Advertisement

117 ಮೀಟರ್‌ ಸಿಕ್ಸರ್‌; ಲಿವಿಂಗ್‌ ಸ್ಟೋನ್‌ ಮೈಲ್‌ಸ್ಟೋನ್‌!

12:23 AM May 05, 2022 | Team Udayavani |

ಮುಂಬಯಿ: ಲಿಯಮ್‌ ಲಿವಿಂಗ್‌ ಸ್ಟೋನ್‌! ಇಂಗ್ಲೆಂಡಿನ ಈ ಆಟಗಾರ ಚುಟುಕು ಮಾದರಿಯ ಕ್ರಿಕೆಟಿನ ದೈತ್ಯ ಹೆಸರು. ಕ್ರೀಸ್‌ ಆಕ್ರಮಿಸಿಕೊಂಡರೆಂದರೆ ಅಲ್ಲಿ ಬರೀ ಸಿಕ್ಸರ್‌ಗಳ ಸುರಿಮಳೆ. ಅದೂ ಸಾಮಾನ್ಯ ಸಿಕ್ಸರ್‌ಗಳಲ್ಲ… ಗಗನಚುಂಬಿ ಹೊಡೆತಗಳು. ಚೆಂಡು ನಾಪತ್ತೆ!

Advertisement

ಲಿವಿಂಗ್‌ಸ್ಟೋನ್‌ ಅವರ ಇಂಥ ಪ್ರಚಂಡ ಹೊಡೆಗಳ ತಾಜಾ ನಿದರ್ಶನವೊಂದು ಮಂಗಳವಾರ ರಾತ್ರಿ ಗುಜರಾತ್‌ ಟೈಟಾನ್ಸ್‌ ಎದುರಿನ ಪಂದ್ಯದಲ್ಲಿ ಕಂಡುಬಂತು.

ಮೊಹಮ್ಮದ್‌ ಶಮಿ ಎಸೆತವೊಂದನ್ನು ಲಿವಿಂಗ್‌ಸ್ಟೋನ್‌ ಎತ್ತಿ ಬಾರಿಸಿದಾಗ ಚೆಂಡು ರಾಕೆಟ್‌ನಂತೆ ಆಕಾಶಕ್ಕೆ ಚಿಮ್ಮಿತು. ಬರೋಬ್ಬರಿ 117 ಮೀಟರ್‌ ಎತ್ತರಕ್ಕೆ ನೆಗೆಯಿತು. ಇದು ಈ ಐಪಿಎಲ್‌ ಸೀಸನ್‌ನ ಅತೀ ದೊಡ್ಡ ಸಿಕ್ಸರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸ್ವತಃ ಮೊಹಮ್ಮದ್‌ ಶಮಿಗೆ ಇದನ್ನು ನಂಬಲಾಗಲಿಲ್ಲ. ಆದರೇನು ಮಾಡುವುದು, ಅವರೂ ನಗುವಿನ ಮೂಲಕ ಅಸಹಾಯಕ ಪ್ರತಿಕ್ರಿಯೆಯೊಂದನ್ನು ನೀಡಿದರು!

ಅಂದು ಶಾರ್ಜಾದಲ್ಲಿ…
ಈ ಪಂದ್ಯದ ಬಳಿಕ ಲಿಯಮ್‌ ಲಿವಿಂಗ್‌ಸ್ಟೋನ್‌ ತಮ್ಮದೇ ತಂಡದ ವೇಗಿ ಕಾಗಿಸೊ ರಬಾಡ ಅವರ ಕಾಲೆಳೆದ ತಮಾಷೆಯ ವಿದ್ಯಮಾನವೊಂದು ಸಂಭವಿಸಿತು. ಇವರಿಬ್ಬರ ನಡುವಿನ ನೇರಾನೇರ ಮಾತುಕತೆಯ ವೇಳೆ ಈ ತಮಾಷೆ ಕಂಡುಬಂತು. ಲಿವಿಂಗ್‌ಸ್ಟೋನ್‌ ಅವರ ದೈತ್ಯ ಸಿಕ್ಸರ್‌ ಕುರಿತಾಗಿ ರಬಾಡ ಪ್ರಶ್ನೆಯೊಂದನ್ನೆಸೆದರು. ಆಗ ನಗುತ್ತಲೇ ಪ್ರತಿಕ್ರಿಯಿಸಿದ ಲಿವಿಂಗ್‌ಸ್ಟೋನ್‌, “ಶಾರ್ಜಾದಲ್ಲಿ ನಿಮ್ಮ ಎಸೆತವೊಂದನ್ನು ಇದೇ ರೀತಿ ಸಿಕ್ಸರ್‌ಗೆ
ಬಡಿದಟ್ಟಿದ್ದೆ, ನೆನಪಿದೆಯಾ…?’ ಎಂದು ಕೆಣಕಿದರು. ರಬಾಡ ಅವರ ನಗುವೇ ಇದಕ್ಕೆ ಉತ್ತರವಾಗಿತ್ತು.

Advertisement

ಅದು 2021ರ ಐಸಿಸಿ ಟಿ20 ವಿಶ್ವಕಪ್‌ ಕೂಟದ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವಾಗಿತ್ತು. ಇದರಲ್ಲಿ ರಬಾಡ ಅವರ ವೇಗದ ಎಸೆತವೊಂದಕ್ಕೆ ಲಿವಿಂಗ್‌ಸ್ಟೋನ್‌ ಇದೇ ರೀತಿ ಸಿಕ್ಸರ್‌ ಎತ್ತಿದ್ದರು!

ಶಮಿ ಓವರ್‌ನಲ್ಲಿ 28 ರನ್‌!
ಪಂಜಾಬ್‌ ಜಯಕ್ಕೆ ಕೊನೆಯ 5 ಓವರ್‌ಗಳಲ್ಲಿ 27 ರನ್‌ ಬಂದರೆ ಸಾಕಿತ್ತು. ಇನ್ನೂ 8 ವಿಕೆಟ್‌ ಕೈಲಿತ್ತು. ಹೀಗಾಗಿ ಗೆಲುವಿನ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ಲಿವಿಂಗ್‌ಸ್ಟೋನ್‌ ಅಷ್ಟೂ ರನ್ನನ್ನು ಶಮಿ ಅವರ ಒಂದೇ ಓವರ್‌ನಲ್ಲಿ ಬಾರಿಸಿ ಭಾರೀ ಸಂಚಲನ ಮೂಡಿಸಿದರು. ಸತತ 3 ಸಿಕ್ಸರ್‌, ಅವಳಿ ಬೌಂಡರಿ, ಅವಳಿ ರನ್‌ ಮೂಲಕ ಇಂಗ್ಲೆಂಡ್‌ ದೈತ್ಯ ಕ್ರಿಕೆಟಿಗ ಗುಜರಾತ್‌ಗೆ ಬಲವಾದ ಹೊಡೆತವಿಕ್ಕಿದರು.ಲಿವಿಂಗ್‌ಸ್ಟೋನ್‌ ಕೇವಲ 10 ಎಸೆತಗಳಿಂದ 30 ರನ್‌ ಬಾರಿಸಿ ಅಜೇಯರಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next