
ವಿಎಗಳು ಪಿಡಿಒಗಳ ಜತೆ ಸಮೀಕ್ಷೆಗೆ ತೆರಳದ ಕಾರಣ ಸಮೀಕ್ಷೆ ಪ್ರಗತಿ ಕಾಣಲಿಲ್ಲ. ಅದಾದ ಬಳಿಕ ವಿಎಗಳನ್ನು ಸಮೀಕ್ಷೆಯಿಂದ ಕೈಬಿಡಲು ಬೇಡಿಕೆ ಬಂತು.

Advertisement

ಏನೇನಿದೆ ಆ್ಯಪ್‌ನಲ್ಲಿ
ಫ‌ಲಾನುಭವಿ ಗ್ರಾಮ ಸಭೆಯಲ್ಲಿ ಆಯ್ಕೆಯಾಗಿ ದ್ದಾರೆಯೇ ಎಂದು ಪರಿಶೀಲಿಸಬೇಕು. ಫ‌ಲಾನುಭವಿಯ ಜಾತಿಯ ಕುರಿತು ಪರಿಶೀಲಿಸಬೇಕು. ಫ‌ಲಾನುಭವಿ ಮನೆ ನಿರ್ಮಿಸಿದ್ದಾರೆಯೇ, ಇಲ್ಲವೇ ಎಂದು ನಮೂದಿಸಬೇಕು. ಈಗಾಗಲೇ ಜಿಪಿಎಸ್‌ ಅಳವಡಿಸಿದ ಹಂತವಾರು ಛಾಯಾಚಿತ್ರಗಳಿಗೂ ಸ್ಥಳ ಪರಿಶೀಲನೆ ವೇಳೆ ಕಂಡು ಬರುವ ಮನೆಗೂ ಹೋಲಿಕೆಯಿದೆಯೇ ಎಂದು ಪರಿಶೀಲಿಸಬೇಕು. ಅಡಮಾನ ನೋಂದಣಿ ಮಾಡಿರುವ ನಿವೇಶನದಲ್ಲಿಯೇ ಮನೆ ನಿರ್ಮಿಸಿದ್ದಾರೆಯೇ ಎಂದು ನೋಡಬೇಕು. ಫ‌ಲಾನುಭವಿಯ ಆಧಾರ್‌ ವೆರಿಫಿಕೇಶನ್‌ ಮಾಡಬೇಕು. ಬ್ಯಾಂಕ್‌ ಖಾತೆಯನ್ನು ಗಮನಿಸಬೇಕು. ಫ‌ಲಾನುಭವಿಯ ಖಾತೆಗೆ ಅನುದಾನ ಬಿಡುಗಡೆಯಾಗಿದೆಯೇ ಎಂದು ದಾಖಲೆಗಳನ್ನು ನೋಡಬೇಕು. ಅನುದಾನ ಬಿಡುಗಡೆ ಮಾಡಬಹುದೇ, ಮಾಡಬಾರದೇ ಎಂದು ಜಂಟಿಯಾಗಿ ಅನುಮೋದನೆ ನೀಡಬೇಕು.

ಆದೇಶ
2019 ಅಕ್ಟೋಬರ್‌ನಿಂದ ಈವರೆಗೆ ಪಿಡಿಒಗಳು 1.70,627 ಮನೆಗಳಿಗೆ ಅನುದಾನ ಬಿಡುಗಡೆಗೆ ಅರ್ಹ ಎಂದು ಗುರುತಿಸಿದ್ದು ಈಗ ಅವುಗಳೆಲ್ಲವನ್ನೂ° ವಿಜಿಲ್‌ ಆ್ಯಪ್‌ ಮೂಲಕ ಪರಿಶೀಲಿಸಬೇಕೆ ಎಂದು ನಿಗಮ ಸರಕಾರವನ್ನು ಕೇಳಿದ್ದು ಫೆ.14ರಂದು ಸರಕಾರ ಅಷ್ಟೂ ಮನೆಗಳನ್ನು ತನಿಖೆ ನಡೆಸಿಯೇ ಅನುದಾನ ನೀಡಬೇಕೆಂದು ಆದೇಶಿಸಿದೆ. ವಿಎಗಳನ್ನು ಸಮೀಕ್ಷಾ ಹಂತದಿಂದ ಕೈ ಬಿಟ್ಟು ಬದಲಿ ನೌಕರರನ್ನು ಸಮೀಕ್ಷೆಗೆ ನೇಮಿಸಲು ಜಿ.ಪಂ. ಸಿಇಒಗೆ ಅಧಿಕಾರ ನೀಡಲಾಗಿದೆ.

ಪುನರ್‌ ಪರಿಶೀಲನೆ
ಮೊದಲ ಹಂತದಲ್ಲಿ ಪಿಡಿಒ ಹಾಗೂ ವಿಎ ನೋಡಿದರೆ, ಎರಡನೆ ಹಂತದಲ್ಲಿ ತಾಲೂಕು ಮಟ್ಟದಲ್ಲಿ, ಮೂರನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನೀಡಿದ ಮಾಹಿತಿಯನ್ನು ಪುನರ್‌ ಪರಿಶೀಲಿಸಲಾಗುತ್ತದೆ. ಅದಾದ ಬಳಿಕವೇ ಅನುದಾನ ಬಿಡುಗಡೆಯಾಗುತ್ತದೆ. ಈ ಮೂಲಕ ಸರಕಾರ ಅರ್ಹರಿಗೂ ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿದೆ. ಜಿಲ್ಲಾ ಪಂಚಾಯತ್‌ ಮಟ್ಟದಲ್ಲಿ ಪರಿಶೀಲನಾ ಸಮಿತಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರಾಗಿದ್ದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಪಿಡಿಒ, ವಿಎ ಸದಸ್ಯರಾಗಿದ್ದಾರೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ನಗರಾಡಳಿತ ಸಂಸ್ಥೆಯ ಆಯುಕ್ತ, ನಗರಾಡಳಿತ ಸಂಸ್ಥೆಗಳ ವಸತಿ ವಿಷಯ ನಿರ್ವಾಹಕರು ಸದಸ್ಯರಾಗಿದ್ದಾರೆ.

ಕೈ ಬಿಟ್ಟಿದೆ
ವಿಎಗಳನ್ನು ಸಮೀಕ್ಷೆಯಿಂದ ಕೈ ಬಿಟ್ಟು ಸರಕಾರ ಆದೇಶ ಹೊರಡಿಸಿದೆ. ಮುಂದಿನ ಬೆಳವಣಿಗೆಗಳು ಜಿ.ಪಂ. ಮೂಲಕವೇ ನಡೆಯಲಿದೆ.
-ತಿಪ್ಪೇಸ್ವಾಮಿ, ತಹಶೀಲ್ದಾರ್‌, ಕುಂದಾಪುರ

53,000 ಪೂರ್ಣ ಹಂತದಲ್ಲಿರುವ ಮನೆಗಳ ಸಂಖ್ಯೆ.
1,70,627 ಪ್ರಗತಿಯಲ್ಲಿರುವ ಮನೆಗಳ ಸಂಖ್ಯೆ.
6.69 ಕೋ.ರೂ. ಉಡುಪಿ ಜಿಲ್ಲಾ ಅನುದಾನ ಬಾಕಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next