Advertisement

ಶೂದ್ರರೊಂದಿಗೆ ಸಂಬಂಧ ಬೆಳೆಸಿ ನೋಡೋಣ: ತಿಮ್ಮಾಪುರ

11:20 PM Mar 16, 2020 | Team Udayavani |

ವಿಧಾನ ಪರಿಷತ್ತು: “ಹಿಂದೂರಾಷ್ಟ್ರ ದ ಬಗ್ಗೆ ಮಾತನಾಡುವವರು ಹಿಂದುಳಿದ ವರ್ಗಗಳು ಮತ್ತು ಶೂದ್ರರೊಂದಿಗೆ ಸಂಬಂಧ ಬೆಳೆಸಿ ನೋಡೋಣ?’ ಎಂದು ಕಾಂಗ್ರೆಸ್‌ನ ಆರ್‌.ಬಿ. ತಿಮ್ಮಾಪುರ ಸವಾಲು ಹಾಕಿದರು. ಮೇಲ್ಮನೆಯಲ್ಲಿ ಸೋಮವಾರ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಮಾತನಾಡಿ, ಹಿಂದೂರಾಷ್ಟ್ರ ನಿರ್ಮಿಸಬೇಕಾದರೆ, ನಾವೆಲ್ಲರೂ ಹಿಂದೂ ಎಂಬ ಭಾವನೆ ಬರಬೇಕೆ ಹೊರತು, ಅಸ್ಪೃಶ್ಯ ಎಂದು ಕರೆಯಬಾರದು.

Advertisement

ಕುಂಬಾರರು, ಕುರುಬರು, ಕ್ಷೌರಿಕರು ಸೇರಿ ಎಷ್ಟೋ ಜಾತಿಗಳ ಜನ, ಅವರ (ಮೇಲ್ಜಾತಿಯವರ) ನೆರಳನ್ನೇ ಕಾಣಲಿಲ್ಲ. ಅವರೆಲ್ಲ ಹಿಂದುಗಳೂ ಅಲ್ಲವೇ? ಅಸ್ಪೃಶ್ಯರನ್ನು ಕಾಣುವ ಮನಸ್ಸುಗಳು ಮೊದಲು ಬದಲಾಗಬೇಕು. ಹಿಂದೂ ರಾಷ್ಟ್ರದ ಮಂತ್ರ ಪಠಿಸುವವರು ಶೂದ್ರರೊಂದಿಗೆ ಸಂಬಂಧ ಬೆಳೆಸಿ ನೋಡೋಣ ಎಂದು ಕೇಳಿದರು.

ಆಗ ಆಡಳಿತ ಪಕ್ಷದ ವೈ.ಎ. ನಾರಾಯಣಸ್ವಾಮಿ, “ಮೊದಲು ನೀವು ನಿಮ್ಮ ಉಪಜಾತಿಯೊಂದಿಗೆ ಸಂಬಂಧ ಬೆಳೆಸಲು ಸಿದ್ಧವಾಗಿದ್ದೀರಾ? ನಿಮ್ಮ ಸಮುದಾಯದವರೇ ಉಪಜಾತಿಯೊಂದಿಗೆ ಸಂಬಂಧ ಬೆಳೆಸಲ್ಲ ಬಿಡಿ’ ಎಂದು ಪ್ರತಿ ಸವಾಲು ಹಾಕಿದರು. ಇದಕ್ಕೆ “ನಾನು ರೆಡಿ’ ಎಂದು ತಿಮ್ಮಾಪುರ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಆಡಳಿತ ಪಕ್ಷದ ಆಯನೂರು ಮಂಜುನಾಥ್‌, “ನಿಮ್ಮ ಕಳಕಳಿಗೆ ಸ್ವಾಗತ. ಆದರೆ, ನೀವು ಎರಡು ಬಾರಿ ಸಚಿವರಾಗಿದ್ದವರು. ರಾಜಕೀಯ ಜೀವನದಲ್ಲಿ ಇಷ್ಟು ವರ್ಷದ ಅನುಭವವಿದೆ. ಈ ಹಿನ್ನೆಲೆಯಲ್ಲಿ ಶೂದ್ರ ಸಮುದಾಯದ ಸುಧಾರಣೆ ಅಥವಾ ಅವರನ್ನು ಮೇಲೆತ್ತುವ ನಿಟ್ಟಿನಲ್ಲಿ ನೀವು ಮಾಡಿದ ಯಾವುದಾದರೂ ನಾಲ್ಕು ಘಟನೆಗಳನ್ನು ಸದನದ ಮುಂದೆ ಪ್ರಸ್ತಾಪಿಸಿ’ ಎಂದು ಸವಾಲು ಹಾಕಿದರು.

ಆಗ, “ನನ್ನ ಪ್ರಯತ್ನ ಇದ್ದೇ ಇರುತ್ತದೆ ಬಿಡಿ. ಈ ಪ್ರಯತ್ನದಿಂದಾಗಿಯೇ ಮೂರು ಸಲ ನಾನು ಚುನಾವಣೆಯಲ್ಲಿ ಸೋಲನುಭವಿಸಿದ್ದೇನೆ. ಆದ್ದರಿಂದ ಜಾತಿವಾದಿಗಳ ಮನಃಸ್ಥಿತಿಯ ಬದಲಾವಣೆಯೇ ಇದಕ್ಕೆ ಪರಿಹಾರ’ ಎಂದು ಪುನರುಚ್ಚರಿಸಿದರು.

Advertisement

ದೇಶದಲ್ಲಿ ಒಂದು ಕಡೆ ರಾಮಮಂದಿರ ಕಟ್ಟಲು ಒಂದು ವರ್ಗ ತುದಿಗಾಲಲ್ಲಿ ನಿಂತಿದೆ. ಮತ್ತೂಂದೆಡೆ ಮಂದಿರದೊಳಗೆ ಅಸ್ಪೃಶ್ಯರನ್ನು ಬಿಟ್ಟುಕೊಳ್ಳದಂತಹ ಸ್ಥಿತಿಯಿದೆ. ದೇಶದಲ್ಲಿ ಸಂವಿಧಾನ ಜಾರಿಯಾಗಿ 7 ದಶಕ ಕಳೆದರೂ, ಇಂದಿಗೂ ಅಸ್ಪೃಶ್ಯತೆ, ಅಸಮಾನತೆ ಜೀವಂತವಾಗಿದೆ.
-ಆರ್‌.ಬಿ. ತಿಮ್ಮಾಪುರ, ಕಾಂಗ್ರೆಸ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next