Advertisement
ರೈತನ ಕುದುರೆಯು ಮತ್ತೊಂದು ಕುದುರೆಯೊಡನೆ ಬಂತು ಎಂದು ತಿಳಿದ ಕೂಡಲೇ ನೆರೆಹೊರೆಯವರು ಅವನಲ್ಲಿ ಬಂದು ನೀನು ಅದೃಷ್ಟವಂತ ಎಂದರು. ನಿರ್ಲಿಪ್ತ ಮನೋಭಾವದಿಂದ ಆ ರೈತನು ಮತ್ತೆ ನುಡಿದದ್ದು ಇರಬಹುದೇನೋ ಎಂದು ಅಷ್ಟೇ.ಮರುದಿನ ಆ ರೈತನ ಮಗನು ಆ ಹೊಸ ಕುದುರೆಯನ್ನು ಪಳಗಿಸುವ ಯತ್ನದಲ್ಲಿ ಕುದುರೆಯ ಮೇಲಿನಿಂದ ಕೆಳಕ್ಕೆ ಬಿದ್ದು ಕಾಲು ಮುರಿದುಕೊಂಡ. ಮತ್ತದೇ ನೆರೆಹೊರೆಯವರು ರೈತನಲ್ಲಿ ಬಂದು ಸಂತಾಪ ವ್ಯಕ್ತಪಡಿಸಿದರು.
Related Articles
Advertisement
ಮುಂದಿನ ಎರಡು ದಿನಗಳಲ್ಲಿ ಅರ್ಧಕ್ಕೆ ಬಿಟ್ಟ ಬೇಟೆಯನ್ನು ಮುಂದುವರೆಸಲು ರಾಜನು ಸೈನಿಕರೊಂದಿಗೆ ಹೊರಟವನಾಗಿ, ಬೇಟೆ ಅರಸುತ್ತ ಸೈನಿಕರಿಂದ ದೂರಾಗಿ ಅದಾವುದೋ ಕಾಡು ಜನರ ಕೈಗೆ ಸಿಕ್ಕಿ ಬೀಳುತ್ತಾನೆ. ರಾಜನನ್ನು ಬಂಧಿ ಮಾಡಿ ಬಲಿಗೆ ಒಯ್ಯುತ್ತಾರೆ. ಬಲಿ ಕೊಡುವ ಸಂದರ್ಭದಲ್ಲಿ ಅವನಿಗೆ ಪೂಜೆ ಮಾಡುವಾಗ ಕಿವಿಗೆ ಆಗಿರುವ ಗಾಯವನ್ನು ಗಮನಿಸಿ, ಬಲಿಗೆ ಇವನು ಯೋಗ್ಯನಲ್ಲ ಎಂದು ನಿರ್ಧರಿಸಿ ಬಿಟ್ಟು ಬಿಡುತ್ತಾರೆ. ಬದುಕಿ ಬಂದ ರಾಜನು ಕೂಡಲೇ ಕಾರಾಗೃಹದಲ್ಲಿದ್ದ ಮಂತ್ರಿಯನ್ನು ಬಂಧಮುಕ್ತನನ್ನಾಗಿ ಮಾಡಿ, ತನಗಾದ ಅನುಭವ ಹೇಳುತ್ತಾ ಧನ್ಯವಾದ ತಿಳಿಸುತ್ತಾನೆ.
ಅನಂತರ ಮಂತ್ರಿಯನ್ನು ಕುರಿತು, ಕಾರಾಗೃಹಕ್ಕೆ ತಳ್ಳಿದಾಗಲೂ “ಆದದೆಲ್ಲಾ ಒಳಿತೇ ಆಯಿತು’ ಎಂದದ್ದು ಏಕೆ ಕೇಳುತ್ತಾನೆ. ಅದಕ್ಕೆ ಮಂತ್ರಿಯು ನಗುತ್ತ “ರಾಜನ್, ನೀವು ನನ್ನನ್ನು ಕಾರಾಗೃಹಕ್ಕೆ ತಳ್ಳದೇ ಹೋಗಿದ್ದರೆ ಈ ಬಾರಿಯೂ ನಿಮ್ಮೊಂದಿಗೆ ನಾನು ಇರುತ್ತಿದ್ದೆ. ಕಿವಿಗೆ ಆದ ಪೆಟ್ಟಿನಿಂದ ನೀವೇನೋ ಬಚಾವ್ ಆಗುತ್ತಿದಿರಿ ಆದರೆ ನಿಮ್ಮ ಬದಲಿಗೆ ನನ್ನನ್ನು ಬಲಿ ಕೊಡುತ್ತಿದ್ದರು. ಏನೇ ಕೆಡುಕಾದರೂ ಮುಂದೊಂದು ದಿನದ ಒಳಿತಿಗಾಗಿಯೇ ಆಗಿದೆ ಎಂದುಕೊಂಡರೆ ಸದಾ ಒಳಿತು. ಹಾಗಾಗಿ ನಾನು ಸದಾ “ಆದದೆಲ್ಲ ಒಳಿತೇ ಆಯಿತು’ ಎಂದು ಹೇಳಿಕೊಳ್ಳುತ್ತೇನೆ ಎನ್ನುತ್ತಾನೆ.
ನೀತಿ ಕಥೆಗಳನ್ನು ನಮ್ಮೆಲ್ಲರ ಜೀವನದಲ್ಲಿ ಸಾಕಷ್ಟು ಓದಿದ್ದೇವೆ, ಕೇಳಿದ್ದೇವೆ. ಇದರ ಮಹತ್ವವಾದರೂ ಏನು? ಒಂದು ಬುದ್ಧಿ ಮಾತನ್ನು ಹಲವಾರು ರೀತಿಯಲ್ಲಿ ಹೇಳಬಹುದು. ಬುದ್ಧಿಮಾತನ್ನು ಸುಮ್ಮನೆ ಹೇಳಿದರೆ ಅದು ಸಂದರ್ಭಾನುಸಾರ ತಲೆಗೆ ತಾಕುವುದಿಲ್ಲ. ಬುದ್ಧಿಯೊಳಗೆ ಇಳಿಯುವುದಿಲ್ಲ. ಮುಖ್ಯವಾಗಿ ಎಲ್ಲ ದಿಕ್ಕುಗಳೂ ಸರಿಯಾಗಿರುವ ಸಮಯದಲ್ಲಂತೂ ಬುದ್ಧಿಮಾತನ್ನು ಯಾರಾದರೂ ಹೇಳಿದರೆ ಅವರು ನಮ್ಮನ್ನು ಕಂಡು ಕರುಬುತ್ತಿದ್ದಾರೆ ಎಂದೇ ಅನ್ನಿಸೋದು. ತಮಗಿಲ್ಲದ ಸಿರಿಯನ್ನೋ, ಅದೃಷ್ಟವನ್ನೋ ನಮ್ಮಲ್ಲಿ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದೇ ಅರ್ಥೈಸಿಕೊಳ್ಳೋದು.
ನೀತಿಯನ್ನು ಹಲವು ವಿಧದಲ್ಲಿ ಹೇಳಬಹುದು ಎಂಬಂತೆ ಒಂದು ಕಥೆಯನ್ನು ಹಲವಾರು ರೀತಿಯಲ್ಲಿ ಹೇಳಬಹುದು. ಕಥೆಗಳನ್ನು ಸುಮ್ಮನೆ ಕೂತಾಗ ಹೇಳುವುದಕ್ಕಿಂತ ಸಂದರ್ಭಕ್ಕೆ ತಕ್ಕಂತೆ ಹೇಳಿದಾಗ ತಲೆಯೊಳಗೆ ಇಳಿಯುತ್ತದೆ. ಜತೆಗೆ ಕಥೆಗಳನ್ನು ಪದೇಪದೆ ಹೇಳಿದಾಗ ಅಥವಾ ಕೇಳಿದಾಗ ಅದರ ಸೊಗಸು ಇನ್ನೂ ಹೆಚ್ಚು. ಮೊದಲಿಗೆ bedtime stories ಎಂಬ ವಿಚಾರ. ಮಕ್ಕಳಿಗೆ ಈ ಸಮಯದಲ್ಲಿ ಕಥೆ ಹೇಳಿದಾಗ ಅವರು ನಿದ್ರೆಗೆ ಜಾರುವ ತನಕ ಅರ್ಥೈಸಿಕೊಳ್ಳುತ್ತಾರೆ. ಕೊಂಚ ನಿದ್ರೆ ಆವರಿಸುತ್ತಿದೆ ಎಂದಾಗ ಅದು ತಿಳಿಯುವುದಿಲ್ಲ.
ಸತ್ಯನಾರಾಯಣ, ಮತ್ತು ಗಣೇಶನ ಹಬ್ಬಗಳ ಸಮಯದಲ್ಲಿ ಕಥಾಶ್ರವಣ ಎಂಬುದು ಮಾಡಲೇಬೇಕಾದ ಒಂದು ಸಂಪ್ರದಾಯ. ಈ ಕಥೆಗಳನ್ನು ಸುಮ್ಮನೆ ಓದಿದಾಗ ಅಥವಾ ಓದುವುದನ್ನು ಕೇಳಿದಾಗ ಅಷ್ಟು ತಟ್ಟುವುದಿಲ್ಲ ಬದಲಿಗೆ ಕಥೆಯನ್ನು ರಸವತ್ತಾಗಿ ಹೇಳಿದಾಗ ಅದರ ಸ್ವಾರಸ್ಯವೇ ಬೇರೆ. ಒಂದಾನೊಂದು ಕಾಲದಲ್ಲಿ ನಮ್ಮ ಮನೆಯ ಎದುರಿನಲ್ಲೇ ರಾಮಮಂದಿರ ಇತ್ತು. ಒಂದು ತಿಂಗಳ ಕಾಲ ಕೌಶಿಕ್ ಎಂಬುವರು ರಸವತ್ತಾಗಿ ಮಹಾಭಾರತ ಪುರಾಣ ಶ್ರವಣ ಮಾಡಿದರು. ಅವರು ಹೇಳಿದ ಮುಖ್ಯ ಕಥೆಯೊಂದಿಗೆ ಉಪಕಥೆಗಳು ಇಂದಿಗೂ ನನ್ನ ಹೃದಯದಲ್ಲಿ ಕೂತಿದೆ.
ಈಗ ಮಾತನ್ನು ಕಥೆಗಳಿಗೆ ಮತ್ತೊಮ್ಮೆ ಹೊರಳಿಸಿದರೆ, ಈ ಕಥೆಗಳನ್ನು ಪುಸ್ತಕದಲ್ಲಿ ಪ್ರಿಂಟ್ ಮಾಡಿದಾಗ ಚಿತ್ರಸಹಿತ ಕಥೆ ಇರುತ್ತಿತ್ತು. ಚಂದಮಾಮ, ಬಾಲಮಿತ್ರ ಪುಸ್ತಕಗಳಲ್ಲಿ ಒಂದೋ ಎರಡೋ ಚಿತ್ರಗಳೇ ಇ¨ªಾಗಲೂ ಅದರ ಪ್ರಭಾವ ಹೆಚ್ಚಾಗಿಯೇ ಇತ್ತು. ಇಂಥಾ ಕಥೆಗಳು ದೃಶ್ಯಮಾಧ್ಯಮದಲ್ಲಿ ಬಂದಾಗ ಅದರ ಮಹತ್ವ ಇನ್ನೆಷ್ಟಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ರಾಮಾಯಣ ಮತ್ತು ಮಹಾಭಾರತದಲ್ಲಿನ ಉಪಕಥೆಗಳು, ವಿಕ್ರಮನ ಬೇತಾಳ ಕಥೆಗಳು ಮುಂತಾದವು ಅತೀ ಹೆಚ್ಚು ಜನರನ್ನು ದೃಶ್ಯಮಾಧ್ಯಮದಲ್ಲೂ ತಲುಪಿತು ಎನ್ನುವುದೇ ದೃಷ್ಟಾಂತ ಕಥೆಗಳ ಮಹತ್ವ.
ಕಥೆಗಳದ್ದು ಒಂದು ಸ್ವರೂಪವಾದರೆ, ನೀತಿ ಕಥೆಗಳದ್ದೇ ಮತ್ತೂಂದು ಸ್ವರೂಪ. ಪಂಚತಂತ್ರ ಕಥೆಗಳು, ಬೋಧಿಸತ್ವನ ಕಥೆಗಳು, ತೆನಾಲಿ ರಾಮನ ಕಥೆಗಳು, ಜಾತಕ ಕಥೆಗಳೇ ಮೊದಲಾದ ಕಥಾಸ್ವರೂಪದಲ್ಲಿ ಲಾಜಿಕ್ ಹುಡುಕುವುದಕ್ಕಿಂತಲೂ ಅದರಲ್ಲಿ ಅಡಕವಾಗಿರುವ ನೀತಿಯನ್ನು ಅರ್ಥೈಸಿಕೊಳ್ಳಲು ಯತ್ನಿಸಬೇಕು. ಪಂಚತಂತ್ರ ಕಥೆಗಳನ್ನು ರಚಿಸಿ, ಅಷ್ಟೇನೂ ಬುದ್ಧಿವಂತರಲ್ಲದ ರಾಜಕುಮಾರರಿಗೆ ಹೇಳಿ ಹೇಳಿ ಅವರಲ್ಲಿ ಜ್ಞಾನವನ್ನು ಮೂಡಿಸಲಾಗಿತ್ತು ಎಂಬುದಾಗಿ ಕಥೆಯೂ ಇದೆ. ಇಂಥಾ ಕಥೆಗಳನ್ನು ಕೇಳಿ, ಓದಿ ಆನಂದಿಸಿದ್ದು ನಿಜ. ಆದರೆ ಅದಕ್ಕೊಂದು ದೃಷ್ಟಾಂತ ಕಥಾರೂಪ ಬಂದು ಸಂಭಾಷಣೆಗಳು ಚಿತ್ರಸಹಿತವಾಗಿ ಅಮರ ಚಿತ್ರಕಥೆಯ ರೂಪದಲ್ಲಿ ಬಂದಾಗಲಂತೂ ಆ ಕಥೆಗಳನ್ನು ಮತ್ತೂಮ್ಮೆ ಮಗದೊಮ್ಮೆ ಓದುವ ಮನಸ್ಸಾಗುತ್ತಿತ್ತು.
ಕಥೆಗಳನ್ನು ಕೇಳುವ ಮನವು ಸದಾ ಉತ್ಸುಕವಾಗಿಯೇ ಇರುತ್ತದೆ. ಕಥೆಗಳನ್ನು ಕೇಳಲು ವಯಸ್ಸು ಅಡ್ಡಬರುವುದಿಲ್ಲ. ದಿನನಿತ್ಯದಲ್ಲಿ ಕಥೆಗಳನ್ನು ಕೇಳ್ಳೋಣ, ಮುಖ್ಯವಾಗಿ ಹಿರಿಯರಾಗಿ ಕಿರಿಯರಿಗೆ ಕಥೆಗಳನ್ನು ಹೇಳುವುದಕ್ಕೆ ಮರೆಯಬಾರದು. ಈ ಕಥೆಗಳ ಬಗ್ಗೆ ಒಂದೆರಡು ಮಾತನ್ನಷ್ಟೇ ಹೇಳಿದ್ದೇನೆ, ಆಡದೇ ಉಳಿದಿಹ ಮಾತು ನೂರಿದೆ.
*ಶ್ರೀನಾಥ್ ಭಲ್ಲೆ, ರಿಚ್ಮಂಡ್