Advertisement

ಕಾಂಗ್ರೆಸ್‌-ಜೆಡಿಎಸ್‌ ಎರಡಂಕಿ ಸ್ಥಾನ ಗಳಿಸಲಿ ನೋಡೋಣ: ಈಶ್ವರಪ್ಪ 

01:39 AM Mar 21, 2019 | |

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ರಾಜ್ಯದಲ್ಲಿ ಎರಡಂಕಿ ಸ್ಥಾನ ಮುಟ್ಟಲಿ ನೋಡೋಣ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮೈತ್ರಿ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.

Advertisement

ರಾಜ್ಯದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಗಳಿಸಲು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್‌- ಜೆಡಿಎಸ್‌ ನಾಯಕರು ಉಡಾಫೆ, ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಬಿಜೆಪಿ ಎರಡಂಕಿ ದಾಟಲು ಬಿಡುವುದಿಲ್ಲ, ಬೇಲಿ ಹಾಕುತ್ತೇನೆ ಎಂದಿದ್ದಾರೆ. ಜೆಡಿಎಸ್‌ನವರು ಮೊದಲು ತಮ್ಮ ಎರಡು ಸ್ಥಾನ ಉಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ರಾಜ್ಯದ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸಲು ಜೆಡಿಎಸ್‌ನವರು ಪ್ರಯತ್ನಿಸುತ್ತಾರೆ. ಜೆಡಿಎಸ್‌ ಸ್ಪರ್ಧಿಸುವ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ಸೋಲಿಸಲು ಪ್ರಯತ್ನ ನಡೆಸುತ್ತಾರೆ. ಮೇಲ್ನೋಟಕ್ಕಷ್ಟೇ ಉಭಯ ಪಕ್ಷಗಳ ನಾಯಕರು ನಗು ನಗುತ್ತಾ  ಒಗ್ಗಟ್ಟಿನಿಂದಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಷ್ಟ್ರೀಯ ವಿಚಾರಧಾರೆ, ಕಾರ್ಯಕರ್ತರ ಸಂಘಟನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ವಿಷಯಗಳನ್ನು ಇಟ್ಟುಕೊಂಡು ರಾಜ್ಯದಲ್ಲಿ ಚುನಾವಣೆ ಎದುರಿಸಲಾಗುವುದು. ನಾವು 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು.

ಸ್ಪೀಕರ್‌ ಶೀಘ್ರ ತೀರ್ಮಾನ ಕೈಗೊಳ್ಳಲಿ
ಡಾ| ಉಮೇಶ್‌ ಜಾಧವ್‌ ಅವರ ರಾಜೀನಾಮೆ ಬಗ್ಗೆ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶೀಘ್ರವೇ ತಮ್ಮ ತೀರ್ಮಾನ ಕೈಗೊಳ್ಳಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.
ಸ್ಪೀಕರ್‌ ರಮೇಶ್‌ ಕುಮಾರ್‌ ಕಾನೂನು ತಜ್ಞರು. ಅವರು ಇನ್ನು ಎಷ್ಟು ಪುಸ್ತಕ ಓದಬೇಕೋ ಗೊತ್ತಿಲ್ಲ. ಇಂತಿಷ್ಟು ದಿನಗಳಲ್ಲಿ ಮುಗಿಸುತ್ತೇನೆ ಎಂದು ಹೇಳಲಿ. ಅವರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅವರು ಪ್ರಯತ್ನ ಮಾಡುತ್ತಿರಬಹುದು, ಬೇಗ ಮುಗಿಸಲಿ ಎಂದು ಆಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next