Advertisement

ಮತದಾರರಿಗೆ ಉಪ್ಪಿ ಅಭಿಮಾನಿಯ ಪತ್ರ

10:32 AM Aug 15, 2017 | Team Udayavani |

ಸಿನಿಮಾ ಸ್ಟಾರ್‌ಗಳ ಹೆಸರುಗಳನ್ನಿಟ್ಟುಕೊಂಡು ಅವರ ಮೇಲೆ ಕವನ ರಚಿಸೋದು, ಸಾಧನೆಗಳನ್ನು ಬಿಂಬಿಸೋದು ಇವೆಲ್ಲಾ ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ. ಉಪೇಂದ್ರರ ಚಿತ್ರಗಳ ಹೆಸರುಗಳನ್ನಿಟ್ಟುಕೊಂಡು ಸಹ ಅವರ ಕುರಿತಾಗಿ ಲೇಖನಗಳು ಬಂದಿವೆ. ಈಗ ಶಿವು ನುಣ್ಣೂರು ಅವರ ಇನ್ನೊಬ್ಬ ಅಭಿಮಾನಿಯು, ಉಪೇಂದ್ರ ಅವರು ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಬೆಂಬಲವಾಗಿ, ಒಂದು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಉಪೇಂದ್ರ ಅವರ ಸಿನಿಮಾಗಳ ಹೆಸರುಗಳನ್ನು ಪ್ರಮುಖವಾಗಿ ಬಳಸಿಕೊಂಡು, ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ …

Advertisement

ಪ್ರಜಾಕಾರಣ: “ಶ್‌…’ ಪುಢಾರಿಗಳೇ, ಈಗಲೇ “ ಅ’ಚ್ಚರಗೊಳ್ಳಿ. ಪ್ರಜಾಪ್ರಭುತ್ವದಲ್ಲಿಯ ಅವ್ಯವಸ್ಥೆಗೆ ಹಂತ “ಅಂತ’ವಾಗಿ “ಆಪರೇಷನ್‌’ ಮಾಡಲು “ರಿಯಲ್‌ಸ್ಟಾರ್‌ ಉಪೇಂದ್ರ’ ನಿರ್ಧರಿಸಿದ್ದಾರೆ. ಜನಸಾಮಾನ್ಯರು ನಮ್ಮ ತೊಂದರೆಗಳ ಬಗ್ಗೆ “ಸುಮ್ಮನೆ’ ಧ್ವನಿ ಎತ್ತದೆ ಕೇವಲ, “ಕುಟುಂಬ’ದಲ್ಲೇ ಮಾತನಾಡಿಕೊಂಡು, “ಗೌರಮ್ಮ’ರಂತೆ ಮನೆಯಲ್ಲೇ ಕುಳಿತರೆ ಹೇಗೆ? ಮತದಾನ ಮಾಡಿದ ಜನ(ಅ)ಸಾಮಾನ್ಯರೇ, “ರಕ್ತ ಕಣ್ಣೀರು’ ಸುರಿಸುವಂತಾಗಿದೆ. “ಸ್ವಸ್ತಿಕ್‌’ ಸರ್ಕಲ್‌ನಲ್ಲಿ ಕುಳಿತು ಕೇವಲ “ಪರೋಡಿ’ಗಳಂತೆ ಮಾತನಾಡುತ್ತಾ ಕುಳಿತಿದ್ದು ಸಾಕು.

ಪಕ್ಷಗಳು ಈಗಾಗಲೇ ಜಾತಿ, ಧರ್ಮದ ಹೆಸರಲ್ಲಿ “ನಾಗರಹಾವು’ಗಳಂತೆ ವಿಷಕಾರಿ ಕಚ್ಚಾಡಿಕೊಳ್ಳುತ್ತಿದ್ದಾರೆ. “ಬುದ್ಧಿವಂತ’ ಚರ್ಚೆಗಳನ್ನು ಮಾಡಿಕೊಂಡು ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿಗೆ “ಉಪೇಂದ್ರ’ ಮುಂದಾಗಿದ್ದಾರೆ. ಇವರ ಆಲೋಚನೆಗಳು “ಅಜಗಜಾಂತರ’ವಾಗಿರೋದ್ರಿಂದ ಬಹುಬೇಗನೇ ಅರ್ಥವಾಗಿಸುವುದು ಕಷ್ಟವೇ. ಪ್ರವಾಹದ ವಿರುದ್ಧ ಈಜಲು “ಕಲ್ಪನಾ’ ಲೋಕದಲ್ಲಿಯೇ “ಸೂಪರ್‌’ ಐಡಿಯಾ ಮಾಡಿರುವ ಉಪೇಂದ್ರ, ಸದ್ಯ ರಾಜಕೀಯವೇ ನನ್ನ “ಎಚ್‌ಟುಒ’ಅಂತಿದ್ದಾರೆ. ಇವರ ಈ ನಿರ್ಧಾರದ ಬಗ್ಗೆ “ಗೋಕರ್ಣ’ದಿಂದ ಹಿಡಿದು “ಹಾಲಿವುಡ್‌’ವರೆಗೂ ಚರ್ಚೆಗಳು ಶುರುವಾಗಿವೆ.

ಯಾಕಂದ್ರೆ, “ಸತ್ಯ’ ಹೇಳಲು ಹೊರಟಿರೋದು “ಸನ್‌ಆಫ್ ಸತ್ಯಮೂರ್ತಿ’. ಅಧಿಕಾರಕ್ಕೆ ಏರಿ ಮೋಜು, “ಮಸ್ತಿ’ ಮಾಡುತ್ತಿರುವವರ ಮಧ್ಯೆ ರಾಜಕಾರಣಿಯಾಗದೇ, ಜನನಾಯಕನಾಗದೇ, ಸೇವಕನೂ ಆಗದೇ, ಕಾರ್ಮಿಕನಾಗಿ ದುಡಿಯಲು, ಖಾಕಿ ತೊಟ್ಟ “ಆಟೋ ಶಂಕರ್‌’ ಮುಂದಾಗಿರೋದು ಸ್ವಾಗತಾರ್ಹ. ನಾವುಗಳು ಹಾಕಿದ ಮತಗಳಿಂದಲೇ ಅಧಿಕಾರಕ್ಕೇರಿದವರು, ರಾಜರಂತೆ ಮೆರೆಯುತ್ತಿದ್ದರೆ, ಮತದಾರರು “ಅನಾಥರು’ಗಳಾಗಿ ಬಿಟ್ಟಿದ್ದಾರೆ.

ಪ್ರಜೆಗಳ ರಕ್ಷಣೆಗೆ ಓರ್ವ “ಆರಕ್ಷಕ’ನ ಅವಶ್ಯಕತೆ ಇತ್ತು. ಇದನ್ನು ಉಪ್ಪಿ ನೆರವೇರಿಸಲಿ. “ಮುಕುಂದ ಮುರಾರಿ’ಯ ಆಣೆಗೂ ದುಡ್ಡಿಲ್ಲದ ಪಕ್ಷ ಸಂಘಟಿಸಲು “ಬ್ರಹ್ಮ’, ಈಗಾಗಲೇ ಹೊಸ ಬರಹವನ್ನೇ ಬರೆದಿದ್ದಾರೆ. “ಸೂಪರ್‌’ ಸಿನಿಮಾದ ಕಲ್ಪನೆಯನ್ನು ನನಸಾಗಿಸಲು “ದುಬೈಬಾಬು’ ಹೊರಟಿದ್ದಾರೆ. ಬೌದ್ಧಿಕವಾಗಿ ಹಸಿದ ಮತದಾರರರಿಗೆ “ಉಪ್ಪಿಟ್ಟು’ ನೀಡಲು ಹೊರಟಿರುವ “ಸೂಪರ್‌ ಸ್ಟಾರ್‌’ಗೆ ಜನಅಸಾಮಾನ್ಯರು “ಉಪೇಂದ್ರ ಮತ್ತೆ ಬಾ’ ಅನ್ನುತ್ತಾ”ರಾ’? ಯಾಕಂದ್ರೆ, “ಕನ್ಯಾದಾನಂ’ಗೂ “ಮತದಾನ’ಕ್ಕೂ ಒಂದೇ ವಯಸ್ಸು. ನಿರ್ಧಾರ ನಿಮಗೆ ಬಿಟ್ಟಿದ್ದು. 
– ಶಿವು ನುಣ್ಣೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next