ಮಳೆಗಾಲ ಬಂತೆಂದರೆ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯಗಳು ಬಿರುಸುಗೊಳ್ಳುವುದರಿಂದ ಜನರು ಸಹಜವಾಗಿ ಖುಷಿ ಪಡುತ್ತಾರೆ. ಆದರೆ ನಗರದಲ್ಲಿ ವಾಸವಿರುವವರಲ್ಲಿ ಭಯದ ವಾತಾವರಣ. ಯಾವಾಗ, ಏನು ಅನಾಹುತ ಸಂಭವಿಸುತ್ತದೋ ಎಂಬ ಆತಂಕ.
ಸೂಕ್ತ ಚರಂಡಿ ವ್ಯವಸ್ಥೆ, ಚರಂಡಿಯ ಹೂಳೆತ್ತುವ ಕೆಲಸ ಸಮರ್ಪಕವಾಗಿ ಆಗದೆ ಕೃತಕ ನೆರೆಯುಂಟಾಗುವ ಭಯ ಉಂಟಾಗುತ್ತದೆ. ಅಲ್ಲದೆ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಬೃಹತ್ ಗುಂಡಿಗಳು ಅಪಘಾತಕ್ಕೆ ಕಾರಣವಾಗುತ್ತದೆ. ಮಳೆ ನಿಂತ ಬಳಿಕವೂ ಇದರ ದುರಸ್ತಿಯಾಗದೇ ಇರುವುದು ಇನ್ನಷ್ಟು ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತಿವೆ. ಹೀಗಾಗಿ ಅನಾಹುತಗಳು ನಡೆಯಬಹುದಾದ ಜಾಗದಲ್ಲಿ ಸೂಕ್ತ ಫಲಕಗಳನ್ನು ಅಳವಡಿಸಿ ವಾಹನ ಸವಾರರನ್ನು ಎಚ್ಚರಿಸುವ ಕಾರ್ಯಮಾಡಬೇಕಿದೆ.
ನಗರದ ಒಳರಸ್ತೆಗಳ ಜತೆಗೆ ನಂತೂರು ಸಹಿತ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಇವೆಲ್ಲವನ್ನೂ ಗಮನಿಸಿ ಮುಂದೆ ಸಾಗಬೇಕಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಈ ಗುಂಡಿಗಳಿಂದ ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹೀಗಾಗಿ ಅಂತಹ ಜಾಗದಲ್ಲಿ ವಾಹನ ಸವಾರರಿಗೆ ಸೂಚನೆಗಳನ್ನು ನೀಡುವ ಫಲಕಗಳನ್ನು ಅಳವಡಿಸಿದರೆ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸುತ್ತಾರೆ.
ಬಹುತೇಕ ಭಾಗಗಳಲ್ಲಿ ದೊಡ್ಡ ಗುಂಡಿಗಳು, ಅಪಾಯಕಾರಿ ತಿರುವುಗಳು ಇರುತ್ತವೆ. ಈ ಬಗ್ಗೆ ಸೂಚನೆ ನೀಡುವ ಕೆಲಸವಾಗಬೇಕಾಗಿದೆ. ಚಿಕ್ಕ ಬೋರ್ಡ್‌ಗಳು, ಫಲಕಗಳು ಅಳವಡಿಸಬೇಕು. ಇಲ್ಲವಾದರೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವ ಕೆಲಸವಾಗಬೇಕಿದೆ.
ಪ್ರಜ್ಞಾ ಶೆಟ್ಟಿ