ಕಾಪು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವು ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರೊಂದಿಗೆ ಏಕಕಾಲದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ ವಿಶಿಷ್ಟ ರೀತಿಯಲ್ಲಿ ನಡೆಯಲಿಕ್ಕಿದ್ದು ಈ ಕಾರ್ಯಕ್ರಮವನ್ನು ಪ್ರತೀ ಗ್ರಾಮದಲ್ಲೂ ಯಶಸ್ವಿಯಾಗಿ ಆಯೋಜಿಸಬೇಕೆಂದು ಕಾರ್ಯಕರ್ತರಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಕಾಪು ರಾಜೀವ್ ಭವನದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ಈ ವಿಶಿಷ್ಟ ರೀತಿಯ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಲಿದ್ದು ಎಲ್ಲ ಗ್ರಾಮ ಪಂಚಾಯತ್, ಪುರಸಭೆ ಮತ್ತು ಬ್ಲಾಕ್ ಮತ್ತು ಜಿಲ್ಲಾಮಟ್ಟದ ಎಲ್ಲ ಕಾರ್ಯಕರ್ತರು ಕೂಡ ಅಧ್ಯಕ್ಷರೊಂದಿಗೆ ಏಕಕಾಲದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮವು ಪಕ್ಷಕ್ಕೆ ಪುನಶ್ಚೇತನ ನೀಡುವುದರೊಂದಿಗೆ ಕಾರ್ಯಕರ್ತರಲ್ಲಿ
ಹೊಸ ಸ್ಫೂರ್ತಿಯನ್ನು ನೀಡಲಿದೆ. ಎಲ್ಲ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದರು.
ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಸುಮಾರು 23,000ಕ್ಕೂ ಹೆಚ್ಚು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಜನರಿಗೆ ದಾನಿಗಳ ಸಹಕಾರದಿಂದ ಹಂಚಲಾಗಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಕೆಪಿಸಿಸಿ ವೀಕ್ಷಕರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅನಿಲ್ ಕುಮಾರ್, ಪಕ್ಷದ ಮುಖಂಡರಾದ ಡಾ| ದೇವಿಪ್ರಸಾದ್ ಶೆಟ್ಟಿ, ಗೀತಾ ವಾಗ್ಲೆ, ವಿಶ್ವಾಸ್ ವಿ. ಅಮೀನ್, ಕಾಪು ದಿವಾಕರ ಶೆಟ್ಟಿ, ವಿನಯ ಬಲ್ಲಾಳ್, ಪ್ರಭಾ ಬಿ. ಶೆಟ್ಟಿ, ಮೊಹಮ್ಮದ್ ಸಾದಿಕ್, ದಿನೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಅಬ್ದುಲ್ ರಹಿಮಾನ್ ಕನ್ನಂಗಾರ್, ಗೋಪಾಲ್ ಪೂಜಾರಿ ಪಾಲಿಮಾರ್, ಮೊಹಮ್ಮದ್ ಫಾರೂಕ್, ಸತೀಶ್ ದೇಜಾಡಿ ಹಾಗೂ ವಿವಿಧ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಪುರಸಭೆ, ತಾ.ಪಂ. ಮತ್ತು ಜಿ.ಪಂ. ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಪ್ರಸ್ತಾವನೆಗೈದರು. ಬ್ಲಾಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿದರು. ನಾಗೇಶ್ ಎಸ್. ಸುವರ್ಣ ವಂದಿಸಿದರು.