ವಿಜಯಪುರ: ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಮಿಸಲು ಪಟ್ಟಿಯಿಂದ ಕೈ ಬಿಡದಂತೆ ಜಿಲ್ಲೆಯಲ್ಲಿ ಬಂಜಾರಾ ಸಮುದಾಯದವರು ಪತ್ರ ಚಳವಳಿ ಆರಂಭಿಸಿದ್ದಾರೆ.
ಬುಧವಾರ ಲಂಬಾಣಿ ಸಮುದಾಯದ ಅಬಾಲವೃದ್ಧರು ಪತ್ರ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಅಸ್ಪೃಶ್ಯತೆ ಸೇರಿದಂತೆ ಎಲ್ಲ ರೀತಿಯ ಅಪಮಾನ, ಅಸಮಾನತೆ, ತಾರತಮ್ಯ ಹಾಗೂ ಸಾಮಾಜಿಕ ಕಳಂಕಕ್ಕೆ ಗುರಿಯಾಗಿ ಇಂದಿಗೂ ತಬ್ಬಲಿ ಜಾತಿಗಳಾಗಿಯೇ ಉಳಿದಿವೆ. ಈ ಜಾತಿಗಳನ್ನು ಎಸ್‌ಸಿ ಪಟ್ಟಿಯಲ್ಲಿ ಯಥಾಸ್ಥಿತಿಯಲ್ಲೇ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯಿದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಲಂಬಾಣಿ, ಭೋವಿ, ಕೊರಚ ಹಾಗೂ ಕೋರಮ ಜಾತಿಗಳನ್ನು ಪರಿಶಿಷ್ಟ ಜಾತಿ ಮೀಸಲು ಪಟ್ಟಿಯಿಂದ ಕೈ ಬಿಡುವ ಕುರಿತು ಕೆಲವರು ಕುತಂತ್ರ ನಡೆಸಿದ್ದಾರೆ. ಹೀಗಾಗಿ ಬಂಜಾರ ಸಮುದಾಯ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರ ರವಾನಿಸುವ ಮೂಲಕ ಪತ್ರ ಚಳವಳಿ ಆರಂಭಿಸಿದೆ ಎಂದು ದೂರಿದ್ದಾರೆ. ಜಿಲ್ಲೆಯಾದ್ಯಂತ ಬಹುತೇಕ ಎಲ್ಲ ತಾಂಡಾದಲ್ಲಿ ಬಂಜಾರ-ಲಂಬಾಣಿ ಸಮುದಾಯದ ಹಿರಿಯರು, ಯುವಕರು, ಮಹಿಳೆಯರು ಮುಖ್ಯಮಂತ್ರಿಗೆ ಬರೆದ ಪತ್ರಗಳನ್ನು ಅಂಚೆ ಪೆಟ್ಟಿಗೆ ಹಾಕುವ ಮೂಲಕ ಪತ್ರ ಚಳವಳಿ ನಡೆಸಿದರು.
ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಮಿಸಲಾತಿಯಿಂದ ಕೈ ಬಿಡುವಂತೆ ಕೆಲವರು ಸಂಚು ರೂಪಿಸುತ್ತಿದ್ದಾರೆ. ಸರ್ಕಾರ ಕೂಡಲೇ ಈ ಸಂಚು ರೂಪಿಸಿರುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ನಮ್ಮ ಸಮುದಾಯಗಳಿಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮಿಸಲು ಸೌಲಭ್ಯ ಸಿಕ್ಕಿರುವುದು ಯಾವುದೇ ಸಮುದಾಯ ನಮಗೆ ಕೊಟ್ಟಿರುವ ಭಿಕ್ಷೆ ಅಲ್ಲ, ಇದು ಡಾ| ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನಿಕವಾಗಿ ಕೊಟ್ಟಿರುವ ಸಂವಿಧಾನ ಬದ್ಧವಾದ ಮೀಸಲು ಹಕ್ಕು. ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳನ್ನು ಪರಿಶಿಷ್ಟ ಜಾತಿ ಮಿಸಲಾತಿ ಪಟ್ಟಿಯಿಂದ ತೆಗೆಯುವಂತೆ ಒತ್ತಾಯಿಸುವುದು ಕಾನೂನು ವಿರೋಧಿ ಕ್ರಮ ಎಂದು ಹರಿಹಾಯ್ದರು.
ಸರ್ಕಾರ ಕೂಡಲೇ ಸಂವಿಧಾನ ವಿರುದ್ಧವಾಗಿ ಪರಿಶಿಷ್ಟ ಜಾತಿ ಸಮುದಾಯ ಪಟ್ಟಿಯಿಂದ ನಮ್ಮ ಸಮಾಜವನ್ನು ಕೈಬಿಡುವ ಕುರಿತು ಕುತಂತ್ರ ನಡೆಸಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅತಿ ಹಿಂದುಳಿದಿರುವ ನಮ್ಮ ಸಮುದಾಯವನ್ನು ಸರ್ಕಾರ ಪರಿಶಿಷ್ಟ ಜಾತಿ ಮೀಸಲು ಪಟ್ಟಿಯಿಂದ ಕೈ ಬಿಡಬಾರದು ಎಂದು ಆಗ್ರಹಿಸಿದರು.
ಘೋಣಸಗಿ ಗ್ರಾಮದ ಪತ್ರ ಚಳವಳಿಯಲ್ಲಿ ಸುರೇಶ ಪವಾರ, ಶಂಕರ ಪವಾರ, ರಾಜು ರಾಠೊಡ, ಸಂಜೀವ ರಾಠೊಡ, ಬಬನ ರಾಠೊಡ, ಪ್ರಭು ಚವ್ಹಾಣ, ಬಾಸು ರಾಠೊಡ, ರುಕಾ¾ಬಾಯಿ ಜಾಧವ, ಅನೂಸೂಯಾ ಚವ್ಹಾಣ, ಅಂಜನಾ ಪವಾರ, ಅರ್ಜುನ ಪವಾರ, ಶಿವಾಜಿ ಪವಾರ, ಅಶೋಕ ರಾಠೊಡ ಇತರಿದ್ದರು. ನಗರದಲ್ಲಿ ಬಿ.ಡಿ.ರಾಠೊಡ್, ಸುರೇಶ ಬಿಜಾಪುರ, ಮೋತಿಲಾಲ್ ರಾಠೊಡ, ವಿ.ಏಲ್. ಚವ್ಹಾಣ, ಈರಪ್ಪ ಕೊಂಚಿಕೋರ್ವರ, ಕೆಂಚಪ್ಪ ಕೊಂಚಿಕೊರವರ, ರಮೇಶ ಹಿಪ್ಪರಗಿ, ಶ್ರೀಕಾಂತ್ ರಾಠೊಡ, ಪಿ.ಏನ್.ರಾಠೊಡ, ವಿಜಯಶ್ರೀ ಬಿಜಾಪುರ, ರುಕ್ಮಿಣಿ ರಾಠೊಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.