Advertisement

ಮೋದಿ ಜತೆ ಮಾತನಾಡಬೇಕಾ?, ಇಂದು ಸಂವಾದಕ್ಕೆ ಬನ್ನಿ

01:09 PM Mar 31, 2019 | Team Udayavani |

ಮೈಸೂರು: ನಾನಾ ಕ್ಷೇತ್ರದ ಚೌಕಿದಾರರ ಜೊತೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಭಾರತಿ ಕನ್ವೆನ್ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸುಮಾರು 500 ಪ್ರದೇಶಗಳ ಜನರೊಂದಿಗೆ ಪ್ರಧಾನಿ ಮೋದಿ ಅವರು ಸಂಜೆ 5ಗಂಟೆಗೆ ದೆಹಲಿಯಿಂದ ವಿಡಿಯೋ ಸಂವಾದದಲ್ಲಿ ಬಿಜೆಪಿ ನಾಯಕರು ಹಾಗೂ ಎನ್‌ಡಿಎ ಮಿತ್ರಪಕ್ಷಗಳು, ಶಿಕ್ಷಕರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ಕೆಡೆಟ್ಸ್‌ಗಳು, ವೈದ್ಯರು, ವಕೀಲರು, ಐಟಿ ಉದ್ಯೋಗಿಗಳು ಸೇರಿದಂತೆ ಇನ್ನಿತರೆ ವೃತ್ತಿಪರರು, ಕೃಷಿಕರು, ನಿವೃತ್ತ ಯೋಧರು, ವರ್ತಕರು ಹಾಗೂ ಉದ್ಯಮಿಗಳು, ವಾಹನ ಚಾಲಕರು, ಸೆಕ್ಯೂರಿಟಿ ಗಾರ್ಡ್‌ಗಳು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮೈಸೂರಿಗೆ ಬಿಜೆಪಿ ಸಾಧನೆ: ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸಂಪುಟದಲ್ಲಿ ಮಂಜೂರಾತಿ ನೀಡಿ ಹಣ ನೀಡಿದ್ದು, ಪ್ರಧಾನಿ ಮೋದಿ ಅವರು, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೈಸೂರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ತಂದಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಹೊಸ ಕಟ್ಟಡ ನಿರ್ಮಾಣಕ್ಕೂ 40 ಕೋಟಿ ರೂ. ಬಿಡುಗಡೆ ಮಾಡಿದ್ದರು.

ಆದರೆ, ಹೊಸ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ನೀವು ಕಲ್ಲಿನಲ್ಲಿ ನಿಮ್ಮ ಹೆಸರು ಹಾಕಿಸಿಕೊಂಡಿದ್ದೀರಿ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಜಾಗ ನೀಡಿದ್ದು ಕೇಂದ್ರ ಸರ್ಕಾರ, ಹಿನಕಲ್‌ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಶೇ.80ರಷ್ಟು ಹಣ ನೀಡಿರುವುದು ಕೇಂದ್ರ ಸರ್ಕಾರ, ಆದರೆ ಇದನ್ನು ಸಿದ್ದರಾಮಯ್ಯ ನಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್‌ ಭವನ ಇರಬೇಕು ಎಂಬ ಕಾರಣಕ್ಕೆ ನಾನು ಜಿಲ್ಲಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು, ಇಷ್ಟು ವರ್ಷಗಳಾದರೂ ನಿಮ್ಮಿಂದ ಕಾಮಗಾರಿ ಪೂರ್ಣಗೊಳಿಸಲಾಗಲಿಲ್ಲ ಎಂದು ರಾಮದಾಸ್‌ ಕಿಡಿಕಾರಿದರು.

ತೇಜಸ್ವಿನಿ ಬಿಜೆಪಿ ವಿರುದ್ಧ ಹೋಗಲ್ಲ: ರಾಜ್ಯ ಬಿಜೆಪಿ ವಕ್ತಾರ ಡಾ.ವಾಮನಾಚಾರ್ಯ ಮಾತನಾಡಿ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್‌ ತನ್ನದೇ ಆದ ಮಾನದಂಡಗಳನ್ನು ಅನುಸರಿಸಿ ತೇಜಸ್ವಿ ಸೂರ್ಯಗೆ ಟಿಕೆಟ್‌ ನೀಡಿದೆ. ಹೀಗಾಗಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಅಸಮಾಧಾನವಾಗಿರುವುದು ಸಹಜ, ಹಾಗೆಂದು ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದು ಸ್ವತಃ ಅವರೇ ಸಷ್ಪಪಡಿಸಿದ್ದಾರೆ. ಒಂದೆರಡು ದಿನಗಳ ನಂತರ ಪಕ್ಷದವರೊಂದಿಗೆ ಸೇರಿ ಚುನಾವಣೆ ಗೆಲುವಿಗೆ ಅವರೂ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೆಂಗಳೂರು ದಕ್ಷಿಣ ಕ್ಷೇತ್ರದ ಪರಿಸ್ಥಿತಿಯೇ ಬೇರೆ, ಮಂಡ್ಯ ಕ್ಷೇತ್ರದ ಪರಿಸ್ಥಿತಿಯೇ ಬೇರೆ, ಮಂಡ್ಯದಲ್ಲಿ ಪಕ್ಷ ಇನ್ನೂ ಗೆಲ್ಲುವ ಹಂತಕ್ಕೆ ಬೆಳೆದಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರಿಗೆ ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದರು. ಪಕ್ಷದ ಮುಖಂಡರಾದ ಎನ್‌.ವಿ.ಫ‌ಣೀಶ್‌, ಎಚ್‌.ಪಿ.ಸತೀಶ್‌, ಎಚ್‌.ವಿ.ರಾಜೀವ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸಿದ್ದರಾಮಯ್ಯಗೆ ಪಂಥಾಹ್ವಾನ: ಎನ್‌ಡಿಎ ಮತ್ತು ಯುಪಿಎ ಸರ್ಕಾರದ ಸಾಧನೆಗಳ ಬಗ್ಗೆ ಹಾಗೂ ರಾಜ್ಯದ ಬಿಜೆಪಿ ಲೋಕಸಭಾ ಸದಸ್ಯರು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಆಹ್ವಾನಿಸಿ ತಾವು ಬರೆದ ಪತ್ರಕ್ಕೆ ಉತ್ತರ ಬರೆದಿರುವ ಸಿದ್ದರಾಮಯ್ಯ ಅವರು, ಈ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಚರ್ಚೆಗೆ ಬರುವಂತೆ ಆಹ್ವಾನಿಸಿದ್ದೇನೆ ಹೊರತು ನಿಮ್ಮೊಂದಿಗಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿನ ಅಭಿವೃದ್ಧಿ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಲು ಬಯಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಸಂವಾದದಲ್ಲಿ ಭಾಗವಹಿಸಲಿ ಎಂದು ರಾಮದಾಸ್‌ ಪಂಥಾಹ್ವಾನ ನೀಡಿದರು.

ಆಂಗ್ಲ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿರುವ ಸಿದ್ದರಾಮಯ್ಯ ಅವರು ಅಭಿವೃದ್ಧಿ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ನಿಮ್ಮ ಆಹ್ವಾನ ಸ್ವೀಕರಿಸಿ ಚರ್ಚೆಗೆ ನಾವು ಸಿದ್ಧರಿದ್ದೇವೆ, ಆದರೆ, ಚರ್ಚೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಅವರು ಮೋದಿ ಅವರೇ ಬರಬೇಕು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next