ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಬರುವ ಐನಾಪುರ ಏತ ನೀರಾವರಿ ಯೋಜನೆ ಅನುಮೋದನೆಗಾಗಿ ಕರ್ನಾಟಕ ನೀರಾವರಿ ನಿಗಮ ಜಲ ಸಂಪನ್ಮೂಲ ಇಲಾಖೆ ಸರಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಗ್ರಾಮ ಹಾಗೂ ತಾಂಡಾಗಳ ರೈತರ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗಿದೆ.
ಕೆಳದಂಡೆ ಮುಲ್ಲಾಮಾರಿ ಯೋಜನೆಯಿಂದ ಉಳಿಯುವ 0.567ಟಿಎಂಸಿ ಅಡಿ ನೀರಿನಲ್ಲಿ 0.34ಟಿಎಂಸಿ ನೀರು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಐನಾಪುರ ಏತ ನೀರಾವರಿ ಯೋಜನೆ ವರದಿ ಯನ್ನು 204 ಕೋಟಿ ರೂ.ಗಳಿಗೆ (2018-19ನೇ ಸಾಲಿನ ಜಲಸಂಪನ್ಮೂಲ ಇಲಾಖೆ ದರಪಟ್ಟಿ ಅನ್ವಯ) ತಯಾರಿಸಿದ್ದು 16 ಅಕ್ಟೋಬರ್ 2019ರಂದು ನಡೆದ ನಿಗಮದ 61ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸಲಾಗಿದೆ.
ಈ ಯೋಜನೆಗೆ ನಿಗಮದ ನಿರ್ದೇಶಕರ ಮಂಡಳಿ ಅನುಮೋದನೆ ಪಡೆದು ಸರ್ಕಾರಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಲು ಸಮಿತಿ ಶಿಫಾರಸು ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಜು.4ರಂದು ಜರುಗಿದ ನಿಗಮದ 99ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಂಡಿಸಲಾಗಿತ್ತು. ಚರ್ಚೆ ನಂತರ ನಿಗಮದ ಅಂದಾಜು ಪರಿಶೀಲನಾ ಸಮಿತಿ ಷರತ್ತು ಮತ್ತು ಶಿಫಾರಸಿನಂತೆ ತಾಲೂಕಿನ ಐನಾಪುರ ಮತ್ತು ಇತರೆ 17ಗ್ರಾಮಗಳ ಸುಮಾರು 3710ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 204.10ಕೋಟಿ ರೂ. ಐನಾಪುರ ಏತನೀರಾವರಿ ಯೋಜನೆಯ ಯೋಜನಾ ವರದಿಗೆ ಮಂಡಳಿ ಅನುಮೋದನೆ ನೀಡಿತು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಯೋಜನೆ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿ, ಮೊದಲ ಹಂತವಾಗಿ ವಿದ್ಯುತ್ ಸ್ಥಾವರ ಸೇರಿದಂತೆ ಹೆಡ್ ವರ್ಕ್ಸ್ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಿತು.
ಪ್ರಸ್ತುತ ಆರ್ಥಿಕ ವರ್ಷದಲ್ಲಿ 100ಕೋಟಿ ರೂ. ವೆಚ್ಚ ಮಿತಿಗೊಳಿಸಲು, ಬಾಕಿ ಉಳಿದ ಕಾಮಗಾರಿಗಳನ್ನು 2ನೇ ಹಂತದಲ್ಲಿ ಕೈಗೊಳ್ಳಲು ಸೂಚಿಸಿದೆ.ಐನಾಪುರ ಏತನೀರಾವರಿ ಯೋಜನೆಗೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಅನುಮೋದನೆಗಾಗಿ ವರದಿ ಸಲ್ಲಿಸಲಾಗಿದೆ. ಆಡಳಿತಾತ್ಮಕ ಅನುಮತಿ ಸಿಗಬೇಕಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಲಬುರಗಿಯಲ್ಲಿ ನಡೆಸಿದ ಸಭೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸಿದ್ದು ಖುಷಿಯಾಗಿದೆ.
–ಡಾ|ಅವಿನಾಶ ಜಾಧವ, ಶಾಸಕ
–ಶಾಮರಾವ ಚಿಂಚೋಳಿ