ವಿಜಯಪುರ: ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಗೌರವಧನ ನೀಡುವಂತೆ ಆಗ್ರಹಿಸಿ ನಗರದಲ್ಲಿರುವ ಪ್ರವಾಸಿ ಮಾರ್ಗದರ್ಶಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.
ಸೋಮವಾರ ನರಗದಲ್ಲಿರುವ ಐತಿಹಾಸಿಕ ವಿಶ್ವವಿಖ್ಯಾತ ಗೋಲಗುಮ್ಮಟ ಆವರಣದಲ್ಲಿ ಕರ್ನಾಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಉಪಾಧ್ಯಕ್ಷ ರಾಜಶೇಖರ ಕಲ್ಯಾಣಮಠ ನೇತೃತ್ವದಲ್ಲಿ ಪತ್ರ ಚಳವಳಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ, ಪ್ರವಾಸಿ ಮಾರ್ಗದರ್ಶಕರನ್ನು ಆಯಾ ದೇಶಗಳ ಸಾಂಸ್ಕೃತಿಕ-ಪರಂಪರೆಯ ರಾಯಭಾರಿಗಳು ಎಂದು ಕರೆಯುತ್ತಾರೆ. ಆದರೆ ಕರ್ನಾಟಕದ ಮಟ್ಟಿಗೆ ಪ್ರವಾಸಿ ಮಾರ್ಗದರ್ಶಕರ ಸ್ಥಿತಿ ಅತ್ಯಂತ ದಯನೀಯವಾಗಿದೆ. ಪ್ರವಾಸಿಗರನ್ನು ನಂಬಿಕೊಂಡು ಮಾರ್ಗದರ್ಶಿ ಕೆಲಸ ಮಾಡುವ ಸ್ಥಿತಿ ಈಗಂತೂ ಸಂಪೂರ್ಣ ಇಲ್ಲವಾಗಿದೆ. ಪರಿಣಾಮ ಪ್ರವಾಸಿ ಮಾರ್ಗದರ್ಶಿಗಳ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ನಮವೂ ಮಾಸಿಕ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಪಡೆದು, ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ಪಡೆದು ಐತಿಹಾಸಿಕ ಗೋಲಗುಮ್ಮಟ ಆವರಣದಲ್ಲಿ ಪ್ರವಾಸಿ ಮಾರ್ಗದರ್ಶನ ಮಾಡುತ್ತಿದ್ದೇವೆ. ಆದರೆ ಕಳೆದ ಹಲವು ವರ್ಷಗಳಿಂದ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದ್ದು, ಕೋವಿಡ್ ಲಾಕ್‌ಡೌನ್ ಬಳಿಕ ಪ್ರವಾಸಿಗರನ್ನು ನಂಬಿಕೊಂಡು ಬದುಕುತಿದ್ದ ಮಾರ್ಗದರ್ಶಿಗಳ ಬದುಕೂ ಬೀದಿಗೆ ಬಿದ್ದಿದೆ ಎಂದು ಅಳಲು ತೋಡಿಕೊಂಡರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾಸಿಕ ಗೌರವಧನ ನೀಡುವ ವ್ಯವಸ್ಥೆ ಇದೆ. ಇದೇ ರೀತಿ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಗೌರವ ಧನ ನೀಡುವ ಯೋಜನೆ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ಈ ಹಿಂದೆ ನಡೆಸಿದ ಹಲವು ಹೋರಾಟಗಳು, ಸಲ್ಲಿಸಿದ ಮನವಿಗಳು ಫಲ ನೀಡಿಲ್ಲ. ಹೀಗಾಗಿ ನಿಮ್ಮ ಅವಧಿಯಲ್ಲಾದರೂ ನಮ್ಮ ಮನವಿಗೆ ಸ್ಪಂದನೆ ಸಿಕ್ಕರೆ ನೀವು ಪ್ರವಾಸಿ ಮಾರ್ಗದರ್ಶಿಗಳ ಕುಟುಂಬಗಳ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತೀರಿ ಎಂದು ಕಳಕಳಿಯ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರವಾಸಿ ಮಾರ್ಗದರ್ಶಿಗಳಾದ ಶ್ರೀಮಂತ ಕಟ್ಟಿ, ಸರ್ದಾರ ಜಾಧವ, ವಿಜಯಕುಮಾರ ಬಂಡಿ, ಶ್ರೀಧರ ಇರಸೂರು, ಅಬ್ದುಲ್ ರಜಾಕ್ ಶೇಖ್ ಸೇರಿದಂತೆ ಇತರರು ಇದ್ದರು.