Advertisement

ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ನಿಯಂತ್ರಣ ಉಪಕರಣ ಅಳವಡಿಕೆಗಾಗಿ ಪತ್ರ

09:32 PM May 13, 2019 | Lakshmi GovindaRaj |

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ಅನಾಹುತ ತಡೆಯುವ ನಿಟ್ಟಿನಲ್ಲಿ ಅಗ್ನಿ ನಿಯಂತ್ರಣ ಉಪಕರಣ ಅಳವಡಿಸುವಂತೆ ಪಾರಂಪರಿಕ ಕಟ್ಟಡಗಳ ಮಾಲಿಕರಿಗೆ ಪತ್ರ ಬರೆಯಲು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿ ತೀರ್ಮಾನಿಸಿದೆ.

Advertisement

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ನಿರ್ಣಯಗಳು: ಉಳಿದಂತೆ ನಗರದ ಹೃದಯ ಭಾಗದ ದೊಡ್ಡ ಗಡಿಯಾರ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. ತಕ್ಷಣ ಸರಿಪಡಿಸದಿದ್ದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಸರಿಪಡಿಸುವಂತೆ ಪುರಾತತ್ವ,

ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು, ಮಹಾ ನಗರಪಾಲಿಕೆ ಅಧಿಕಾರಿಗಳು ಹಾಗೂ ಪಾರಂಪರಿಕ ಸಮಿತಿ ಸದಸ್ಯರು ಪರಿಶೀಲನೆ ನಡೆಸಿ ನೀಡುವ ವರದಿ ಆಧರಿಸಿ, ಮಹಾ ನಗರಪಾಲಿಕೆಯಿಂದ ದೊಡ್ಡ ಗಡಿಯಾರ ಗೋಪುರ ಸಂರಕ್ಷಿಸಲು ಕ್ರಮ ಕೈಗೊಳ್ಳುವುದು.

ಸ್ಥಳಪರಿಶೀಲನೆ: ಜಯಲಕ್ಷ್ಮೀ ವಿಲಾಸ ಅರಮನೆ ಸಂರಕ್ಷಣೆಗೆ ಸಂಬಂಧಿಸಿದಂತೆ 23ರ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೈಸೂರು ವಿವಿ ಕುಲಪತಿ, ಕುಲಸಚಿವರು, ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಲಾಯಿತು.

Advertisement

ಸೂಚನೆ: ನಗರದ ಸಂತೆಪೇಟೆಯ ಬೊಮ್ಮಯ್ಯ ಛತ್ರದ ಸಂರಕ್ಷಣೆ ಸಂಬಂಧ ಸಮಿತಿ ಪರಿಶೀಲನೆ ನಡೆಸಬೇಕಿರುವುದರಿಂದ ತಕ್ಷಣವೇ ಕಟ್ಟಡವನ್ನು ಸ್ವತ್ಛಗೊಳಿಸುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಅಲ್ಲದೇ, ಕುಸಿದು ಬಿದ್ದಿರುವ ನಗರದ ಜೂನಿಯರ್‌ ಮಹಾರಾಜ ಕಾಲೇಜಿನ ಕಾಂಪೌಂಡ್‌ ಅನ್ನು ಪಾರಂಪರಿಕ ಶೈಲಿಯಲ್ಲೇ ಮರು ನಿರ್ಮಾಣ ಮಾಡಲು ನಿರ್ದೇಶನ ನೀಡಲಾಯಿತು.

ಅನುಮತಿ: ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು ಆವರಣದಲ್ಲಿ ಪಾರಂಪರಿಕ ಶೈಲಿಯಲ್ಲಿ ಸಂಶೋಧನಾ ಕೇಂದ್ರ ನಿರ್ಮಿಸಲು ನೀಲಿನಕ್ಷೆ ಸಿದ್ಧಪಡಿಸಿ ಪಾರಂಪರಿಕ ಸಮಿತಿ ಅನುಮತಿ ಪಡೆಯುವಂತೆ ಸೂಚಿಸಲಾಯಿತು.

ಮೈಸೂರು ಮಹಾ ನಗರಪಾಲಿಕೆ ಹಳೇಯ ಕಟ್ಟಡಗಳನ್ನು ಕೆಡವಲು ನಿರಾಪೇಕ್ಷಣ ಪತ್ರ ನೀಡುವ ಮುನ್ನ ಅದು ಪಾರಂಪರಿಕ ಕಟ್ಟಡವೋ ಅಲ್ಲವೋ ಎಂಬುದನ್ನು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪಡೆಯಲು ತಿಳಿಸಲಾಯಿತು.

ಜಂಟಿ ಪರಿಶೀಲನೆ: ನಗರ ರೈಲು ನಿಲ್ದಾಣದ ನವೀಕರಣ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ, ಮಹಾ ನಗರಪಾಲಿಕೆ ಆಯುಕ್ತರು ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪತ್ರ ಬರೆದಿದ್ದರೂ ರೈಲ್ವೇ ಕಾಯ್ದೆಯಡಿ ಕಾಮಗಾರಿ ನಿಲ್ಲಿಸಲು ಅವಕಾಶವಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ

-ಹಿನ್ನೆಲೆಯಲ್ಲಿ ಮೇ 25ರಂದು ಪ್ರವಾಸೋದ್ಯಮ ಸಚಿವರು ಉನ್ನತ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಿರುವುದರಿಂದ ಅಂದಿನ ಜಂಟಿ ಪರಿಶೀಲನೆ ಮತ್ತು ಸಭೆಯಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು. ಮಹಾ ನಗರಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌, ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next