Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನ.5ರಂದು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಹೊರಟ್ಟಿಯವರು ನನ್ನ ಮೇಲೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ್ಮಸಾಕ್ಷಿಯಾಗಿ ಆರೋಪ ಮಾಡಿದ್ದನ್ನು ತಮ್ಮ ಪುತ್ರನ ತಲೆ ಮೇಲೆ ಕೈಯಿಟ್ಟು ಇಲ್ಲವೇ ಬಸವಣ್ಣನ ಫೋಟೊ ಮುಟ್ಟಿ ಹೇಳಲಿ.
Related Articles
Advertisement
ಅವರು ಹಲವು ಬಾರಿ ಮನವಿ ಮಾಡಿಕೊಂಡಿದ್ದರಿಂದ ನಾನು ಪೀಠಾಧಿಪತಿಯಾಗಲು ಒಪ್ಪಿಕೊಂಡಿದ್ದೆ. ಅವರು ಈಗ ಮಾಡಿದ ಆರೋಪದಿಂದ ನನಗೆ ಆಘಾತವಾಗಿದೆ ಎಂದರು. ಮೂರುಸಾವಿರ ಮಠದಿಂದ ಒಂದು ನಯಾಪೈಸೆಯನ್ನೂ ನಾನು ಪಡೆದುಕೊಂಡಿಲ್ಲ.
ಮೂರುಸಾವಿರ ಮಠದ ಆಸ್ತಿ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಬಾಳೆಹೊಸೂರು ಮಠದಿಂದ ಹಣವನ್ನು ಮೂರುಸಾವಿರ ಮಠಕ್ಕೆ ನೀಡಿದ್ದೇನೆ. ನನ್ನ ಮಾತನ್ನು ಕೇಳಬೇಕೆಂದು ನಾನು ಯಾರಿಗೂ ಒತ್ತಡ ಹೇರಿಲ್ಲ.
ಸಮಾಜದ ಹಿತಕ್ಕಾಗಿ ನಾನು ಸಲಹೆ ನೀಡುತ್ತೇನೆ. ನನ್ನನ್ನು ಯಾರೂ ಕೂಡ ಮಠದಿಂದ ಹೊರಗೆ ಹಾಕಿಲ್ಲ. ಬಸವರಾಜ ಹೊರಟ್ಟಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಹೊರಟ್ಟಿಯವರು ಮಾಡಿದ ಆರೋಪ ಖಂಡಿಸಿ ನಾನು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಹೋರಾಟವನ್ನೂ ಮಾಡುವುದಿಲ್ಲ.
ಹೊರಟ್ಟಿಯವರು ಯಾಕೆ ಆರೋಪ ಮಾಡಿದ್ದಾರೆಂಬುದನ್ನು ಅವರೇ ಸ್ಪಷ್ಟಪಡಿಸಲಿ, ಇಲ್ಲವೇ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಎಂದರು. ಚುನಾವಣೆ ಬಂದಾಗ ಪ್ರತ್ಯೇಕ ಧರ್ಮ ನೆನಪಾಗಿದೆ: ಕೆಲವು ಜನಪ್ರತಿನಿಧಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರ್ಯಾಲಿ ಆಯೋಜಿಸುತ್ತಿರುವ ಉದ್ದೇಶ ಏನೆಂಬುದು ಎಲ್ಲರಿಗೂ ಗೊತ್ತಿದೆ. ಜನಪ್ರತಿನಿಧಿಗಳು ಸಮಾಜ ಸೇವೆಗಾಗಿ ಕೆಲಸ ಮಾಡಬೇಕೆ ಹೊರತು ಧರ್ಮ ಸ್ಥಾಪನೆ ಮಾಡುವುದು ಅವರ ಕೆಲಸವಲ್ಲ. ಕೆಲವು ಮಠಗಳು ರಾಜಕಾರಣಿಗಳ ಅಖಾಡಾಗಳಾಗಿವೆ.
ರಾಜಕಾರಣಿಗಳು ದೊಡ್ಡ ದೊಡ್ಡ ಮಠಗಳಿಗೆ ಹೋಗುತ್ತಾರೆ. ನಾಡಿನಲ್ಲಿ ಎಷ್ಟೋ ಮಠಗಳಲ್ಲಿ ಮಠಾಧೀಪತಿಗಳಿಗೆ ಊಟಕ್ಕೂ ಗತಿಯಿಲ್ಲದ ಸ್ಥಿತಿಯಿದೆ. ರಾಜಕಾರಣಿಗಳಿಗೆ ಮಠಗಳ ಬಗ್ಗೆ ಕಾಳಜಿಯಿದ್ದರೆ ಇಂಥ ಸಣ್ಣ-ಪುಟ್ಟ ಮಠಗಳ ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿಪಡಿಸಲಿ ಎಂದರು.
ಲಿಂಗಾಯತ ರ್ಯಾಲಿಯಲ್ಲಿ ಪಾಲ್ಗೊಂಡ ಸ್ವಾಮಿಗಳು ರಾಜಕಾರಣಿಗಳ ಬೆನ್ನು ಹತ್ತಿಕೊಂಡು ಹೋಗುತ್ತಾರೆ. ನಾಡಿನಲ್ಲಿ ಕೆಲವರು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸ್ವಾಮಿಗಳಿದ್ದಾರೆ. ಅಂಥವರು ಸೇರಿ ಸಮಾಜ ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ನಾನು ಧರ್ಮ ಪಕ್ಷದ ಸ್ವಾಮಿ.
ಬಸವಜಯಮೃತ್ಯುಂಜಯ ಸ್ವಾಮೀಜಿ ವೀರಶೈವರ ಕುರಿತ ಆಕ್ಷೇಪಾರ್ಹ ಹೇಳಿಕೆ ಖಂಡನೀಯ. ಶ್ರೀಗಳ ಹೇಳಿಕೆಯಿಂದ ನಾಡಿನ ಮಠಾಧೀಶರ ಮನಸಿಗೆ ನೋವಾಗಿದೆ. ಕಾವಿಧರಿಸಿದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.
ಮಂಟೂರ ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ, ಕಮತಗಿಯ ಶ್ರೀ ಹೊಳೆಹುಚ್ಚೇಶ್ವರ ಸ್ವಾಮೀಜಿ, ನರಗುಂದದ ಸಿದ್ದಲಿಂಗ ಶಿವಾಚಾರ್ಯರು, ಅಮ್ಮಿನಗಡದ ಶ್ರೀ ಪ್ರಭುಶಂಕರ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಕಾಶಿನಾಥ ಸ್ವಾಮೀಜಿ, ಕುಂದಗೋಳದ ಬಸವೇಶ್ವರ ಸ್ವಾಮೀಜಿ, ಮಣಕವಾಡದ ಶ್ರೀ ಸಿದ್ದರಾಮ ಸ್ವಾಮೀಜಿ ಇದ್ದರು.
ಜಾಗೃತಿ ಸಮಾವೇಶ: ಡಿ.24ರಂದು ಗದಗನಲ್ಲಿ ನಡೆಯುವ ವೀರಶೈವ ಲಿಂಗಾಯತ ಸಮಾವೇಶವನ್ನು ಯಶಸ್ವಿಗೊಳಿಸಲಾಗುವುದು. ಲಿಂಗಾಯತರ ರ್ಯಾಲಿಗೆ ಪ್ರತಿಯಾಗಿ ಸಮಾವೇಶ ಆಯೋಜಿಸುತ್ತಿಲ್ಲ. ಸಮಾವೇಶದಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಇದು ಸಮಾಜ ಜಾಗೃತಿ ಸಮಾವೇಶ ಎಂದರು.