ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತಂತೆ ಎರಡು ದಿನದಲ್ಲಿ ವರದಿ ನೀಡುವಂತೆ ಬಿಜೆಪಿಯ ಎಲ್ಲ ಶಾಸಕರಿಗೂ ಪತ್ರ ಬರೆದಿದ್ದು, ಮೇ 20ರಂದು ಪಕ್ಷದ ಎಲ್ಲ ಶಾಸಕರು, ಸಂಸದರ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಡಾಲರ್ ಕಾಲೋನಿ ನಿವಾಸದ ಬಳಿ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿನ ವಸ್ತುಸ್ಥಿತಿ ಬಗ್ಗೆ ವರದಿ ನೀಡುವಂತೆ ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದೇನೆ. ಬರ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಂಸದರು ಹಾಗೂ ಪ್ರತಿಪಕ್ಷ ನಾಯಕರ ಸಭೆ ಕರೆದು ಚರ್ಚೆ ನಡೆಸಬಹುದಿತ್ತು. ಆದರೆ, ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲಾಧಿಕಾರಿ ವಿರುದ್ಧ ಸೇಡಿನ ರಾಜಕಾರಣ ನಡೆಸಲು ಮುಂದಾಗಿದ್ದಾರೆ. ಬರ ಪರಿಹಾರ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇದು ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಮಾಡುತ್ತಿರುವ ಅವಮಾನವಾಗಿದ್ದು, ಇದನ್ನು ಖಂಡಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದಾರಂತೆ. ಅವರು ಬೇಹುಗಾರಿಕೆ ಮಾಡಿಕೊಳ್ಳಲಿ. ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರಿಂದ ಅವರಿಗೆ ಏನೂ ಸಿಗುವುದಿಲ್ಲ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.