Advertisement

Mangaluru ಅಧಿವೇಶನದಲ್ಲಿ ಜಮೀರ್‌ ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ: ವಿಜಯೇಂದ್ರ ಸವಾಲು

11:42 PM Nov 22, 2023 | Team Udayavani |

ಮಂಗಳೂರು: ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ಜಾತಿ, ಧರ್ಮದ ಬಣ್ಣ ಹಚ್ಚಿದ ಸಚಿವ ಜಮೀರ್‌ ಅಹ್ಮದ್‌ ಅವರಿಂದ ಕೂಡಲೇ ರಾಜೀನಾಮೆ ಪಡೆಯದೆ ಹೋದರೆ ಡಿ. 4ರಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಅವರು ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.

Advertisement

ಆಕ್ಷೇಪಾರ್ಹ ಹೇಳಿಕೆ ನೀಡಿರುವ ಜಮೀರ್‌ ಅವರನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ತಪ್ಪು. ಸಿಎಂ ಈಗಾಗಲೇ ಅವರನ್ನು ಕರೆದು ರಾಜೀನಾಮೆ ಪಡೆಯಬೇಕಿತ್ತು ಎಂದರು.

ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡ ಸರಕಾರವಿದ್ದರೆ ಅದು ರಾಜ್ಯದ ಕಾಂಗ್ರೆಸ್‌ ಸರಕಾರ. ರೈತ ವಿರೋಧಿ, ಬಡವರ ವಿರೋಧಿ ಹಾಗೂ ದಲಿತ ವಿರೋಧಿ ಸರಕಾರ ಇದಾಗಿದೆ. ಬರಗಾಲ ಇದ್ದರೂ ಅದನ್ನು ನಿಭಾಯಿಸಲು ಸರಕಾರ ವಿಫ‌ಲವಾಗಿದೆ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ, ಜವಾಬ್ದಾರಿ ಮರೆತಿರುವ ಭ್ರಷ್ಟ, ದುಷ್ಟ ಸರಕಾರದ ಕಿವಿಹಿಂಡುವ ಕೆಲಸವನ್ನು ಮುಂದಿನ ಅಧಿವೇಶನದಲ್ಲಿ ಬಿಜೆಪಿ ಮಾಡಲಿದೆ ಎಂದರು.

ರೈತರು ನೀರಿಲ್ಲದೆ ಕಂಗೆಟ್ಟಿರುವಾಗ ಮುಖ್ಯಮಂತ್ರಿ ಕೋಟಿಗಟ್ಟಲೆ ಖರ್ಚು ಮಾಡಿ ಮನೆ ನವೀಕರಣ ಮಾಡಿದರೆ ಸಚಿವರು ಹೊಸ ಕಾರು ಖರೀದಿಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಹೋದವರು ಮತ್ತೆ ಬರುತ್ತಾರೆ
ಲೋಕಸಭೆಯ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದು ನಮ್ಮ ಗುರಿ, ಯಾರೆಲ್ಲ ಬಿಟ್ಟು ಹೋಗಿದ್ದಾರೋ ಅವರೆಲ್ಲ ಮತ್ತೆ ಪಕ್ಷಕ್ಕೆ ಬರುತ್ತಾರೆ, ಯಾವುದೇ ಶಾಸಕರು, ಮುಖಂಡರು ಇನ್ನು ಪಕ್ಷ ಬಿಡುವುದಿಲ್ಲ ಎಂದರು.

Advertisement

ಲಕ್ಷ್ಮಣ ಸವದಿ ಪಕ್ಷಕ್ಕೆ ಮತ್ತೆ ಬರುವುದಿಲ್ಲ, ಪಲ್ಲಕ್ಕಿ ಹೊರುವ ಕೆಲಸ ಮಾಡುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರನ್ನು ನಾವಿನ್ನೂ ಪಕ್ಷಕ್ಕೆ ಕರೆದೇ ಇಲ್ಲ ಎಂದರಲ್ಲದೆ ಪುತ್ತೂರಲ್ಲಿ ಅರುಣ್‌ ಪುತ್ತಿಲ ಅವರ ಬಗ್ಗೆಯೂ ವರಿಷ್ಠರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಜಾತಿ ಗಣತಿ ದುರ್ಬಳಕೆಗೆ ವಿರೋಧ
ಬಿಜೆಪಿಯಿಂದ ಜಾತಿ ಗಣತಿಗೆ ವಿರೋಧವಿಲ್ಲ, ಆದರೆ ಅದನ್ನು ದುರ್ಬಳಕೆ ಮಾಡುವುದಕ್ಕೆ ವಿರೋಧವಿದೆ ಎಂದು ವಿಜಯೇಂದ್ರ ಹೇಳಿದರು. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿರುವಾಗ ಜಾತಿ ಗಣತಿ ಮುಗಿದಿತ್ತು. ಆಗ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತ್ತೆ ಜಾತಿ ಗಣತಿ ವಿಷಯ ಪ್ರಸ್ತಾವಿಸುತ್ತಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಜಾತಿ ಗಣತಿ ಬಳಸಲು ಹೊರಟರೆ ಅದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next