Advertisement

ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಸ್ಥಗಿತಕ್ಕೆ ಪತ್ರ

09:42 AM Apr 26, 2022 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಸರಕಾರಿ ಪ್ರೌಢಶಾಲೆಗಳಲ್ಲಿ ವಿಶೇಷ ಹಾಗೂ ಇತರೆ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಅವೈಜ್ಞಾನಿಕ ರೀತಿಯ ಸುತ್ತೋಲೆ ಹಾಗೂ ಜ್ಞಾಪನಾ ಪತ್ರ ಹೊರಡಿಸಿ, ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿ ಮಕ್ಕಳಿಗೆ ಆಗುವ ತಾರತಮ್ಯ ಹಾಗೂ ಅನ್ಯಾಯ ತಡೆಯಬೇಕು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, 2011ರಲ್ಲಿ ಹೊರಡಿಸಲಾಗದ ಆದೇಶದಂತೆ ಎಂದು ಹೇಳಿ ಪ್ರೌಢಶಾಲೆಯಲ್ಲಿ ವಿಶೇಷ ಹಾಗೂ ಇತರೆ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಸ್ಥಳಾಂತರಕ್ಕೆ ಇಲಾಖೆ ಮುಂದಾಗಿದೆ. ಸುಮಾರು 11 ವರ್ಷಗಳ ಹಿಂದಿನ ಆದೇಶವನ್ನು ಇದೀಗ ಅನುಷ್ಠಾನಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ. ಶಿಕ್ಷಣದಲ್ಲಿ ಅನೇಕ ಬದಲಾವಣೆಗಳಾಗಿವೆ. ಇದಾವುದನ್ನು ಪರಿಗಣಿಸದೆ ಇದೀಗ ಸ್ಥಳಾಂತರಕ್ಕೆ ಆದೇಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನೋಡಬೇಕಾಗಿದೆ.

2011ರ ಆದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಆರು ವಿಭಾಗಗಳನ್ನು ಮಾಡಿ, ಮುಖ್ಯೋಪಾಧ್ಯಾಯರು ಸೇರಿದಂತೆ 8 ಶಿಕ್ಷಕರು, ಇಬ್ಬರು ಬೋಧಕೇತರ ಸಿಬ್ಬಂದಿಯನ್ನು ನಿಗದಿ ಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಇದರಲ್ಲಿ ಒಂದರಿಂದ ಮೂರು ವಿಭಾಗಗಳ ಸಿಬ್ಬಂದಿ ಸ್ತರದ ಮಾಹಿತಿ ಸ್ಪಷ್ಟವಾಗಿಲ್ಲ.

2011ರ ಆದೇಶದಲ್ಲೇ ಪ್ರೌಢಶಾಲೆಗಳಲ್ಲಿ ವಿಶೇಷ ಶಿಕ್ಷಕರಲ್ಲಿ ಒಂದಕ್ಕಿಂತ ಹೆಚ್ಚಿನ ಶಿಕ್ಷಕರಿದ್ದರಲ್ಲಿ, ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಶಿಕ್ಷಕರನ್ನು ಉಳಿಸಿಕೊಂಡು, ಉಳಿದ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಏ.13ರಂದು ಹೊರಡಿಸಿದ ಜ್ಞಾಪನಾ ಪತ್ರದಲ್ಲಿ 6 ವಿಭಾಗಗಳಿಲ್ಲದ ಪ್ರೌಢಶಾಲೆಗಳಲ್ಲಿ ವಿಶೇಷ ಶಿಕ್ಷಕರನ್ನು ಉಳಿಸಿಕೊಳ್ಳಬೇಕೆಂದು ಹೇಳಿರುವುದು 2011ರ ಆದೇಶಕ್ಕೆ ವ್ಯತಿರಿಕ್ತವಾಗಲಿದೆ.

ಸರಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಾ ಪತ್ರಗಳನ್ನು ಹೊರಡಿಸಲು ಅನುಷ್ಠಾನ ಅಧಿಕಾರಿಗೆ ಸರಕಾರ ಪರವಾನಗಿ ನೀಡಿದೆಯೇ ಎಂಬುದರ ಬಗ್ಗೆಯೂ ಸರಕಾರ ಸ್ಪಷ್ಟಪಡಿಸಬೇಕಾಗಿದೆ. ಜತೆಗೆ ಗ್ರಾಮೀಣ ಭಾಗದ ಇಂಗ್ಲಿಷ್‌ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸಬೇಕಾಗಿದೆ.

Advertisement

ಸರ್ವರಿಗೂ ಉತ್ತಮ ರೀತಿಯ ಶಿಕ್ಷಣ ದೊರೆಯಬೇಕೆಂಬ ಮಹದಾಸೆ, ಸಮಗ್ರ ಪರಿಕಲ್ಪನೆಯನ್ನು ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಹೊಂದಿದೆ. ಈ ಶಿಕ್ಷಣದಲ್ಲಿ ವಿಶೇಷ ಶಿಕ್ಷಕರಿಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಮೊದಲು ಜಾರಿಗೆ ತಂದ ರಾಜ್ಯದ ಕೀರ್ತಿ ನಮ್ಮದಾಗಿದೆ. ಆದರೆ, ವಿಶೇಷ ಹಾಗೂ ಇತರೆ ಶಿಕ್ಷಕರನ್ನು ಹೆಚ್ಚುವರಿ ಮಾಡುತ್ತಿರುವುದು ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಆಶಯಗಳಿಗೆ ಕಪ್ಪುಚುಕ್ಕೆಯಂತಾಗಿದೆ.

ರಾಜ್ಯದಲ್ಲಿ 6 ವಿಭಾಗಗಳನ್ನು ಹೊಂದಿರಬಹುದಾದ ಸರಕಾರಿ ಪ್ರೌಢಶಾಲೆಗಳ ಸಂಖ್ಯೆ ಅತ್ಯಲ್ಪ. ಜ್ಞಾಪನಾ ಪತ್ರದ ಸೂಚನೆಯಂತೆ ಈ ಶಾಲೆಗಳಲ್ಲಿ ವಿಶೇಷ ಶಿಕ್ಷಕರಿಗೆ ಅವಕಾಶ ನೀಡಲಾಗಿದ್ದು, ಆರು ವಿಭಾಗಗಳಿಲ್ಲದ ಶಾಲೆಗಳಿಗೆ ವಿಶೇಷ ಶಿಕ್ಷಕರು ಇಲ್ಲ ಎಂದರೆ ಏನರ್ಥ. ವಿದ್ಯಾರ್ಥಿಗಳಲ್ಲಿ ಸಮಾನತೆ ಇರಬೇಕೆಂದು ಹೇಳುವ ಸರಕಾರವೇ ಖುದ್ದಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ ಅನ್ನಿಸುವುದಿಲ್ಲವೆ. ಆರು ವಿಭಾಗಗಳನ್ನು ಹೊಂದಿರದ ವಿದ್ಯಾರ್ಥಿಗಳು ವಿಶೇಷ ಶಿಕ್ಷಕರ ಕಲಿಕೆಯಿಂದ ವಂಚಿತರಾಗುವುದಿಲ್ಲವೇ ಎಂಬುದರ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಇಲ್ಲವಾದರೆ ಶಿಕ್ಷಣ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ತಾರತಮ್ಯ ನೀತಿಗೆ ಸರಕಾರವೇ ಮುಂದಾಗಿದೆ ಎಂಬ ತಪ್ಪು ಸಂದೇಶ ರವಾನೆ ಆಗಲಿದ್ದು, ತಕ್ಷಣವೇ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿ, ಏ.13 ರಂದು ಹೊರಡಿಸಿದ ಜ್ಞಾಪನಾ ಪತ್ರವನ್ನು ನಿರಸನಗೊಳಿಸಬೇಕೆಂದು ಸಭಾಪತಿ ಹೊರಟ್ಟಿ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next