Advertisement

ಲೆವಿಸ್‌ ಹೊಡೆತಕ್ಕೆ ಬೆಚ್ಚಿತು ಭಾರತ

02:50 AM Jul 11, 2017 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ರವಿವಾರದ ಏಕೈಕ ಟಿ-20 ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸಿನ ಎಡಗೈ ಆರಂಭಕಾರ ಎವಿನ್‌ ಲೆವಿಸ್‌ ಅವರ ಬ್ಯಾಟಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಭಾರತ 9 ವಿಕೆಟ್‌ಗಳ ಭಾರೀ ಸೋಲಿಗೆ ತುತ್ತಾಗಿದೆ. ಏಕದಿನ ಸರಣಿ ಕಳೆದುಕೊಂಡ ಕೆರಿಬಿಯನ್ನರ ಮೊಗದಲ್ಲಿ ಗೆಲುವಿನ ಮಂದಹಾಸ ಅರಳಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 190 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತ್ತು. ಆದರೆ ಇದು ತನಗೆ ಲೆಕ್ಕಕ್ಕೇ ಇಲ್ಲ ಎಂಬ ರೀತಿಯಲ್ಲಿ ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್‌ 18.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 194 ರನ್‌ ಬಾರಿಸಿ ಗೆದ್ದು ಬಂದಿತು. ಎವಿನ್‌ ಲೆವಿಸ್‌ ಒಬ್ಬರೇ 125 ರನ್‌ ಸೂರೆಗೈದರು!

ಈ ಏಕೈಕ ಪಂದ್ಯಕ್ಕಾಗಿ ಗೇಲ್‌, ಪೊಲಾರ್ಡ್‌, ಸಾಮ್ಯುಯೆಲ್ಸ್‌, ನಾರಾಯಣ್‌, ಬದ್ರಿ ಮೊದಲಾದ ಬಲಾಡ್ಯರನ್ನು ಸೇರಿಸಿಕೊಂಡಾಗಲೇ ವೆಸ್ಟ್‌ ಇಂಡೀಸ್‌ ಬಗ್ಗೆ ಅಪಾಯದ ಮುನ್ಸೂಚನೆ ಲಭಿಸಿತ್ತು. ಆದರೆ ಈ ಪಂದ್ಯದ ಸ್ಟಾರ್‌ ಆಗಿ ಮೆರೆದದ್ದು ಮಾತ್ರ ಎವಿನ್‌ ಲೆವಿಸ್‌. ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಹೋದ ಟ್ರಿನಿಡಾಡ್‌ನ‌ ಈ ಬ್ಯಾಟ್ಸ್‌ಮನ್‌ ಕೇವಲ 62 ಎಸೆತಗಳಲ್ಲಿ ಅಜೇಯ 125 ರನ್‌ ಬಾರಿಸಿ ವಿಂಡೀಸ್‌ ಜಯಭೇರಿ ಮೊಳಗಿಸಿದರು. ಲೆವಿಸ್‌ ಆರ್ಭಟದ ವೇಳೆ 12 ಪ್ರಚಂಡ ಸಿಕ್ಸರ್‌ ಹಾಗೂ 6 ಬೌಂಡರಿ ಸಿಡಿಯಿತು. ಅವರ ಶತಕ 53 ಎಸೆತಗಳಲ್ಲಿ ದಾಖಲಾಯಿತು. ಜಡೇಜ 5 ಸಿಕ್ಸರ್‌, ಅಶ್ವಿ‌ನ್‌ 4 ಸಿಕ್ಸರ್‌ ನೀಡಿ ದಂಡಿಸಿಕೊಂಡರು.

ಇದು ಎವಿನ್‌ ಲೆವಿಸ್‌ ಬಾರಿಸಿದ 2ನೇ ಟಿ-20 ಶತಕ. ಎರಡೂ ಭಾರತದ ವಿರುದ್ಧವೇ ದಾಖಲಾದದ್ದು ವಿಶೇಷ. ಮೊದಲ ಶತಕ ಕಳೆದ ವರ್ಷ ಲಾಡರ್‌ಹಿಲ್‌ನಲ್ಲಿ ಬಂದಿತ್ತು. ಅಲ್ಲಿ 49 ಎಸೆತಗಳಿಂದ ಭರ್ತಿ 100 ರನ್‌ ಬಾರಿಸಿದ್ದರು. 
ಭಾರತಕ್ಕೆ ದಕ್ಕಿದ ಏಕೈಕ ವಿಕೆಟ್‌ ಕ್ರಿಸ್‌ ಗೇಲ್‌ ಅವರದಾಗಿತ್ತು. 18 ರನ್‌ ಮಾಡಿದ ಗೇಲ್‌ ಅವರನ್ನು ಕುಲದೀಪ್‌ ಯಾದವ್‌ ಕೀಪರ್‌ ಧೋನಿಗೆ ಕ್ಯಾಚ್‌ ಕೊಡಿಸುವ ಮೂಲಕ ಪೆವಿಲಿಯನ್ನಿಗೆ ರವಾನಿಸಿದರು. ಆಗ ಸ್ಕೋರ್‌ 8.2 ಓವರ್‌ಗಳಲ್ಲಿ 82 ರನ್‌ ಆಗಿತ್ತು. ವಿಂಡೀಸ್‌ ಓವರಿಗೆ ಹತ್ತರ ಸರಾಸರಿಯ ವೇಗ ಹೊಂದಿತ್ತು. ಕುಲದೀಪ್‌ಗೆ ಇದು ಪಾದಾರ್ಪಣಾ ಟಿ-20 ಪಂದ್ಯವಾಗಿತ್ತು.

ಮುಂದಿನದು ಲೆವಿಸ್‌-ಸಾಮ್ಯುಯೆಲ್ಸ್‌ ಜೋಡಿಯ ಪ್ರಚಂಡ ಆಟ. 10.1 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರು ಮುರಿಯದ 2ನೇ ವಿಕೆಟಿಗೆ 112 ರನ್‌ ಸೂರೆಗೈದರು. ಕಳಪೆ ಫೀಲ್ಡಿಂಗ್‌, ಕೈಚೆಲ್ಲಿದ ಕ್ಯಾಚ್‌ಗಳು, “ಸಬೀನಾ ಪಾರ್ಕ್‌’ನ ಫ್ಲ್ಯಾಟ್‌ ಟ್ರ್ಯಾಕ್‌ನಲ್ಲಿ ಉಳಿಸಿಕೊಳ್ಳಲಾಗದ ಆರಂಭಿಕ ಬ್ಯಾಟಿಂಗ್‌ ರಭಸವೆಲ್ಲ ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದವು. 

Advertisement

ಉಳಿಯಲಿಲ್ಲ ಆರಂಭಿಕ ವೇಗ…
ಸ್ವತಃ ವಿಂಡೀಸ್‌ ನಾಯಕ ಬ್ರಾತ್‌ವೇಟ್‌ ನೀಡಿದ ಹೇಳಿಕೆಯಂತೆ, ಈ ಪಿಚ್‌ನಲ್ಲಿ ಭಾರತ 210ರಷ್ಟು ಮೊತ್ತವನ್ನು ಧಾರಾಳವಾಗಿ ಪೇರಿಸಬಹುದಿತ್ತು. ಕೊಹ್ಲಿ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟುವ ಮೂಲಕ ಬಿರುಸಿನ ಆಟಕ್ಕೆ ಮುಹೂರ್ತವಿರಿಸಿದ್ದರು. ಶಿಖರ್‌ ಧವನ್‌ ಕೂಡ ಸಿಡಿದು ನಿಂತರು. ಇವರಿಬ್ಬರ 5.3 ಓವರ್‌ಗಳ ಮೊದಲ ವಿಕೆಟ್‌ ಜತೆಯಾಟದಲ್ಲಿ 64 ರನ್‌ ಒಟ್ಟುಗೂಡಿತ್ತು. ಆದರೆ ವನ್‌ಡೌನ್‌ನಲ್ಲಿ ಬಂದ ರಿಷಬ್‌ ಪಂತ್‌ ಬ್ಯಾಟಿಂಗಿನಲ್ಲಿ ಬಿರುಸು ಕಂಡುಬರಲಿಲ್ಲ. ಅವರ 38 ರನ್ನಿಗೆ 35 ಎಸೆತ ತಗುಲಿತು (2 ಬೌಂಡರಿ, 1 ಸಿಕ್ಸರ್‌). ಕೊಹ್ಲಿ 22 ಎಸೆತಗಳಿಂದ 39 ರನ್‌ (7 ಬೌಂಡರಿ, 1 ಸಿಕ್ಸರ್‌), ಧವನ್‌ 12 ಎಸೆತಗಳಿಂದ 23 ರನ್‌ (5 ಬೌಂಡರಿ) ಹೊಡೆದರು.

ಭಾರತದ ಸರದಿಯಲ್ಲಿ 48 ರನ್‌ ಮಾಡಿದ ದಿನೇಶ್‌ ಕಾರ್ತಿಕ್‌ ಅವರದೇ ಸರ್ವಾಧಿಕ ಗಳಿಕೆ. 29 ಎಸೆತ ಎದುರಿಸಿದ ಅವರು 3 ಸಿಕ್ಸರ್‌, 5 ಬೌಂಡರಿ ಬಾರಿಸಿ ಮೆರೆದರು. ಆದರೆ ಧೋನಿ (2) ಮತ್ತು ಜಾಧವ್‌ (4) ಕ್ಲಿಕ್‌ ಆಗಲಿಲ್ಲ. 
ವೆಸ್ಟ್‌ ಇಂಡೀಸ್‌ ಪರ ಜೆರೋಮ್‌ ಟಯ್ಲರ್‌ ಮತ್ತು ಕೆಸ್ರಿಕ್‌ ವಿಲಿಯಮ್ಸ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌ ಪಟ್ಟಿ
ಭಾರತ

ವಿರಾಟ್‌ ಕೊಹ್ಲಿ    ಸಿ ನಾರಾಯಣ್‌ ಬಿ ವಿಲಿಯಮ್ಸ್‌    39
ಶಿಖರ್‌ ಧವನ್‌    ರನೌಟ್‌    23
ರಿಷಬ್‌ ಪಂತ್‌    ಸಿ ವಾಲ್ಟನ್‌ ಬಿ ಟಯ್ಲರ್‌    38
ದಿನೇಶ್‌ ಕಾರ್ತಿಕ್‌    ಬಿ ಸಾಮ್ಯುಯೆಲ್ಸ್‌    48
ಎಂ.ಎಸ್‌. ಧೋನಿ    ಸಿ ಸಾಮ್ಯುಯೆಲ್ಸ್‌ ಬಿ ಟಯ್ಲರ್‌    2
ಕೇದಾರ್‌ ಜಾಧವ್‌    ಸಿ ನಾರಾಯಣ್‌ ಬಿ ವಿಲಿಯಮ್ಸ್‌    4
ರವೀಂದ್ರ ಜಡೇಜ    ಔಟಾಗದೆ    13
ಆರ್‌. ಅಶ್ವಿ‌ನ್‌    ಔಟಾಗದೆ    11
ಇತರ        12
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    190
ವಿಕೆಟ್‌ ಪತನ:
1-64, 2-65, 3-151, 4-156, 5-156, 6-164.
ಬೌಲಿಂಗ್‌:
ಸಾಮ್ಯುಯೆಲ್‌ ಬದ್ರಿ        4-0-31-0
ಜೆರೋಮ್‌ ಟಯ್ಲರ್‌        4-0-31-2
ಕೆಸ್ರಿಕ್‌ ವಿಲಿಯಮ್ಸ್‌        4-0-42-2
ಕಾರ್ಲೋಸ್‌ ಬ್ರಾತ್‌ವೇಟ್‌    2-0-26-0
ಸುನೀಲ್‌ ನಾರಾಯಣ್‌    3-0-22-0
ಮಾರ್ಲಾನ್‌ ಸಾಮ್ಯುಯೆಲ್ಸ್‌    3-0-32-1
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌    ಸಿ ಧೋನಿ ಬಿ ಕುಲದೀಪ್‌    18
ಎವಿನ್‌ ಲೆವಿಸ್‌    ಔಟಾಗದೆ    125
ಎಂ. ಸಾಮ್ಯುಯೆಲ್‌    ಔಟಾಗದೆ    36
ಇತರ        15
ಒಟ್ಟು  (18.3 ಓವರ್‌ಗಳಲ್ಲಿ 1 ವಿಕೆಟಿಗೆ)    194
ವಿಕೆಟ್‌ ಪತನ: 1-82.
ಬೌಲಿಂಗ್‌:

ಭುವನೇಶ್ವರ್‌ ಕುಮಾರ್‌    4-0-27-0
ಆರ್‌. ಅಶ್ವಿ‌ನ್‌        4-0-39-0
ಮೊಹಮ್ಮದ್‌ ಶಮಿ        3-0-46-0
ಕುಲದೀಪ್‌ ಯಾದವ್‌    4-0-34-1
ರವೀಂದ್ರ ಜಡೇಜ        3.3-0-41-0
ಪಂದ್ಯಶ್ರೇಷ್ಠ: ಎವಿನ್‌ ಲೆವಿಸ್‌

Advertisement

Udayavani is now on Telegram. Click here to join our channel and stay updated with the latest news.

Next