ಕಲ್ಪನೆಯ ಕವಲು ದಾರಿಯಲ್ಲಿ ಪ್ರೀತಿಯ ಮೊಗ್ಗು ಚಿಗುರೊಡೆಯಿತು, ಪ್ರೀತಿಯ ನಿರೀಕ್ಷೆಯಲ್ಲಿ ಮನ ಕಾಯುತ್ತಿರುವಾಗ ಹುಣ್ಣಿಮೆ ಚಂದ್ರನಂತೆ, ಬದುಕಿನ ಭರವಸೆಯಂತೆ ಕಂಡೆ ನೀನು. ನಿನ್ನ ಆ ನೋಟ, ಅಂತ್ಯವಿಲ್ಲದ ಮಾತು, ನೀ ಮುಡಿವ ಆ ಮಲ್ಲಿಗೆಯ ಪರಿಮಳಕ್ಕೆ ನಾನಾಗಲೇ ಮರುಳಾಗಿದ್ದೆ. ಬದುಕು ಅನ್ನುವುದಿದ್ದರೆ ಅದು ನಿನ್ನ ಜೊತೆಗೆ ಎಂದು ತೀರ್ಮಾನಿಸಿದ್ದೆ.
ದಿನ ಕಳೆದಂತೆ, ನೀನು ಉಸಿರಿಗೆ ಉಸಿರಾದೆ. ನಾ ಕಾಣುವ ಕನಸಿಗೆಲ್ಲಾ ನೀ ಸಾಕ್ಷಿಯಾದೆ. ನನ್ನ ಪ್ರೀತಿಗೆ ಸ್ಫೂರ್ತಿಯಾದೆ. ಕತ್ತಲು ಕವಿದ ಬದುಕಿಗೆ ಆರದ ದೀಪದಂತೆ ನೀ ಬಂದೆ.ಪ್ರತಿಕ್ಷಣವೂ ನಿನ್ನ ಜೊತೆಯಿರಬೇಕು, ಮಾತಾಡಬೇಕು, ಬದುಕಿನಡೀ ನಿನಗೆ ಆಸರೆಯಾಗಿ ನಿಲ್ಲಬೇಕು. ನಿನ್ನ ಕಣ್ಣಂಚಿನಲ್ಲಿ ಹನಿ ನೀರೂ ಬರದ ಹಾಗೆ ನೋಡಿಕೊಳ್ಳಬೇಕೆಂಬ ಆಸೆ ನನ್ನದು. ಭಾವನಾತ್ಮಕ ಬದುಕಿನಲ್ಲಿ ನೂರಾರು ಕನಸನ್ನು ಕಟ್ಟಿ, ಬೆಟ್ಟದಷ್ಟು ಆಸೆ ಹೊತ್ತು ಸಾಗುತ್ತಿದ್ದೆ, ಪ್ರೀತಿಯ ವಿಷಯವನ್ನು ನಿನಗೆ ತಿಳಿಸಬೇಕೆಂದಾಗಲೆಲ್ಲ ಹೃದಯ ಹಿಂದೇಟು ಹಾಕುತ್ತಿತ್ತು, ಕಾರಣ ನೀನೇನಾದರೂ ತಿರಸ್ಕರಿಸಿದರೆ? ಎಂಬ ಭಯ ನನ್ನಲ್ಲಿತ್ತು.
ಮುಂದೊಂದು ದಿನ ಧೈರ್ಯ ಮಾಡಿ ಹೇಗೋ ಹೇಳಿಯೇ ಬಿಟ್ಟೆ: “ಸ್ವಲ್ಪ ಕಾಲಾವಕಾಶ ಕೊಡು ಯೋಚನೆ ಮಾಡೋಕೆ’ ಎಂಬ ಉತ್ತರ ಬಂತು. ಅಂದು ನನ್ನೆಲ್ಲಾ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಿತ್ತು. ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಆದರೂ ಇನ್ನೂ ಉತ್ತರ ಸಿಕ್ಕಿಲ್ಲ. ಅದೆಷ್ಟೋ ಬಾರಿ ಕೇಳಿದರೂ ‘ಹೇಳುವೆ ಹೇಳುವೆ’ ಎಂಬ ಶಬ್ಧ ಬಿಟ್ರೆ ಬೇರೇನೂ ಮಾತಿಲ್ಲ! ಗೆಳತಿ, ನಾ ನಿನ್ನ ಪ್ರೀತಿಯನ್ನ ಬಿಟ್ಟು ಬೇರೇನೂ ಬಯಸುತ್ತಿಲ್ಲ. ಇನ್ನೂ ಎಷ್ಟು ದಿನ ಅಂತ ಕಾಯಿಸುತ್ತೀಯಾ? ನನ್ನ ತಾಳ್ಮೆ ಪರೀಕ್ಷಿಸುತ್ತಿರುವೆಯಾ? ಇಲ್ಲ ನನ್ನ ಪ್ರೀತಿಯಾ? ನೀನು ನನ್ನ ಪ್ರೀತಿಯ ವಿಚಾರದಲ್ಲಿ ಇನ್ನೂ ಕಣ್ಮುಚ್ಚಿ ಯೋಚಿಸುತ್ತಲೇ ಇದ್ದೀಯಾ, ಏನು ಕತೆ?
ಕೊನೆಯದಾಗಿ, ಈ ಜೀವ ಕಣ್ಮುಚ್ಚುವವರೆಗೂ ನಿನ್ನ ಉತ್ತರಕ್ಕಾಗಿ ಕಾಯುವೆ, ನೀನು ಒಪ್ಪಿಕೊಂಡರೆ ಭಿಕ್ಷುಕನಿಗೆ ಸಿಕ್ಕ ಮೃಷ್ಠಾನ ಭೋಜನ ಸಿಕ್ಕ ಹಾಗೆ, ಹಾಲು-ಜೇನು ಸವಿದ ಹಾಗೆ. ಒಪ್ಪದೆ ಹೋದರೆ, ಕರುಳು ಕಿತ್ತು ಬರುತ್ತದೆ. ಹೃದಯ ಕಣ್ಣೀರು ಹಾಕುತ್ತೆ. ಮನಸ್ಸು ಮೌನವಾಗಿ ಉಸಿರು ನಿಲ್ಲುವಂತಾಗುತ್ತದೆ. ಬದುಕುವುದೇ ಈ ಜೀವ ನೀನಿಲ್ಲದ ಜೀವನದಲ್ಲಿ?.
ವೀರೇಶ್ ಎ. ದೊಡ್ಡಮನಿ.