Advertisement

ರೇಸ್‌ನ ಸಾಮ್ರಾಟ ಹ್ಯಾಮಿಲ್ಟನ್‌

10:27 PM Sep 03, 2020 | Karthik A |

ಆ ಹುಡುಗನಿಗೆ ಆಗಿನ್ನೂ ಆರು ವರ್ಷ ತುಂಬಿತ್ತು. ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ತಂದೆ ಉಡುಗೊರೆಯಾಗಿ ನೀಡಿದ ರೇಡಿಯೊ ಕಾರು ಆತನ ಬದುಕನ್ನೇ ಬದಲಿಸಿಬಿಟ್ಟಿತು.

Advertisement

ನಿತ್ಯವೂ ಆ ಕಾರಿನೊಂದಿಗೆ ಆಡುತ್ತಾ ಕಾಲ ಕಳೆಯುತ್ತಿದ್ದ ಆ ಪೋರ, ಈಗ ಫಾರ್ಮುಲಾ-1 ಲೋಕದ ಸಾಮ್ರಾಟನಾಗಿ ಮೆರೆಯುತ್ತಿದ್ದಾನೆ.

ಅಪಾಯಕಾರಿ ಟ್ರ್ಯಾಕ್‌ಗಳಲ್ಲಿ ಜೀವದ ಹಂಗು ತೊರೆದು, ಶರವೇಗದಲ್ಲಿ ಕಾರು ಚಲಾಯಿಸುವ ಆ ಸಾಹಸಿ, ಅದೆಷ್ಟೋ ಮಂದಿ ರೇಸರ್‌ಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. “ಶರವೇಗದ ಸರದಾರ’ನೆಂದೇ ಗುರುತಿಸಿಕೊಂಡಿರುವ ಆ ತಾರೆಯೇ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌. ಫಾರ್ಮುಲಾ-1 ಕ್ಷೇತ್ರದ ಸಾರ್ವಕಾಲಿಕ ಶ್ರೇಷ್ಠ ಚಾಲಕ. ಅಂದುಕೊಂಡಿದ್ದನ್ನು ಸಾಧಿಸಿದ ಚತುರ.

ಹ್ಯಾಮಿಲ್ಟನ್‌ ಅವರ ವೇಗದ ಪಯಣ ಆರಂಭವಾದದ್ದು 1993ರಲ್ಲಿ. ಎಂಟನೇ ವಯಸ್ಸಿನಲ್ಲಿ ಕಾರ್ಟಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟ ಅವರು ಅದಾಗಿ ಎರಡು ವರ್ಷಕ್ಕೆ ಬ್ರಿಟಿಷ್‌ ಕಾರ್ಟ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದಿದ್ದರು. 1995ರಲ್ಲಿ ಸಮಾರಂಭವೊಂದು ನಡೆದಿತ್ತು. ಅದರಲ್ಲಿ ಪ್ರಖ್ಯಾತ ಮೆಕ್ಲಾರೆನ್‌ ತಂಡದ ಮಾಲೀಕ ರಾನ್‌ ಡೆನಿಶ್‌ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಡೆನಿಶ್‌ ಅವರ ಬಳಿ ಹಸ್ತಾಕ್ಷರ ಪಡೆಯಲು ಹೋಗಿದ್ದ ಕನಸು ಕಂಗಳ ಹುಡುಗ ಹ್ಯಾಮಿಲ್ಟನ್‌, ಮುಂದೊಂದು ದಿನ ನಾನು ನಿಮ್ಮ ತಂಡ ಸೇರಬೇಕೆಂದುಕೊಂಡಿದ್ದೇನೆ ಎಂದಿದ್ದನಂತೆ.

ಹ್ಯಾಮಿಲ್ಟನ್‌ ಮಾತು ಕೇಳಿ ಡೆನಿಶ್‌ ಅಚ್ಚರಿಗೊಂಡಿದ್ದರಂತೆ. ಅದಾಗಿ ಮೂರೇ ವರ್ಷಕ್ಕೆ ಹ್ಯಾಮಿಲ್ಟನ್‌, ತಾವು ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಿದ್ದರು. 13ನೇ ವಯಸ್ಸಿನಲ್ಲಿ ಮೆಕ್ಲಾರೆನ್‌ ಮತ್ತು ಮರ್ಸಿಡಿಸ್‌ ಬೆಂಜ್‌ ಯಂಗ್‌ ಡ್ರೈವರ್‌ ಸಪೋರ್ಟ್‌ ಪ್ರೋಗ್ರಾಮ್‌ಗೆ ಆಯ್ಕೆಯಾಗಿದ್ದರು. ಅದು ಅವರ ರೇಸಿಂಗ್‌ ಬದುಕಿಗೆ ಹೊಸ ತಿರುವು ನೀಡಿತು. 1998ರಿಂದ 2000ರ ಅವಧಿಯಲ್ಲಿ ಅವರು ಯುರೋಪಿಯನ್‌ ಮತ್ತು ವಿಶ್ವ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ಪಾಲೊಳ್ಳುವ ಮೂಲಕ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕಾರ್ಟಿಂಗ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದ ಅತೀ ಕಿರಿಯ ಚಾಲಕ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು.

Advertisement

2003ರಲ್ಲಿ ಮೊದಲ ಬಾರಿ ಕಾರು ರೇಸ್‌ನಲ್ಲಿ ಭಾಗವಹಿಸಿದ್ದರು. ಬ್ರಿಟಿಷ್‌ ಫಾರ್ಮುಲಾ ರೆನಾಲ್ಟ್ ರೇಸ್‌ ಸೀರಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಅವರು, 15 ರೇಸ್‌ಗಳ ಪೈಕಿ ಹತ್ತರಲ್ಲಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಾದ ಬಳಿಕ ಫಾರ್ಮುಲಾ-3 ಯುರೋ ಸೀರಿಸ್‌ ಚಾಂಪಿಯನ್‌ಶಿಪ್‌ ಗ್ರ್ಯಾನ್‌ ಪ್ರಿ-2 ರೇಸ್‌ ಸೀರಿಸ್‌ಗಳಲ್ಲಿಯೂ ಅಮೋಘ ಪ್ರದರ್ಶನ ತೋರಿ ಮನೆ ಮಾತಾದರು.

ಫಾರ್ಮುಲಾ-1ರ ಪಯಣ
ಹ್ಯಾಮಿಲ್ಟನ್‌ ಅವರ ಫಾರ್ಮುಲಾ-1 ಕನಸು ಸಾಕಾರಗೊಂಡಿದ್ದು 2007ರಲ್ಲಿ. ಆ ವರ್ಷ ಮೆಕ್ಲಾರೆನ್‌ ಫಾರ್ಮುಲಾ-1 ತಂಡ ಸೇರಿದ ಅವರು ಕೇವಲ ಒಂದು ಅಂಕದಿಂದ ವಿಶ್ವ ಚಾಂಪಿಯನ್‌ ಪಟ್ಟ ಕೈಚೆಲ್ಲಿದ್ದರು. ಆ ಋತುವಿನಲ್ಲಿ ಪದಾರ್ಪಣೆ ವರ್ಷದಲ್ಲೇ ನಾಲ್ಕು ರೇಸ್‌ಗಳಲ್ಲಿ ಗೆದ್ದು ಜಾಕ್ವೆಸ್‌ ವಿಲ್ಲೆನೆಯುವ್‌ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದರು. ಮರು ವರ್ಷ ಅವರ ಅದೃಷ್ಟದ ಬಾಗಿಲು ತೆರೆಯಿತು. 23ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್‌ ಆದ ಹ್ಯಾಮಿಲ್ಟನ್‌, ಈ ಸಾಧನೆ ಮಾಡಿದ ಅತೀ ಕಿರಿಯ ಚಾಲಕ ಎಂಬ ದಾಖಲೆ ಬರೆದಿದ್ದರು. ಆ ನಂತರದ್ದು ಇತಿಹಾಸ. 2009ರಲ್ಲಿ ಎರಡು, 2010 ಮತ್ತು 2011ರಲ್ಲಿ ತಲಾ ಮೂರು, 2012ರಲ್ಲಿ ನಾಲ್ಕು ರೇಸ್‌ಗಳನ್ನು ಗೆದ್ದು ಗಮನ ಸೆಳೆದಿದ್ದರು. 2012ರಲ್ಲಿ ಮೆಕ್ಲಾರೆನ್‌ ತಂಡ ತೊರೆದ ಲೂಯಿಸ್‌, ಮರ್ಸಿಡಿಸ್‌ ತೆಕ್ಕೆಗೆ ಜಾರಿದರು. ಮರ್ಸಿಡಿಸ್‌ ಜತೆಗಿನ ಪಯಣದ ಆರಂಭದಲ್ಲಿ ಹೆಚ್ಚು ಕಹಿಯನ್ನೇ ಅನುಭವಿಸಿದರು. 2013ರ ಋತುವಿನಲ್ಲಿ ಕೇವಲ ಒಂದು ರೇಸ್‌ ಗೆದ್ದಿದ್ದು ಇದಕ್ಕೆ ಸಾಕ್ಷಿ.

2013ರಲ್ಲಿ ಮೈಕಲ್‌ ಶುಮಾಕರ್‌ ನಿವೃತ್ತರಾದ ನಂತರ ಫಾರ್ಮುಲಾ-1ರಲ್ಲಿ ಹ್ಯಾಮಿಲ್ಟನ್‌ ಪರ್ವ ಆರಂಭವಾಯಿತು. 2014ರಲ್ಲಿ ಬರೋಬ್ಬರಿ 11 ರೇಸ್‌ಗಳನ್ನು ಗೆದ್ದ ಅವರು ಎರಡನೇ ಬಾರಿ ವಿಶ್ವ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡರು. 2015ರಲ್ಲೂ ಅವರಿಗೆ ಯಾರೂ ಸಾಟಿಯಾಗಲಿಲ್ಲ. 2016ರಲ್ಲಿ ರನ್ನರಪ್‌ ಆದ ಅವರು ಫಿನಿಕ್ಸ್‌ನಂತೆ ಎದ್ದುಬಂದರು. ಮರು ವರ್ಷ (2017) ಮತ್ತೆ ವಿಶ್ವ ಸಾಮ್ರಾಟನಾಗಿ ಸಂಭ್ರಮಿಸಿದರು. 2018 ಮತ್ತು 2019ರಲ್ಲೂ ವಿಶ್ವ ಕಿರೀಟ ಗೆದ್ದು ಹ್ಯಾಟ್ರಿಕ್‌ ಸಾಧನೆಯನ್ನು ಮಾಡಿದ್ದಾರೆ.

ಶುಮಾಕರ್‌ ದಾಖಲೆ ಅಳಿಸುವರೆ?
ಹ್ಯಾಮಿಲ್ಟನ್‌ ಈಗ ಆರು ವಿಶ್ವ ಕಿರೀಟಗಳನ್ನು ಗೆದ್ದು ವುವಾನ್‌ ಮ್ಯಾನುಯೆಲ್‌ ಫ‌ಂಗಿಯೊ ಅವರ ದಾಖಲೆ ಮೀರಿ ನಿಂತಿ¨ªಾರೆ. 34 ವರ್ಷದ ಈ ರೇಸರ್‌, ಪಾರ್ಮುಲಾ-1 ರೇಸ್‌ನ ದಿಗ್ಗಜ ಜರ್ಮನಿಯ ಮೈಕಲ್‌ ಶುಮಾಕರ್‌ ಅವರ ದಾಖಲೆಯನ್ನು ಅಳಿಸಿಹಾಕುತ್ತಾರೆಯೇ ಎಂಬ ಚರ್ಚೆ ಇದೀಗ ಎಲ್ಲೆಡೆ ಶುರುವಾಗಿದೆ. ಶುಮಾಕರ್‌ ಏಳು ಪ್ರಶಸ್ತಿಗಳನ್ನು ಜಯಿಸಿ¨ªಾರೆ. ಅವರ ದಾಖಲೆ ಸರಿಗಟ್ಟಲು ಹ್ಯಾಮಿಲ್ಟನ್‌ ಇನ್ನೊಂದು ಹೆಜ್ಜೆ ಇಡಬೇಕು. ಆದರೆ ಹ್ಯಾಮಿಲ್ಟನ್‌ ಅವರ ಈ ಹಾದಿ ಅಷ್ಟೂ ಸುಲಭವಾಗಿಲ್ಲ. ಕಾರಣ ಮರ್ಸಿಡಿಸ್‌ ತಂಡದವರೇ ಆದ ವಲಟ್ಟೆರಿ ಬೊಟ್ಟಾಸ್‌ ಅವರಿಂದ ತೀವ್ರ ಪೈಪೋಟಿ ಎದುರಾಗಿದೆ. ಕಳೆದ ಋತುವಿನಲ್ಲಿ ಎರಡನೇ ಸ್ಥಾನ ಪಡೆದಿರುವ 30ರ ಹರೆಯದ ಬೊಟ್ಟಾಸ್‌, ಮುಂದಿನ ಋತುವಿನಲ್ಲಿ ಹ್ಯಾಮಿಲ್ಟನ್‌ ಅವರ ದಾಖಲೆಯ ಓಟಕ್ಕೆ ತಡೆಯಾಗಬಲ್ಲರು ಎಂದೂ ವಿಶ್ಲೇಷಿಸಲಾಗುತ್ತಿದೆ.

ಇನ್ನೂ ಅವಿವಾಹಿತ
ಫಾರ್ಮುಲಾ-1 ರೇಸ್‌ನಲ್ಲಿ ಎಲ್ಲರ ಮನಗೆದ್ದಿರುವ ಹ್ಯಾಮಿಲ್ಟನ್‌ಗೆ ಇನ್ನೂ ಕಂಕಣ ಭಾಗ್ಯ ಕೂಡಿಬಂದಿಲ್ಲ ಎನ್ನುವುದೇ ಕುತೂಹಲಕಾರಿಯಾಗಿದೆ. ಡೇನಿಯಲ್‌ ಲಾಯ್ಡ, ಜೋದಿಯಾ ಮಾ, ನಿಕೊಲಾ ಶೆರ್ಜಿಂಜು, ರಿಹಾನಾ, ರೀಟಾ ಓರಾ, ಬಾರ್ಬರಾ ಪಾಲ್ವಿನ್‌, ವಿನ್ನಿ ಹಾರ್ಲೊ, ಸೋಫಿಯಾ ರಿಚಿ, ನಿಕ್ಕಿ ಮಿನಾಜ್‌ ಹೀಗೆ ಹಲವು ಸುಂದರಿಯರ ಜತೆ ಹ್ಯಾಮಿಲ್ಟನ್‌ ಹೆಸರು ತಳುಕು ಹಾಕಿಕೊಂಡಿತ್ತು. ಆಗಾಗ ಈ ಚೆಲುವೆಯರ ಜತೆ ಅವರು ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಹೀಗಿದ್ದರೂ ಇವರೊಂದಿಗಿನ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ.

ಜನಾಂಗೀಯ ನಿಂದನೆ ಎದುರಿಸಿದ ಚಾಲಕ
ಹ್ಯಾಮಿಲ್ಟನ್‌ ಅವರು ವೃತ್ತಿಬದುಕಿನುದ್ದಕ್ಕೂ ಜನಾಂಗೀಯ ನಿಂದನೆ ಎದುರಿಸುತ್ತಲೇ ಬಂದಿದ್ದಾರೆ. ಫಾರ್ಮುಲಾ-1 ಪಾಲ್ಗೊಂಡ ಕಪ್ಪು ಜನಾಂಗದ ಮೊದಲ ಮತ್ತು ಏಕೈಕ ಚಾಲಕ ಎಂಬ ಹಿರಿಮೆ ಹೊಂದಿರುವ ಅವರಿಗೆ 2008ರಲ್ಲಿ ಮೊದಲ ಬಾರಿ ಜನಾಂಗೀಯ ನಿಂದನೆಯ ಅನುಭವವಾಗಿತ್ತು. ಸರ್ಕ್ನೂಟ್‌ ಡಿ’ ಕ್ಯಾಟಲೊನಾದಲ್ಲಿ ತರಬೇತಿ ನಡೆಸುವ ವೇಳೆ ಸ್ಪೇನ್‌ನ ಪ್ರೇಕ್ಷಕರು ಕಪ್ಪು ಬಣ್ಣದ ಮುಖವಾಡಗಳನ್ನು ಧರಿಸಿ ಹ್ಯಾಮಿಲ್ಟನ್‌ ಅವರನ್ನು ಮೂದಲಿಸಿದ್ದರು. 2011ರಲ್ಲಿ ಲೂಯಿಸ್‌ ಇದರ ವಿರುದ್ಧ ಧ್ವನಿ ಎತ್ತಿದ್ದರು. ಇದೇ ವರ್ಷ ಅಮೇರಿಕದಲ್ಲಿ ನಡೆದ ಮೈಕಲ್‌ ಫ್ಲಾಯ್ಡ ಹತ್ಯೆಯನ್ನು ಖಂಡಿಸಿ ವರ್ಣ ಬೇದ ನೀತಿಯನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದ್ದರು.

ಆದಾಯದಲ್ಲೂ ದಾಖಲೆ
ಹ್ಯಾಮಿಲ್ಟನ್‌ ಅವರು ಆದಾಯ ಗಳಿಕೆಯಲ್ಲೂ ಮುಂದಿದ್ದಾರೆ. ಅವರ ಒಟ್ಟು ಆದಾಯ 3.9 ಸಾವಿರ ಕೋಟಿ ರೂ. ಎಂದು ಹೇಳಲಾಗಿದೆ. ಫಾರ್ಮುಲಾ-1 ಶ್ರೀಮಂತ ಚಾಲಕರ ಪಟ್ಟಿಯಲ್ಲಿ ಅವರಿಗೆ ಅಗ್ರಸ್ಥಾನ. ಫೋಬ್ಸ್ì ನಿಯತಕಾಲಿಕೆ ಈ ವರ್ಷ ಪ್ರಕಟಿಸಿದ್ದ ವಿಶ್ವದ ಅತೀ ಹೆಚ್ಚು ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಹ್ಯಾಮಿಲ್ಟನ್‌ 40ನೇ ಸ್ಥಾನ ಪಡೆದಿದ್ದಾರೆ.

 ಅಭಿ, ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next