Advertisement

ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆ‌ಯೋಣ

07:10 AM Sep 12, 2017 | |

ಕಾಸರಗೋಡು: ಗುರುಗಳ ಮಾರ್ಗದರ್ಶನ ಇಲ್ಲದಿದ್ದಲ್ಲಿ ಸಮಾಜವು ದಿಕ್ಕು ತಪ್ಪಿದ ಗಾಳಿಪಟದಂತೆ ಆಗುತ್ತದೆ. ಗುರುಗಳ ದಿಗªರ್ಶನದಲ್ಲಿ ಸಮಾಜ ಮುನ್ನಡೆಯಬೇಕು. ಗುರುಗಳು ಸಮಾಜವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುತ್ತಿರುವಾಗ ಸಮಾಜವು ಕೂಡಾ ಮಠದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು  ಎಂದು ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ಅವರು ಪಡುಕುತ್ಯಾರಿನ ಶ್ರೀಮತ್‌ ಆನೆಗುಂದಿ ಮಠದ ಸಭಾಂಗಣದಲ್ಲಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ, ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಹೇಮಲಂಬೀ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ‌ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿಶ್ವಕರ್ಮ ಸಮಾಜದ ಹಿರಿಯರು ಬಹಳಷ್ಟು ಶ್ರಮ ಪಟ್ಟು ಶತಮಾನಗಳ ಅನಂತರ ಇದೀಗ ಕುಲಗುರುಗಳನ್ನು ಪಡೆದಿದ್ದು,  ಅವರು ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಅಂತಹ ಗುರುಗಳನ್ನು ಟೀಕೆ ಮಾಡು ವವರನ್ನು ಒಕ್ಕೊರಲಿನಿಂದ ಸಮಾಜವು ಖಂಡಿಸಬೇಕು. ಗುರುಗಳು ಟೀಕೆ ಟಿಪ್ಪಣಿಗಳಿಗೆ ಮಣಿಯಬಾರದು. ಸಮಾಜದ ಎಲ್ಲ ಸಮಸ್ಯೆಗಳನ್ನು ಮಠದಲ್ಲಿ ಗುರುಗಳ ಸಮ್ಮುಖದಲ್ಲಿ ಪರಿಹರಿಸುವಂತೆ ಇದಕ್ಕೆ  ಇಡೀ ಜಿಲ್ಲಾಡಳಿತವೇ ಶ್ರೀ ಗುರುಗಳ ಜತೆಗಿದೆ. ಇಚ್ಛಿಸಿದ ಸಮಯದಲ್ಲಿ  ವಿಶ್ವಕರ್ಮರ ಬೇಡಿಕೆಗಳನ್ನು ಈಡೇರಿಸಲು ಬದ್ಧನಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧ್ವರಾಜ್‌ ಹೇಳಿದರು.

ಕಾಪು ಶಾಸಕ, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ ಮಾತನಾಡಿ ದೇಶಕ್ಕೆ ಅಪಾರವಾದ ಕೊಡುಗೆ ಕೊಟ್ಟ ಸಮಾಜ ವಿಶ್ವಕರ್ಮ ಸಮಾಜ. ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಮಾಜದ ಜನರನ್ನು ಒಟ್ಟುಗೂಡಿಸುವ ಕೆಲಸ ಶ್ರೀ ಮಹಾಸ್ವಾಮಿಗಳಿಂದ ನಡೆಯುತ್ತಿದೆ. ಕಾಪು ಕ್ಷೇತ್ರದ ಪ್ರದೇಶದ ಅಭಿವೃದ್ಧಿಗಳಲ್ಲಿ ಸಮಸ್ತ   ಸ್ವಾಮೀಜಿಗಳಿಂದ ಅನೇಕ ಆವಶ್ಯಕ ಕೆಲಸ ಕಾರ್ಯಗಳು ನಡೆದಿವೆೆ. ಹಾಗಾಗಿ ಇಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುವುದಾಗಿ ತಿಳಿಸಿದರು.

ಗುರುಸೇವೆಯು ಅತ್ಯಂತ ಶ್ರೇಷ್ಠ ಸೇವೆ. ಭಗವಂತನ ಸೇವೆಯು ಪ್ರಸಾದವಾದಾಗ ಮನಸ್ಸು ಪ್ರಶಾಂತವಾಗುತ್ತದೆ. ನಿಂದನೆ ಸ್ಫೂರ್ತಿಗಳಲ್ಲಿ ವಿಕಾರ ಹೊಂದದೆ ಇರುವ ಮನಸ್ಸು ನೆಮ್ಮದಿಯಿಂದಿರುತ್ತದೆ. ಕಷ್ಟಗಳನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸಿದಾಗ ವಿರೋಧಿಗಳು ನಿಜಾರ್ಥದಲ್ಲಿ ನಮ್ಮನ್ನು ಬೆಳೆಸಿದಂತೆ. ಹಾಗಾಗಿ ಸುಖ, ದುಃಖಗಳಲ್ಲಿ ಸಮತ್ವವನ್ನು ಹೊಂದಬೇಕು. ಆದಾಗ ಮನುಷ್ಯ ಜೀವನದಲ್ಲಿ ಶಾಂತತೆ ಇರುತ್ತದೆ ಎಂದು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ, ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು  ತಮ್ಮ ಆಶೀರ್ವಚನದಲ್ಲಿ ನುಡಿದರು.

Advertisement

ಪಡುಕುತ್ಯಾರಿನ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಕ್ಕೆ ನೂತನ ವಾಗಿ ಯಜ್ಞ ಶಾಲೆಯನ್ನು ನಿರ್ಮಿಸಿ ಶ್ರೀ ಶತಚಂಡಿಕಾ ಮಹಾಯಾಗವನ್ನು ನಡೆಸಿ ಸಮರ್ಪಿಸುವ ಪುಣ್ಯ ಕೈಂಕರ್ಯವನ್ನು  ಕೈಕೊಂಡ ಬಾಕೂìರು ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ್‌ ಕುಂದಾಪುರ ವಡೇರಹೋಬಳಿ ಶ್ರೀಮತಿ ಮತ್ತು ವಿ. ಶ್ರೀಧರ ಆಚಾರ್ಯ ದಂಪತಿಯನ್ನು ಮಹಾಸಂಸ್ಥಾನದ ವತಿಯಿಂದ ಸ್ವರ್ಣ ಲಾಂಛನ ಪದಕ, ಅನುಗ್ರಹ ಪತ್ರ ಸ್ಮರಣಿಕೆಯೊಂದಿಗೆ ಪೇಟ ಮತ್ತು ಶಾಲು ಹೊದೆಸಿ ಗೌರವ ಪೂರ್ವಕ ಸಮ್ಮಾನಿಸಲಾಯಿತು.ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಸುಧಾಕರ ಆಚಾರ್ಯ ತ್ರಾಸಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಚಾತುರ್ಮಾಸ್ಯದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತಾ ಸಮರ್ಪಣೆ ನಡೆಯಿತು. ಅನುಗ್ರಹ ಮಂತ್ರಾಕ್ಷತೆ ಬಳಿಕ ಮಹಾ ಸಂತರ್ಪಣೆ ಜರಗಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ‌ರಾದ ಲಾಲಾಜಿ ಆರ್‌. ಮೆಂಡನ್‌, ಕೆ. ರಘುಪತಿ ಭಟ್‌, ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಗೋಪಾಲ ಪೂಜಾರಿ, ಅವಿಭಜಿತ ದ.ಕ. ಜಿಲ್ಲೆ ಗ್ರಾಮ ಪಂಚಾಯತ್‌ ಅಧ್ಯಕ್ಷರಒಕ್ಕೂಟ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಐಕಳ, ಕುತ್ಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷ ಧೀರಜ್‌ ಶೆಟ್ಟಿ, ವಿದ್ವಾನ್‌ ವೇ.ಬ್ರ ಶಂಕರಾಚಾರ್ಯ ಕಡ್ಲಾಸ್ಕರ್‌ ಪಂಡಿತ್‌  ಹುಬ್ಬಳ್ಳಿ, ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್‌. ಆಚಾರ್ಯ, ವಿಶ್ವಕರ್ಮ ಒಕ್ಕೂಟ, ಅವಿಭಜಿತ ದ.ಕ. ಜಿಲ್ಲೆಯ ಅಧ್ಯಕ್ಷ  ಯು.ಕೆ.ಎಸ್‌. ಸೀತಾರಾಮ ಆಚಾರ್ಯ,  ನಾರಾಯಣ ಆಚಾರ್ಯ ಕೋಣಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವ ಅಧ್ಯಕ್ಷರು ಕೆ. ಕೇಶವ ಆಚಾರ್ಯ ಮಂಗ ಳೂರು, ಕೋಶಾಧಿಕಾರಿ ಪಿ.ವಿ. ಗಂಗಾ ಧರ ಆಚಾರ್ಯ ಉಡುಪಿ, ಪಡು ಕುತ್ಯಾರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆ ಯಂಗಡಿ, ಗುರುಸೇವಾ ಪರಿಷತ್‌ ಕೇಂದ್ರ ಸಮಿತಿ ಮಧು ಆಚಾರ್ಯ ಮೂಲ್ಕಿ, ಕೃಷ್ಣ ವಿ.ಆಚಾರ್ಯ ಮುಂಬೈ, ಶ್ರೀಧರ ಆಚಾರ್ಯ, ಶುಭಕರ ಎನ್‌. ಆಚಾರ್ಯ ಕೊಯಂಬತ್ತೂರು, ಮಲ್ಲಿಕಾರ್ಜುನ ಆಚಾರ್ಯ ಶಿಕಾರಿಪುರ,  ಅಧ್ಯಕ್ಷರು ಕಟ ಪಾಡಿ, ಹಾಗೂ ಕರಾವಳಿಯ ಹದಿ ನೈದು ವಿಶ್ವಬ್ರಾಹ್ಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಮುಂಬಯಿ, ಬೆಂಗಳೂರು, ಕೊಯಂಬತ್ತೂರು, ಹುಬ್ಬಳ್ಳಿ, ಶಿಕಾರಿಪುರ ಪ್ರತಿಷ್ಠಾನದ ವಲಯ ಸಮಿತಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರ್‌ ಸ್ವಾಗತಿಸಿದರು.  ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರ.ಕಾರ್ಯ ದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ವಂದಿಸಿದರು. ಕಾರ್ಯ ದರ್ಶಿ ನ್ಯಾಯವಾದಿ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು, ಟಿ.ಜಿ. ಆಚಾರ್ಯ ಹೆಬ್ರಿ ಕಾರ್ಯಕ್ರಮ ನಿರೂಪಿಸಿದರು. ಮಹಾಸಂಸ್ಥಾನದ ಶ್ರೀ ನಾಗಧರ್ಮೇಂದ್ರ ಸ್ವಾಮೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.

ಅಂದು ಬೆಳಗ್ಗೆ  ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವಿಶ್ವಕರ್ಮ ಯಜ್ಞ ನಡೆಯಿತು. ಬಳಿಕ ಕಟಪಾಡಿ ಬಳಿಯ ಮಣಿಪುರ ಹೊಳೆಯ ಮೃತ್ತಿಕಾ ಸಮರ್ಪಣೆ ಸೀಮೋಲ್ಲಂಘನ ನಡೆಯಿತು. ಅನಂತರ ಕಟಪಾಡಿಯ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿಮಠ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾ ವನ, ಕಟಪಾಡಿ ವೇಣುಗಿರಿ ಶ್ರೀ ಕಾಳಿ ಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಮತ್ತು ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಪೂಜೆ ಜಗದ್ಗುರುಗಳು ನೆರವೇರಿಸಿದರು. ಬಳಿಕ ಜಗದ್ಗುರುಗಳು ಮೆರವಣಿಗೆಯಲ್ಲಿ  ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡು ಕುತ್ಯಾರು ಶ್ರೀ  ದುರ್ಗಾದೇವಿ ಮಂದಿರಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next