Advertisement

ಮಾತೃಭಾಷೆ ಉಳಿಸಿ ಬೆಳೆಸೋಣ: ನದಾಫ್‌

11:15 AM Mar 31, 2018 | |

ಸೊಲ್ಲಾಪುರ: ಪ್ರತಿಯೊಬ್ಬ ಕನ್ನಡಿಗರು ತಮ್ಮ ಮಾತೃಭಾಷೆ ಉಳಿಸಿ, ಬೆಳೆಸಲು ಪ್ರಯತ್ನಿಸಬೇಕು. ನಾವೆಲ್ಲಿದ್ದರೂ ಕನ್ನಡಿಗರು ಎನ್ನುವ ಮನೋಭಾವ ನಮ್ಮದಾಗಬೇಕು ಎಂದು ಅಫಜಲಪುರ ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ. ನದಾಫ್‌ ಹೇಳಿದರು. 

Advertisement

ಅಕ್ಕಲಕೋಟ ತಾಲೂಕಿನ ದುಧನಿಯ ಶಾಂತಲಿಂಗೇಶ್ವರ ವಿರಕ್ತಮಠದಲ್ಲಿ ನಡೆದ ಅಕ್ಕಲಕೋಟ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. 12ನೇ ಶತಮಾನದ ಸೊನ್ನಲಿಗೆ ಶರಣ ಸಿದ್ಧರಾಮೇಶ್ವರರು ಕನ್ನಡದಲ್ಲಿಯೇ ಸಾವಿರಾರು ವಚನ ಬರೆಯುವ ಮೂಲಕ ಈ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ್ದಾರೆ. ಅಲ್ಲದೆ ಗುಡ್ಡಾಪುರದ ದಾನೇಶ್ವರಿ ಮತ್ತು ಪಂಢರಪುರದ ವಿಠ್ಠಲನು ಮೂಲತಃ ಕರ್ನಾಟಕದವರಾಗಿದ್ದು ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಮಾತನಾಡಿ, ಇದೇ ಮೊದಲಬಾರಿಗೆ ಮಹಾರಾಷ್ಟ್ರದ ಮುಂಬೈ, ದಕ್ಷಿಣ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟದಲ್ಲಿ ಕಸಾಪ ತಾಲೂಕು ಘಟಕ ರಚಿಸಲಾಗಿದೆ. ನಾವೆಲ್ಲರೂ ಕಸಾಪ ವತಿಯಿಂದ ಕನ್ನಡ ಭಾಷೆ ಬೆಳೆಸಲು ಪ್ರಯತ್ನಿಸೋಣ ಎಂದರು.  ಈ ಭಾಗದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಹತ್ವವನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿಲ್ಲ. ಅಷ್ಟೆ ಅಲ್ಲದೆ ಇಲ್ಲಿನ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕಾಮಟ್ಟ ಕುಸಿಯುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ಪಾಲಕರು ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿದ್ದದು ಧನಿ ವಿರಕ್ತಮಠದ ಪೂಜ್ಯ ಡಾ| ಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಮನೆ-ಮನೆಗಳಲ್ಲಿ ಮಠ-ಮಂದಿರಗಳಲ್ಲಿ ಕನ್ನಡ ಮಾತನಾಡುವುದರಿಂದ ಕನ್ನಡ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಕನ್ನಡಿಗರು ತಮ್ಮ ಮನೆಗಳಲ್ಲಿ ಮಾತೃ ಭಾಷೆಯಲ್ಲಿ ಮಾತನಾಡಬೇಕು. ಕನ್ನಡ ಭಾಷೆ ನಮ್ಮೇಲ್ಲರ ಮಾತೃ ಭಾಷೆಯಾಗಿದ್ದು, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಮಾತೃ ಭಾಷೆಯನ್ನು ಗೌರವಿಸಬೇಕು. ಅದರ ಜೊತೆಗೆ ಬೇರೆ ಭಾಷೆಗಳನ್ನು ಪ್ರೀತಿಸಬೇಕು ಎಂದರು.

ಅಕ್ಕಲಕೋಟ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ ಮಾತನಾಡಿ, ಹೆಣ್ಣಿಗೆ ಮಂಗಳಸೂತ್ರ ಏಷ್ಟು ಮುಖ್ಯವೋ ಅಷ್ಟೇ ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡ ಭಾಷೆ ಬಹಳ ಮಹತ್ವದ್ದಾಗಿದೆ. ನಮ್ಮ ದೇಹ ಮಹಾರಾಷ್ಟ್ರದಲ್ಲಿದ್ದರೂ ಮನಸ್ಸು ಮಾತ್ರ ಕರ್ನಾಟಕದಲ್ಲಿದೆ. ನಾವೆಲ್ಲಿದ್ದರೂ ಕನ್ನಡಿಗಕ್ಕಾಗಿ ಹೊರಾಡುತ್ತೇವೆ. ನಮಗೆ ಕರ್ನಾಟಕ ಬಿಟ್ಟಿರಬಹುದು. ಆದರೆ ನಾವು ಮಾತ್ರ ಕನ್ನಡ ಬಿಟ್ಟಿಲ್ಲ. ಕಸಾಪ ಮೂಲಕ ಕನ್ನಡ ಸೇವೆ ಮಾಡಲು ಅವಕಾಶ ದೊರೆತಿದೆ ಎಂದು ಹೇಳಿದರು. 

Advertisement

ಅಫಜಲಪುರದ ಪೂಜ್ಯ ಶಿವಲಿಂಗೇಶ್ವರ ಶ್ರೀ, ದುಧನಿಯ ಶ್ರೀಗಳು ಅಕ್ಕಲಕೋಟ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿದರು. ಆಳಂದ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಕರೆ, ಸುಭಾಷ ಪರಮಶೆಟ್ಟಿ, ಸಿದ್ಧಾರಾಮ ಯಗದಿ, ರಾಜಶೇಖರ ಮಸೂತಿ, ಬಸವೇಶ್ವರ ಕರಜಗಿ, ನರಸಪ್ಪ ಬಿರಾಜದಾರ, ಬಸವರಾಜ ಆಲಮದ, ದಯಾನಂದ ಬಮನಳ್ಳಿ, ಪ್ರಕಾಶ ಗೊಬ್ಬುರ, ಪ್ರಕಾಶ ಪ್ರದಾನ, ರಾಜಶ್ರೀ ಮಸೂತಿ ಮುಖ್ಯ ಅತಿಥಿಗಳಾಗಿದ್ದರು. 

ಶಿವಚಲಕುಮಾರ ಸಾಲಿಮಠ ಸ್ವಾಗತಿಸಿದರು. ಗದಗಯ್ಯ ಹಿರೇಮಠ ನಿರೂಪಿಸಿದರು. ಗಿರಮಲ್ಲಪ್ಪ ಭರಮಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next